Advertisement

ಕಾಮಗಾರಿ ಗುಣಮಟ್ಟ ಪರೀಕ್ಷಿಸಿ

01:32 PM May 26, 2019 | Team Udayavani |

ಕೋಲಾರ: ನರೇಗಾ ಜತೆಗೆ ಸಾಮಾಜಿಕ ಭದ್ರತಾ ಯೋಜನೆಯಡಿ ಬರುವ ವೃದ್ಧಾಪ್ಯ, ಅಂಗವಿಕಲ, ವಿಧವಾ, ಸಂಧ್ಯಾ ಸುರಕ್ಷಾ, ಪಿಂಚಣಿ ಯೋಜನೆಗಳ ಅನುಷ್ಠಾನದಲ್ಲಿನ ಲೋಪದೋಷಗಳ ಕುರಿತು ಸಾಮಾಜಿಕ ಪರಿಶೋಧನೆ ನಡೆಸುವಂತೆ ಗ್ರಾಪಂ ಸಂಪನ್ಮೂಲ ವ್ಯಕ್ತಿಗಳಿಗೆ ಜಿಪಂ ಸಹಾಯಕ ಯೋಜನಾ ನಿರ್ದೇಶಕ ಮುನಿರಾಜು ಸಲಹೆ ನೀಡಿದರು.

Advertisement

ನಗರದ ಜಿಪಂ ಸಭಾಂಗಣದಲ್ಲಿ ಜಿಲ್ಲೆಯ ಐದು ತಾಲೂಕುಗಳ ಗ್ರಾಪಂ ಸಂಪನ್ಮೂಲ ವ್ಯಕ್ತಿಗಳಿಗಾಗಿ ಹಮ್ಮಿಕೊಂಡಿದ್ದ ಸಾಮಾಜಿಕ ಪರಿಶೋಧನಾ ಕುರಿತ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಉದ್ಯೋಗಖಾತ್ರಿ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಗಳ ಗುಣಮಟ್ಟ, ಉದ್ಯೋಗ ಸೃಜನ, ಬಿಡುಗಡೆಯಾಗಿರುವ ಅನುದಾನಕ್ಕೆ ತಕ್ಕಂತೆ ಕಾಮಗಾರಿ ನಡೆದಿರುವ ಕುರಿತು ಖಾತ್ರಿ ಮತ್ತಿತರ ಅಂಶಗಳ ಕುರಿತು ಗ್ರಾಪಂ ಸಂಪನ್ಮೂಲ ವ್ಯಕ್ತಿಗಳು ಪರಿಶೋಧನೆ ನಡೆಸಿ ವರದಿ ನೀಡಬೇಕಾಗುತ್ತದೆ ಎಂದು ವಿವರಿಸಿದರು.

ಇದೀಗ ಹೊಸದಾಗಿ ಸರ್ಕಾರ ನಿಮಗೆ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳ ಪರಿಶೋಧನೆಯ ಹೊಸ ಜವಾಬ್ದಾರಿ ವಹಿಸಿದ್ದು, ಸಮರ್ಪಕವಾಗಿ ನಿರ್ವಹಿಸಿ ಎಂದು ಕಿವಿಮಾತು ಹೇಳಿದರು.

ಗ್ರಾಮಸಭೆಯಲ್ಲಿ ಅನುಮೋದಿಸಿ: ಕಾರ್ಯಾಗಾರದಲ್ಲಿ ಮುಖ್ಯ ತರಬೇತುದಾರರಾಗಿ ಆಗಮಿಸಿರುವ ಜಿಲ್ಲಾ ಸಂಯೋಜಕ ಎ.ಜಿ.ಬೀರೇಶ್‌, ಪ್ರತಿ ಗ್ರಾಪಂಗೂ ನೇಮಕಗೊಂಡಿರುವ ಸಂಪನ್ಮೂಲ ವ್ಯಕ್ತಿಗಳು ನರೇಗಾ ಯೋಜನೆಯ ಪ್ರಗತಿ, ಕೈಗೊಂಡಿರುವ ಕಾಮಗಾರಿಗಳ ವಿವರವಾದ ವರದಿಯನ್ನು ಗ್ರಾಮಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದು ಅದರ ಪ್ರತಿಗಳನ್ನು ಗ್ರಾಪಂ, ತಾಪಂ, ಜಿಪಂಗೆ ಮತ್ತು ಒಂದು ಪ್ರತಿಯನ್ನು ಬೆಂಗಳೂರಿನ ಸಾಮಾಜಿಕ ಪರಿಶೋಧನಾ ನಿರ್ದೇಶನಾಲಯಕ್ಕೆ ಕಳುಹಿಸಬೇಕು ಎಂದು ತಿಳಿಸಿದರು.

ಇದೀಗ ಹೊಸದಾಗಿ ಸಾಮಾಜಿಕ ಭದ್ರತಾ ಯೋಜನೆಗಳ ಪರಿಶೋಧನೆಯನ್ನು ನೀವು ನಡೆಸಬೇಕಾಗಿದ್ದು, ಇದು ಸಮರ್ಪಕವಾಗಿ ಫಲಾನುಭವಿಗೆ ತಲುಪುತ್ತಿದೆಯೇ, ಲೋಪಗಳಿವೆಯೇ ಎಂಬುದರ ಕುರಿತು ಗಮನಹರಿಸಿ ಎಂದರು.

Advertisement

ಪರಿಶೋಧನೆ ನಡೆಸಿ: ಜತೆಗೆ 14ನೇ ಹಣಕಾಸು ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಗಳ ಪರಿಶೋಧನೆ ಮಾಡಬೇಕಾಗಿದ್ದು, ಕಾಮಗಾರಿಯ ಗುಣಮಟ್ಟ, ಜಾಬ್‌ಕಾರ್ಡ್‌ ನೀಡಿಕೆ, ಖಾತೆಗೆ ಹಣ ಸಂದಾಯ, ಉದ್ಯೋಗ ಸೃಜನಗೊಂಡಿರುವ ಕುರಿತು ಮತ್ತು ಕಾಮಗಾರಿಯನ್ನು ಕೂಲಿ ಕಾರ್ಮಿಕರಿಂದಲೇ ಮಾಡಿಸಿದ್ದಾರೆಯೇ ಎಂಬುದರ ಕುರಿತು ಪರಿಶೋಧನೆ ನಡೆಸಿ ಎಂದು ವಿವರಿಸಿದರು.

ಗುಣಮಟ್ಟ ನೋಡಿ ವರದಿ ತಯಾರಿಸಿ: ನರೇಗಾ ಕಾಮಗಾರಿಗಳ ಪರಿಶೋಧನೆ ನಡೆಸುವಾಗ ಎಲ್ಲೋ ಕುಳಿತು ಯಾರೋ ಹೇಳಿದ್ದನ್ನು ಬರೆದು ವರದಿ ತಯಾರಿಸಬೇಡಿ, ನೀವೇ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ನೀಡಿರುವ ಅನುದಾನ, ಉದ್ಯೋಗ ಸೃಷ್ಟಿ, ಕಾಮಗಾರಿಯ ಗುಣಮಟ್ಟ ನೋಡಿ ವರದಿ ತಯಾರಿಸಿ ಎಂದು ಹೇಳಿದರು.

ಈ ಪರಿಶೋಧನೆ ಮುಗಿದ ನಂತರ ವರದಿ ತಯಾರಿಸಿ ಆ ವರದಿಯನ್ನು ಗ್ರಾಮಸಭೆಗಳಲ್ಲಿ ಅನುಮೋದನೆ ಪಡೆಯತಕ್ಕದ್ದು ಎಂದು ತಿಳಿಸಿದರು. ಸಭೆಯಲ್ಲಿ ತಾಲೂಕು ಸಂಯೋಜಕರಾದ ಬಂಗಾರಪೇಟೆಯ ರವಣಪ್ಪ, ಮುಳಬಾಗಿಲಿನ ವೆಂಕಟರಮಣ, ಕೋಲಾರದ ಭಾಷಾ, ಮಾಲೂರಿನ ಆಯಿಷಾ ಸುಲ್ತಾನ್‌, ಶ್ರೀನಿವಾಸಪುರದ ಶ್ರೀನಿವಾಸ್‌ ಮತ್ತಿತರರು ಹಾಜರಿದ್ದು, ಐದು ತಾಲೂಕುಗಳ ನೂರಕ್ಕೂ ಹೆಚ್ಚು ಗ್ರಾಪಂ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next