Advertisement

ವಸ್ತು ಖರೀದಿಸುವ ಮುನ್ನ ಗುಣಮಟ್ಟ ಪರೀಕ್ಷಿಸಿ

07:20 AM Feb 10, 2019 | Team Udayavani |

ರಾಮನಗರ: ಗ್ರಾಹಕರು ಯಾವುದೇ ವಸ್ತುಗಳನ್ನು ಖರೀದಿಸಿದ್ದರೂ, ಅದಕ್ಕೆ ಸಂಬಂಧಿಸಿದಂತೆ ತೆರಿಗೆಯನ್ನು ಪಾವತಿಸಿ, ಅಧೀಕೃತ ರಸೀದಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು ಎಂದು ಒಂದನೇ ಹೆಚ್ಚುವರಿ ಮತ್ತು ಸತ್ರ ನ್ಯಾಯಾಧೀಶರಾದ ನ್ಯಾ. ಉಮೇಶ್‌ ಮೂಲಿಮನಿ ಸಲಹೆ ನೀಡಿದರು.

Advertisement

ನಗರದ ಎಂ.ಎಚ್. ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಜಿಲ್ಲಾಡಳಿತ, ಜಿಪಂ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಕಾನೂನು ಮಾಪನ ಶಾಸ್ತ್ರ ಇಲಾಖೆ ಹಾಗೂ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದಿಂದ ನಡೆದ ರಾಷ್ಟ್ರೀಯ ಗ್ರಾಹಕರ ದಿನಾಚರಣೆಯಲ್ಲಿ ಮಾತನಾಡಿ, ಗ್ರಾಹಕರು ಮಾರುಕಟ್ಟೆಯಲ್ಲಿ ವಸ್ತು ಖರೀದಿಸುವ ಮುನ್ನ ಅದರ ಗುಣಮಟ್ಟ, ಉಪಯೋಗಿಸುವ ಅವಧಿ ಮುಂತಾದ ಅಂಶಗಳ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಯಾವುದೇ ವಸ್ತು ಖರೀದಿಸುವ ಮುನ್ನ ಗ್ರಾಹಕರು ತಮ್ಮ ಜವಾಬ್ದಾರಿ, ಜಾಣ್ಮೆ ಉಪಯೋಗಿಸಿ ಎಂದರು.

ವಸ್ತು ಖರೀದಿಯಲ್ಲಿ ವಿವೇಚನೆ ಇರಲಿ: ಲೇಖಕಿ ಹಾಗೂ ಸಂಪನ್ಮೂಲ ವ್ಯಕ್ತಿ ಕೆ.ಎಸ್‌. ನಾಗರತ್ನ ಚಂದ್ರಶೇಖರ್‌ ಮಾತನಾಡಿ, ಕೃಷಿ ಉತ್ಪನ್ನ ಮತ್ತು ಎಲೆಕ್ಟ್ರಾನಿಕ್‌ ವಸ್ತುಗಳನ್ನು ಖರೀದಿಸುವ ಮುನ್ನ ತಾವು ನೀಡುವ ಹಣಕ್ಕೆ ತಕ್ಕ ಮೌಲ್ಯ ದೊರೆಯುತ್ತದೆಯೇ ಎಂಬ ವಿವೇಚನೆ ಇರಬೇಕು. ಮಾರಾಟಗಾರರಿಂದ ತಾವು ಮಾರುವ ವಸ್ತುಗಳ ಬಗ್ಗೆ ಗ್ರಾಹಕರಿಗೆ ಸರಿಯಾದ ಮಾರ್ಗದರ್ಶನ ದೊರೆಯಬೇಕು. ಇಲ್ಲದಿದ್ದಲ್ಲಿ ಗ್ರಾಹಕರು ಮೋಸ ಹೋಗುವ ಸಾಧ್ಯತೆಗಳಿರುತ್ತವೆ. ವಂಚನೆಯಾದಲ್ಲಿ ಗ್ರಾಹಕರು ದನಿ ಎತ್ತಬೇಕು. ಗ್ರಾಹಕ ಕೇಂದ್ರದಲ್ಲಿ ರಶೀದಿ ಮತ್ತು ದಾಖಲೆ ಇಟ್ಟುಕೊಂಡು ದಾವೇ ಹೂಡುವ ಮೂಲಕ ನ್ಯಾಯ ಪಡೆದುಕೊಳ್ಳಬೇಕು ಎಂದರು.

ಪ್ರತಿ ವಿಷಯದಲ್ಲೂ ಜಾಗೃತರಾಗಿ: ವಕೀಲ ಗೋಪಾಲಸ್ವಾಮಿ ಮಾತನಾಡಿ, ಗ್ರಾಹಕ ಕಾಯ್ದೆಯಡಿ ವಸ್ತು ಖರೀದಿಯಲ್ಲಿ ವಂಚನೆಗೊಳಗಾದವರು ಗ್ರಾಹಕ ಕೇಂದ್ರಕ್ಕೆ ಪತ್ರ ಬರೆದು, ಕಂಪನಿ ವಿಳಾಸ, ಖರೀದಿಸಿದ ರಶೀದಿಯನ್ನು ಲಗತ್ತಿಸಿ ದಾವೆ ಹೂಡಬಹುದು. ಪ್ರತಿಯೊಂದು ವಿಷಯದಲ್ಲೂ ಜನರು ಜಾಗೃತರಾಗುವುದು ಅವಶ್ಯ ಎಂದು ಹೇಳಿದರು.

ಗ್ರಾಹಕರ ಸೇವೆಗೆ ಕಾರ್ಯಕ್ರಮ: ಕನಕಪುರದ ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ವ್ಯವಸ್ಥಾಪಕ ಡಾ. ಮಂಜುನಾಥ್‌ ಮಾತನಾಡಿ, ಮನುಷ್ಯ ಹುಟ್ಟಿನಿಂದಲೇ ಗ್ರಾಹಕನಾಗಿಯೇ ಇರುತ್ತಾನೆ. ಸರ್ಕಾರ ಗ್ರಾಹಕರ ಸೇವೆಗೆ ಹಲವು ಕಾರ್ಯಕ್ರಮ ಹಮ್ಮಿಕೊಂಡಿದೆ. ವಂಚನೆಗೊಳಗಾಗಿ ನ್ಯಾಯ ಪಡೆಯುಲು ಬಯಸುವ ಗ್ರಾಹಕರ ಸಂಖ್ಯೆ ಕಡಿಮೆಯಾಗುತ್ತಿದೆ. ಗ್ರಾಹಕರು ಜಾಗೃತರಾಗಿ ವಂಚನೆ ಪ್ರಕರಣಗಳಲ್ಲಿ ನ್ಯಾಯ ಪಡೆಯಬೇಕು ಎಂದು ಸಲಹೆ ನೀಡಿದರು.

Advertisement

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಬಿ.ಎಸ್‌. ಹೊನ್ನಸ್ವಾಮಿ, ಎಂ.ಎಚ್. ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಚ್.ಚಂದ್ರಶೇಖರ್‌, ಗ್ರಾಹಕರ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕ ಪುಟ್ಟಸ್ವಾಮಿ, ಚನ್ನಪಟ್ಟಣ ತಾಲೂಕು ಆಹಾರ ನಿರೀಕ್ಷಕ ಮಲ್ಲಿಕಾರ್ಜುನ್‌ ಟಿ.ಎಂ. ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next