Advertisement

Test Match; ಬೇಕಾಗಿದ್ದಾರೆ ಟೆಸ್ಟ್‌ ಸ್ಪೆಷಲಿಸ್ಟ್‌ ಕ್ರಿಕೆಟಿಗರು!

04:50 PM Jan 28, 2024 | Team Udayavani |

ಈ ಟಿ20 ಲೀಗ್‌ ಪಂದ್ಯಾವಳಿಗಳು ಜನಪ್ರಿಯತೆ ಪಡೆದ ಬಳಿಕ “ಟೆಸ್ಟ್‌ ಕ್ರಿಕೆಟೇ ನಿಜವಾದ ಕ್ರಿಕೆಟ್‌’ ಎಂಬ ಪರಿಕಲ್ಪನೆ ಬಹಳ ವೇಗದಲ್ಲಿ ಬದಲಾಗತೊಡಗಿದೆ. ಅಷ್ಟೇಕೆ, ಏಕದಿನ ಪಂದ್ಯಗಳ ಅಸ್ತಿತ್ವಕ್ಕೂ ದೊಡ್ಡ ಮಟ್ಟದಲ್ಲೇ ಸಂಚಕಾರ ಎದುರಾಗಿದೆ. ಒಂದು ಫಿಲ್ಮ್ ಶೋ ಮುಗಿಯುವ ಅವಧಿಯಲ್ಲಿ ಕ್ರಿಕೆಟ್‌ ಕೂಡ ಮುಗಿದು ಹೋಗುವುದನ್ನು ಈಗಿನ ಪೀಳಿಗೆ ಹೆಚ್ಚು ನೆಚ್ಚಿಕೊಳ್ಳತೊಡಗಿದೆ. ಹೀಗಾಗಿ ಕಲಾತ್ಮಕ ಕ್ರಿಕೆಟ್‌ ಎಂದೇ ಗುರುತಿಸಲ್ಪಡುತ್ತಿದ್ದ ಟೆಸ್ಟ್‌ ಕ್ರಿಕೆಟ್‌ ಮಂಕಾಗತೊಡಗಿದೆ.

Advertisement

ಇಂದು ಯಾವುದೇ ದ್ವಿಪಕ್ಷೀಯ ಕ್ರಿಕೆಟ್‌ ಸರಣಿಗಳು ನಡೆಯಲಿ, ಅಲ್ಲಿ ಮೊದಲ ಆದ್ಯತೆ ಇರುವುದೇ ಟಿ20 ಕ್ರಿಕೆಟಿಗೆ. ಈ ಚುಟುಕು ಕ್ರಿಕೆಟ್‌ ಪಂದ್ಯಗಳ ಸಂಖ್ಯೆ ಐದಕ್ಕೆ ಏರುವುದು ಮಾಮೂಲು. ಬಳಿಕ 2-3 ಏಕದಿನ ಪಂದ್ಯಗಳ ಸರದಿ. ಕೊನೆಯಲ್ಲಿ 2 ಟೆಸ್ಟ್‌ ಪಂದ್ಯ. ಕೆಲವೊಮ್ಮೆ ಅದೂ ಇಲ್ಲ. ಕೇವಲ ಟಿ20 ಪಂದ್ಯಗಳಿಗೋಸ್ಕರವೇ ಸರಣಿಯೊಂದು ಏರ್ಪಡುವುದೂ ಇದೆ. ಹಿಂದಿನಂತೆ 6 ಪಂದ್ಯಗಳ ಟೆಸ್ಟ್‌ ಸರಣಿ ಬಹುಶಃ ಇನ್ನು ಕಲ್ಪನೆ ಮಾತ್ರ!

ಅಂದಮಾತ್ರಕ್ಕೆ ಟೆಸ್ಟ್‌ ಪಂದ್ಯಗಳು ಅವಸಾನ ಹೊಂದುತ್ತವೆ ಎಂದು ಭಾವಿಸಬೇಕೆಂದೇನೂ ಇಲ್ಲ. ಇಂದಿಗೂ “ಆ್ಯಶಸ್‌’ ತನ್ನ ಜನಪ್ರಿಯತೆಯನ್ನು ಕಳೆದುಕೊಂಡಿಲ್ಲ.

ಆಸ್ಟ್ರೇಲಿಯ, ಇಂಗ್ಲೆಂಡ್‌, ದಕ್ಷಿಣ ಆಫ್ರಿಕಾ, ನ್ಯೂಜಿಲ್ಯಾಂಡ್‌, ಭಾರತ, ಪಾಕಿಸ್ಥಾನ ತಂಡಗಳು ಪಾಲ್ಗೊಳ್ಳುವ ಟೆಸ್ಟ್‌ ಸರಣಿಗಳು ಜನಪ್ರಿಯತೆಯ ಮಾನದಂಡದಲ್ಲಿ ಬಹಳ ಮೇಲ್ಮಟ್ಟದಲ್ಲೇ ಇವೆ. ಆದರೆ ಟೆಸ್ಟ್‌ ಸ್ಪೆಷಲಿಸ್ಟ್‌ಗಳ ಸಂಖ್ಯೆ ಕಡಿಮೆ ಆಗಿದೆ. ಪರಿಣಾಮ, 5 ಪಂದ್ಯಗಳ ಪಂದ್ಯಗಳೆಲ್ಲ 3-4 ದಿನಗಳಲ್ಲೇ ಮುಗಿದು ಹೋಗುತ್ತಿವೆ. ಟೆಸ್ಟ್‌ ಪಂದ್ಯಗಳ ರೋಮಾಂಚನ ಕಡಿಮೆ ಆಗುತ್ತಿದೆ.

450 ಓವರ್‌ಗಳ ಆಟ
ಟೆಸ್ಟ್‌ ಪಂದ್ಯಗಳೆಂದರೆ ಬರೋಬ್ಬರಿ 450 ಓವರ್‌ಗಳ ಆಟ. ಮೂರೇ ಗಂಟೆಗಳಲ್ಲಿ, ಕೇವಲ 40 ಓವರ್‌ಗಳಲ್ಲಿ ರೋಮಾಂಚನದ ಪರಾಕಾ ಷ್ಠೆಗೊಯ್ದು ಸಂಭ್ರಮಿಸುವಂತೆ ಮಾಡುವ ಟಿ20 ಕ್ರಿಕೆಟ್‌ಗೆ ಹೋಲಿಸಿದರೆ ಟೆಸ್ಟ್‌ ಕ್ರಿಕೆಟ್‌ ಎಂಬುದು ಸುದೀರ್ಘ‌. ಇದಕ್ಕಾಗಿಯೇ ಈ ಮಾದರಿಯನ್ನು ಕಿರಿದುಗೊಳಿಸುವ ಕುರಿತು ಆಗಾಗ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಲೇ ಇವೆ. ಇದರಿಂದ ಈಗಿರುವ ಒಂದಿಷ್ಟಾದರೂ “ಟೆಸ್ಟ್‌ ಆಸಕ್ತಿ’ ಇನ್ನಷ್ಟು ಕಡಿಮೆ ಆಗುವ ಆತಂಕ ಐಸಿಸಿಗೆ ಇದ್ದೇ ಇದೆ. ಇದಕ್ಕಾಗಿಯೇ “ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌’ ಆರಂಭಗೊಂಡದ್ದು. ಇದು 2 ವರ್ಷಗಳ ಸುದೀರ್ಘ‌ ಆವೃತ್ತ. ಪ್ರಸ್ತುತ 3ನೇ ಟೆಸ್ಟ್‌ ಚಾಂಪಿಯನ್‌ಶಿಪ್‌ ನಡೆಯುತ್ತಿದೆ.

Advertisement

ನಿಂತು ಆಡುವವರ ಕೊರತೆ
ಕಳೆದ ಭಾರತ-ದಕ್ಷಿಣ ಆಫ್ರಿಕಾ ನಡುವಿನ 2 ಪಂದ್ಯಗಳ ಸರಣಿ ಏನಾಯಿತೆಂಬುದು ಎಲ್ಲರಿಗೂ ಗೊತ್ತು. ಸೆಂಚುರಿಯನ್‌ನಲ್ಲಿ ಭಾರತ ಮೂರೇ ದಿನಗಳಲ್ಲಿ ಇನ್ನಿಂಗ್ಸ್‌ ಸೋಲಿಗೆ ಸಿಲುಕಿತು. ಬಳಿಕ ಕೇಪ್‌ಟೌನ್‌ನಲ್ಲಿ ಎರಡೇ ದಿನಗಳಲ್ಲಿ ಗೆದ್ದು ಸೇಡು ತೀರಿಸಿಕೊಂಡಿತು.

ಇಲ್ಲಿನ ಸೋಲಿಗೆ ಮುಖ್ಯ ಕಾರಣ, ಟೆಸ್ಟ್‌ ಸ್ಪೆಷಲಿಸ್ಟ್‌ಗಳ ಹಾಗೂ ನಿಂತು ಆಡುವವರ ಕೊರತೆ. ಪಿಚ್‌ ಬೌಲರ್‌ಗಳಿಗೆ ಎಷ್ಟೇ ಸಹಕಾರ ನೀಡಲಿ, ಇದನ್ನು ಎದುರಿಸಿ ನಿಂತು ಆಡುವ, ಇನ್ನಿಂಗ್ಸ್‌ ಬೆಳೆಸುವ ಜಾಣ್ಮೆ ಬ್ಯಾಟ್ಸ್‌ಮನ್‌ಗಳಿಗೆ ಇರಬೇಕು. ದ್ರಾವಿಡ್‌-ಲಕ್ಷ್ಮಣ್‌ ಅವರಂತೆ ಒಂದಿಡೀ ದಿನ ನಿಂತು ಪಂದ್ಯವನ್ನು ಉಳಿಸಿಕೊಡಬಲ್ಲ ಛಾತಿಯವರು ಈಗ ಎಲ್ಲಿದ್ದಾರೆ? ಭಾರತದಲ್ಲೊಬ್ಬ ಕೊಹ್ಲಿ, ಆಸ್ಟ್ರೇಲಿಯದಲ್ಲೊಬ್ಬ ಸ್ಮಿತ್‌, ಇಂಗ್ಲೆಂಡ್‌ನ‌ಲ್ಲಿ ಪೋಪ್‌, ನ್ಯೂಜಿಲ್ಯಾಂಡಿನ ವಿಲಿಯಮ್ಸನ್‌, ಪಾಕಿಸ್ಥಾನದ ಬಾಬರ್‌ ಆಜಂ… ಬಹುಶಃ ಇಷ್ಟೇ. ಇಡೀ ವಿಶ್ವದ ಕ್ರಿಕೆಟ್‌ ಆಟಗಾರರನ್ನು ರಾಶಿ ಹಾಕಿದರೆ ಇದರಿಂದ 11 ಸದಸ್ಯರ ಒಂದು ಟೆಸ್ಟ್‌ ತಂಡವನ್ನು ಆರಿಸುವುದು ಕಷ್ಟ ಎಂಬ ಪರಿಸ್ಥಿತಿ!

ಟಿ20 ಲೀಗ್‌ಗಳೇ ಕಾರಣ
ಇವೆಲ್ಲದಕ್ಕೂ ನಾವು ದೂಷಿಸಬೇಕಾದದ್ದು ಈ ಟಿ20 ಲೀಗ್‌ಗಳನ್ನು. ಯಾವಾಗ ಈ ಟಿ20 ಕ್ರಿಕೆಟ್‌ ಹುಟ್ಟಿಕೊಂಡಿತೋ, ಅಲ್ಲಿಗೆ ನಿಂತು ಆಡುವ ಆಟಗಾರರ ಸಂಖ್ಯೆ ಸಂಪೂರ್ಣ ಕ್ಷೀಣಿಸಿತು. ಪಿಚ್‌ಗಳು ಬದಲಾ ದವು, ಬೌಲರ್‌ಗಳು ಬೆಂಡಾದರು. ಟೆಸ್ಟ್‌ ಪಂದ್ಯಗಳು ಮೂರೇ ದಿನಕ್ಕೆ ಮುಗಿಯ ತೊಡಗಿದವು. “ಡ್ರಾ’ ಎಂಬ ಪದವೇ ಈಗ ಅಳಿವಿನ ಅಂಚಿನಲ್ಲಿದೆ! ಟೆಸ್ಟ್‌ ಸ್ಪೆಷಲಿಸ್ಟ್‌ ಬೇಕಾಗಿದ್ದಾರೆ, ಆದರೆ ಅವರೆಲ್ಲಿದ್ದಾರೆ ಎಂಬುದೇ ಮುಖ್ಯ ಪ್ರಶ್ನೆ!

-ಪಿ.ಕೆ. ಹಾಲಾಡಿ

Advertisement

Udayavani is now on Telegram. Click here to join our channel and stay updated with the latest news.

Next