ಗಾಲೆ: ಇಮಾಮ್ ಉಲ್ ಹಕ್ ಅವರ ಉಪಯುಕ್ತ ಆಟದಿಂದಾಗಿ ಪ್ರವಾಸಿ ಪಾಕಿಸ್ಥಾನ ತಂಡವು ಶ್ರೀಲಂಕಾ ತಂಡದೆದುರಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ನಾಲ್ಕು ವಿಕೆಟ್‌ಗಳ ಗೆಲುವು ಸಾಧಿಸಿದೆ.
ಗೆಲ್ಲಲು 131 ರನ್ ಗಳಿಸುವ ಅವಕಾಶ ಪಡೆದಿದ್ದ ಪಾಕಿಸ್ಥಾನ ತಂಡವು ನಾಲ್ಕನೇ ದಿನದಾಟದ ಅಂತ್ಯಕ್ಕೆ ತನ್ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ 48 ರನ್ನಿಗೆ 3 ವಿಕೆಟ್ ಕಳೆದುಕೊಂಡು ಒದ್ದಾಡುತ್ತಿತ್ತು. ಇಮಾಮ್ ಉಲ್ ಹಕ್ ಮತ್ತು ಬಾಬರ್ ಅಜಂ ಕ್ರೀಸ್‌ನಲ್ಲಿದ್ದರು.
ಅಂತಿಮ ದಿನದಾಟ ಆರಂಭಿಸಿದ ಇಮಾಮ್ ಮತ್ತು ಬಾಬರ್ ಎಚ್ಚರಿಕೆಯಿಂದ ಆಡಿ 31 ರನ್ ಪೇರಿಸಿದರು. ಈ ಹಂತದಲ್ಲಿ 24 ರನ್ ಗಳಿಸಿದ ಬಾಬರ್ ಔಟಾದರು. ಆಬಳಿಕ ಇಮಾಮ್ ಅವರನ್ನು ಸೇರಿಕೊಂಡ ಸೌದ್ ಶಕೀಲ್ ಐದನೇ ವಿಕೆಟಿಗೆ 43 ರನ್ ಪೇರಿಸಿ ತಂಡದ ಗೆಲುವನ್ನು ಖಚಿತಪಡಿಸಿದರು. ಗೆಲ್ಲಲು 9 ರನ್ ಗಳಿರುವಾಗ ಶಕೀಲ್ ಔಟಾದರು. ತಂಡ ನಾಲ್ಕು ವಿಕೆಟ್‌ಗಳ ಜಯ ಸಾಧಿಸಿದಾಗ ಇಮಾಮ್ 50 ರನ್ ಗಳಿಸಿ ಅಜೇಯರಾಗಿ ಉಳಿದರು.
ಈ ಗೆಲುವಿನಿಂದ ಪಾಕಿಸ್ಥಾನವು ಎರಡು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. ಸರಣಿಯ ಎರಡನೇ ಪಂದ್ಯ ಕೊಲಂಬೋದಲ್ಲಿ ಜು. 24ರಿಂದ 28ರ ವರೆಗೆ ನಡೆಯಲಿದೆ. ಪಾಕಿಸ್ಥಾನ ಸರಿಯಾಗಿ ಒಂದು ವರ್ಷದ ಹಿಂದೆ ಗಾಲ್‌ನಲ್ಲಿ ನಡೆದ ಪಂದ್ಯದಲ್ಲಿ ಈ ಹಿಂದೆ ಗೆಲುವು ಸಾಧಿಸಿತ್ತು.
ಸಂಕ್ಷಿಪ್ತ ಸ್ಕೋರು: ಪಾಕಿಸ್ಥಾನ 461 ಮತ್ತು 133ಕ್ಕೆ 6 (ಇಮಾಮ್ 50 ಔಟಾಗದೆ, ಜಯಸೂರ್ಯ 56ಕ್ಕೆ 4); ಶ್ರೀಲಂಕಾ 312 ಮತ್ತು 279.