ಬೆಂಗಳೂರು: ಕಳೆದ ನವೆಂಬರ್‌ನಲ್ಲಿ ನಡೆದ ಪರೀಕ್ಷೆಯ ಫಲಿತಾಂಶ ಇನ್ನೂ ಬಂದಿಲ್ಲ. ಕೆಲವೊಂದು ಸೆಮಿಸ್ಟರ್‌ನ ಮರು ಮೌಲ್ಯಮಾಪನದ ಫಲಿತಾಂಶವೂ ಪ್ರಕಟಗೊಂಡಿಲ್ಲ. ಜತೆಗೆ ಅಂಕಪಟ್ಟಿಯ ಗೊಂದಲ. ಇದು ಬೆಂಗಳೂರಿನ ಪ್ರತಿಷ್ಠಿತ ಯುನಿರ್ವಸಿಟಿ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಗೋಳು.
ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರು ಆರಂಭಿಸಿರುವ ಈ ಎಂಜಿನಿಯರಿಂಗ್ ಕಾಲೇಜು ಬೆಂಗಳೂರು ವಿಶ್ವವಿದ್ಯಾಲಯದ ಅಧೀನದಲ್ಲಿದೆ. ಇಲ್ಲಿನ ವಿದ್ಯಾರ್ಥಿಗಳಿಗೆ ಸರಿಯಾದ ಸಮಯದಲ್ಲಿ ಫಲಿತಾಂಶವೂ ಸಿಗುವುದಿಲ್ಲ, ಮರು ಮೌಲ್ಯಮಾಪನಕ್ಕೆ ಅರ್ಜಿ ಹಾಕಿದ ವಿದ್ಯಾರ್ಥಿಗಳು ಉತ್ತರಕ್ಕಾಗಿ ತಿಂಗಳಾನುತಿಂಗಳು ಕಾಯಬೇಕು. ಅಂಕಪಟ್ಟಿಯ ಗೊಂದಲ ಕೇಳುವವರೇ ಇಲ್ಲ. ಇದು ಇಂದು ನಿನ್ನೆಯ ಸಮಸ್ಯೆಯಲ್ಲ. ವರ್ಷಗಳಿಂದಲೂ ಹೀಗೆ ಇದೆ.
ವಿದ್ಯಾರ್ಥಿಗಳ ಸಮಸ್ಯೆ: 2016ರ ನವೆಂಬರ್ ತಿಂಗಳಲ್ಲಿ ನಡೆದ ಎಂಜಿನಿಯರಿಂಗ್ ಪರೀಕ್ಷೆಯ ಫಲಿತಾಂಶ ಇನ್ನೂ ಬಂದಿಲ್ಲ. ಕೆಲವೊಂದು ವಿಭಾಗದ ಒಂದು ಮತ್ತು ಮೂರನೇ ಸೆಮಿಸ್ಟರ್ ಫಲಿತಾಂಶ ಕೂಡ ಪ್ರಕಟಗೊಂಡಿಲ್ಲ. ಅಂಕಪಟ್ಟಿಯಲ್ಲಿ ಅಂಕದ ಬದಲಾವಣೆ, ವಿದ್ಯಾರ್ಥಿಗಳ ಫೋಟೋ ಅದಲು ಬದಲಾಗಿರುವುದು ಸಾಮಾನ್ಯವಾಗಿದೆ. ವಿಶ್ವವಿದ್ಯಾಲಯದಿಂದ ವಿದ್ಯಾರ್ಥಿಗಳಿಗೆ ಆಗುತ್ತಿರುವ ಸಮಸ್ಯೆಯ ವಿರುದ್ಧ ಹೋರಾಟಕ್ಕೆ ಕಾಲೇಜಿನಿಂದಲೇ ವಿದ್ಯಾರ್ಥಿ ಸಂಘಟನೆ ಕಟ್ಟಿಕೊಳ್ಳಲು ವಿದ್ಯಾರ್ಥಿಗಳು ತೀರ್ಮಾನಿಸಿದ್ದಾರೆ. ಹಾಗೆಯೇ ಸಕಾಲಕ್ಕೆ ಫಲಿತಾಂಶ ನೀಡುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು ಹೋರಾಟ ನಡೆಸಲು ಮುಂದಾಗಿದ್ದಾರೆ.
8 ಸಾವಿರ ದೂರು: ಬೆಂವಿವಿ ಅಧೀನದ ಕಾಲೇಜಿನ ವಿದ್ಯಾರ್ಥಿಗಳು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಮೇಲಿಂದ ಮೇಲೆ ದೂರುಗಳು ಬರುತ್ತಲೇ ಇರುತ್ತದೆ. ಎಂಜಿನಿಯರಿಂಗ್, ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಂದ ಬೆಂವಿವಿ ಪರೀಕ್ಷಾಂಗ ವಿಭಾಗಕ್ಕೆ 8 ಸಾವಿರಕ್ಕೂ ಅಧಿಕ ದೂರು ಬಂದಿದೆ. ಫಲಿತಾಂಶ ವಿಳಂಬ, ಮರುಮೌಲ್ಯಮಾಪನ, ಅಂಕಪಟ್ಟಿ ಗೊಂದಲ, ಪರೀಕ್ಷೆಯ ವೇಳಾಪಟ್ಟಿಗೆ ಸೇರಿದ ದೂರು ಇದಾಗಿದೆ ಎಂದು ವಿವಿಯ ಮೂಲಗಳು “ಉದಯವಾಣಿ’ಗೆ ಮಾಹಿತಿ ನೀಡಿದೆ.
ಪರೀಕ್ಷಾ ಅದಾಲತ್: ವಿದ್ಯಾರ್ಥಿಗಳಿಂದ ಬಂದಿರುವ ದೂರುಗಳನ್ನು ಏಕಕಾಲದಲ್ಲಿ ಪರಿಹಾರ ನೀಡುವ ಉದ್ದೇಶದಿಂದ ಪರೀಕ್ಷಾ ಅದಾಲತ್ ನಡೆಸಲು ಬೆಂವಿವಿ ತೀರ್ಮಾನಿಸಿದೆ. ಈ ಹಿನ್ನೆಯಲ್ಲಿ ತನ್ನ ಅಧೀನದ ಎಲ್ಲಾ ಕಾಲೇಜಿನ ಪ್ರಾಂಶುಪಾಲರಿಗೆ ಪರೀಕ್ಷಾಂಗ ವಿಭಾಗದಿಂದ ಸೂಚನೆ ನೀಡಲಾಗಿದೆ. ಪ್ರತಿ ದಿನ 500ರಿಂದ 600 ದೂರುಗಳನ್ನು ವಿಲೇವಾರಿ ಮಾಡಲಾಗುತ್ತಿದೆಯಾದರೂ, ಅಷ್ಟೇ ಪ್ರಮಾಣದಲ್ಲಿ ಹೊಸ ದೂರು ದಾಖಲಾಗುತ್ತಿದೆ. ಹೀಗಾಗಿ ಎಲ್ಲಾ ದೂರುಗಳನ್ನು ವಿದ್ಯಾರ್ಥಿಗಳ, ಪ್ರಾಧ್ಯಾಪಕರ ಸಮ್ಮುಖದಲ್ಲೇ ಬಗೆಹರಿಸಲು ಪರೀಕ್ಷಾ ಅದಾಲತ್ ನಡೆಸಲಾಗುತ್ತದೆ.
ಪರೀಕ್ಷಾ ಫಲಿತಾಂತ ವಿಳಂಬ ಹಾಗೂ ಅಂಕಪಟ್ಟಿ ಗೊಂದಲದ ಬಗ್ಗೆ ವಿಶ್ವವಿದ್ಯಾಲದ ಗಮನಕ್ಕೆ ತಂದಿದ್ದೇವೆ. ವಿದ್ಯಾರ್ಥಿಗಳಿಗೆ ಆದಷ್ಟು ಬೇಗ ಫಲಿತಾಂಶ ನೀಡುವ ಉದ್ದೇಶದಿಂದ ಎಂಜಿನಿಯರಿಂಗ್ ಕೋರ್ಸ್‌ನ ಎಲ್ಲ ವಿಭಾಗದ ಡೀನ್‌ಗಳೊಂದಿಗೂ ಮಾತುಕತೆ ನಡೆಸಲಾಗಿದೆ.
-ಡಾ. ಕೆ.ಆರ್.ವೇಣುಗೋಪಾಲ್, ಯುವಿಸಿಇ ಪ್ರಾಂಶುಪಾಲ್
ವಿದ್ಯಾರ್ಥಿಗಳ ಸಮಸ್ಯೆ ಆಲಿಸುತ್ತಿದ್ದೇವೆ. ಅಂಕಪಟ್ಟಿಗೆ ಸಂಬಂಧಿಸಿದಂತೆ ಬಂದಿರುವ ದೂರುಗಳನ್ನು ಸ್ಥಳದಲ್ಲೇ ಸರಿಪಡಿಸಿ, ಹೊಸ ಅಂಕಪಟ್ಟಿ ವಿತರಿಸುತ್ತಿದ್ದೇವೆ. ಎಂಜಿನಿಯರಿಂಗ್ ಫಲಿತಾಂಶ ನೀಡುತ್ತಿದ್ದೇವೆ. ಕೆಲವೊಂದು ತಾಂತ್ರಿಕ ಸಮಸ್ಯೆಯಿಂದ ಫಲಿತಾಂಶ ವಿಳಂಬವಾಗುತ್ತಿದೆ.
-ಡಾ.ಸಿ.ಶಿವರಾಜ್, ಬೆಂವಿವಿ ಕುಲಪತಿ (ಪರೀಕ್ಷೆ)