ಸಿಡ್ನಿ: ದ್ವಿತೀಯ ಇನ್ನಿಂಗ್ಸ್‌ನಲ್ಲಿ ಜೋಶ್ ಹೇಝಲ್‌ವುಡ್ ಬೌಲಿಂಗ್ ದಾಳಿಗೆ ತತ್ತರಿಸಿದ ಪಾಕಿಸ್ಥಾನ “ನ್ಯೂ ಇಯರ್’ ಟೆಸ್ಟ್ ಪಂದ್ಯದಲ್ಲಿ ಸೋಲಿನ ಭೀತಿಗೆ ಸಿಲುಕಿದೆ. ಆಸ್ಟ್ರೇಲಿಯ 3-0 ಗೆಲುವಿನ ಹಾದಿ ಹಿಡಿದಿದೆ.
14 ರನ್ನುಗಳ ಅಲ್ಪ ಮುನ್ನಡೆ ಬಳಿಕ 2ನೇ ಇನ್ನಿಂಗ್ಸ್ ಆರಂಭಿಸಿದ ಪಾಕಿಸ್ಥಾನ, 3ನೇ ದಿನದಾಟದ ಅಂತ್ಯಕ್ಕೆ 7 ವಿಕೆಟಿಗೆ ಬರೀ 68 ರನ್ ಗಳಿಸಿ ತೀವ್ರ ಸಂಕಟಕ್ಕೊಳಗಾಗಿದೆ. ಪಂದ್ಯವಿನ್ನೂ 2 ದಿನ ಕಾಣಲಿಕ್ಕಿದೆ. ಆದರೆ ಹೊಂದಿರುವ ಮುನ್ನಡೆ 82 ರನ್ ಮಾತ್ರ.
ಜೋಶ್: 9ಕ್ಕೆ 4 ವಿಕೆಟ್
ಪಾಕಿಸ್ಥಾನವನ್ನು ಗಂಡಾಂತರಕ್ಕೆ ತಳ್ಳಿದ ಹೇಝಲ್‌ವುಡ್ 9 ರನ್ನಿಗೆ 4 ವಿಕೆಟ್ ಉಡಾಯಿಸಿದರು. ಇದರಲ್ಲಿ 3 ವಿಕೆಟ್‌ಗಳನ್ನು ದಿನದ ಅಂತಿಮ ಓವರ್‌ನಲ್ಲಿ, 5 ಎಸೆತಗಳ ಅಂತರದಲ್ಲಿ ಕೆಡವಿದರು. 6 ರನ್ ಮಾಡಿರುವ ಮೊಹಮ್ಮದ್ ರಿಜ್ವಾನ್ ಮತ್ತು ಖಾತೆ ತೆರೆಯದ ಆಮೀರ್ ಜಮಾಲ್ ಕ್ರೀಸ್‌ನಲ್ಲಿದ್ದಾರೆ. ಇವರಿಬ್ಬರೂ ಮೊದಲ ಇನ್ನಿಂಗ್ಸ್‌ನಲ್ಲಿ ಅರ್ಧ ಶತಕ ಬಾರಿಸಿ ಪಾಕಿಸ್ಥಾನದ ಮೊತ್ತವನ್ನು ಮುನ್ನೂರರಾಚೆ ವಿಸ್ತರಿಸಿದ್ದರು.
ಪಾಕ್ ಸರದಿಯಲ್ಲಿ ಎರಡಂಕೆಯ ಗಡಿ ತಲುಪಿದವರು ಇಬ್ಬರು ಮಾತ್ರ. ಆರಂಭಕಾರ ಸೈಮ್ ಅಯೂಬ್ (33) ಮತ್ತು ಮಾಜಿ ನಾಯಕ ಬಾಬರ್ ಆಜಂ (23). ಅಬ್ದುಲ್ಲ ಶಫೀಕ್, ಶಾನ್ ಮಸೂದ್, ಸಾಜಿದ್ ಖಾನ್, ಆಘಾ ಸಲ್ಮಾನ್ ಖಾತೆ ತೆರೆಯಲು ವಿಫಲರಾದರು. ಇವರಲ್ಲಿ ಶಫೀಕ್ ಎರಡೂ ಇನ್ನಿಂಗ್ಸ್ ಗಳಲ್ಲಿ ಸೊನ್ನೆ ಸುತ್ತಿದರೆ, ನಾಯಕ ಮಸೂದ್ ಮೊದಲ ಎಸೆತದಲ್ಲೇ ಹೇಝಲ್‌ವುಡ್‌ಗೆ ವಿಕೆಟ್ ಒಪ್ಪಿಸಿದರು.
ಇದಕ್ಕೂ ಮುನ್ನ 2 ವಿಕೆಟಿಗೆ 116 ರನ್ ಮಾಡಿದ್ದ ಆಸ್ಟ್ರೇಲಿಯ ಶುಕ್ರವಾರದ ಬ್ಯಾಟಿಂಗ್ ಮುಂದುವರಿಸಿ 299ಕ್ಕೆ ಆಲೌಟ್ ಆಯಿತು. ಲಬುಶೇನ್ (60) ಮತ್ತು ಮಿಚೆಲ್ ಮಾರ್ಷ್ (54) ಅರ್ಧ ಶತಕ ಹೊಡೆದು ಮಿಂಚಿದರು. ಮಧ್ಯಮ ವೇಗಿ ಆಮೀರ್ ಜಮಾಲ್ 69ಕ್ಕೆ 6 ವಿಕೆಟ್ ಉರುಳಿಸಿದರು. ಇದು ಅವರ ಜೀವನಶ್ರೇಷ್ಠ ಸಾಧನೆಯಾಗಿದೆ.