ಬೆಂಗಳೂರು: ಹಿಜಾಬ್ ಗೊಂದಲದ ಸಂದರ್ಭ ಹೈಕೋರ್ಟ್‌ನ ಮಧ್ಯಾಂತರ ತೀರ್ಪು ಬರುವ ಮುನ್ನ ಪರೀಕ್ಷೆಗಳಿಗೆ ಹಾಜ ರಾಗದ ವಿದ್ಯಾರ್ಥಿಗಳಿಗೆ ಹಿಜಾಬ್ ಧರಿಸದೇ ಪರೀಕ್ಷೆ ಬರೆಯಲು ಅವಕಾಶ ನೀಡುವ ಕುರಿತು ಪರಿಶೀಲನೆ ನಡೆಸಲಾಗುವುದು ಎಂದು ಕಾನೂನು ಮತ್ತು ಸಂಸ ದೀಯ ವ್ಯವಹಾರ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದ್ದಾರೆ. ಆದರೆ ಮಧ್ಯಾಂತರ ಆದೇಶದ ಅನಂತರ ಪರೀಕ್ಷೆ ತಪ್ಪಿಸಿ ಕೊಂಡವರಿಗೆ ಮರು ಅವ ಕಾಶ ಕಷ್ಟ ಸಾಧ್ಯ ಎಂದಿದ್ದಾರೆ.
ಶೂನ್ಯ ವೇಳೆಯಲ್ಲಿ ಬಿಜೆಪಿ ಶಾಸಕ ರಘುಪತಿ ಭಟ್, ಹಿಜಾಬ್ ಗೊಂದಲ ಸಂದರ್ಭ ಕೆಲವರಿಗೆ ಪರೀಕ್ಷೆ ಬರೆಯಲಾಗಿರಲಿಲ್ಲ. ಈಗ ಹಿಜಾಬ್ ತೆಗೆದು ಪರೀಕ್ಷೆ ಬರೆಯಲು ಸಿದ್ಧರಾಗಿದ್ದಾರೆ. ಅವರಿಗೆ ಅವಕಾಶ ಕಲ್ಪಿಸಬೇಕು ಹಾಗೂ ಹೈಕೋರ್ಟ್ ಆದೇಶ ಬಂದ ಅನಂತರವೂ ಪಾಲಿಸದೇ ಗೊಂದಲ ಸೃಷ್ಟಿಸಲು ಯತ್ನಿಸುವವರ ವಿರುದ್ಧ ಕ್ರಮ ಕೈಗೊಳ್ಳ ಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆ ಹಕ್ಕು: ಸಿದ್ದು ಅವರ ಆಗ್ರಹಕ್ಕೆ ಬೆಂಬಲ ಸೂಚಿಸಿದ ಬಿಜೆಪಿ ಶಾಸಕ ಜಗದೀಶ್ ಶೆಟ್ಟರ್, ಹೈಕೋರ್ಟ್ ಆದೇಶ ನೀಡಿದರೂ ಅದನ್ನು ಖಂಡಿಸಿ ಬಂದ್ ಮಾಡುವುದು, ಪ್ರತಿಭಟನೆ ನಡೆಸುವುದು ಸರಿಯಲ್ಲ. ಕೋರ್ಟ್ ಆದೇಶಕ್ಕೆ ಬೆಲೆ ಕೊಡದವರು ಮತ್ತೆ ಯಾರಿಗೆ ಬೆಲೆ ಕೊಡುತ್ತಾರೆ ಎಂದು ಪ್ರಶ್ನಿಸಿದರು. ಈ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಹೈಕೋರ್ಟ್ ತೀರ್ಪಿನ ಬಗ್ಗೆ ಅಸಮಾಧಾನ ಇದ್ದರೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಜತೆಗೆ ಶಾಂತಿಯುತ ಬಂದ್, ಪ್ರತಿಭಟನೆ ಮಾಡುವುದು ಕೂಡ ಸಂವಿಧಾನಾತ್ಮಕ ಹಕ್ಕು ಎಂದರು.
ಮಹಾ ಪಾಪದ ಕೆಲಸ: ರವಿ:
ಬಿಜೆಪಿ ಸದಸ್ಯ ಸಿ.ಟಿ. ರವಿ ಮಾತನಾಡಿ, ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ನಲ್ಲಿ 10 ದಿನ ವಿವರವಾದ ವಿಚಾರಣೆ ನಡೆದು ಬಳಿಕ ಕೋರ್ಟ್ ತೀರ್ಪು ಕೊಟ್ಟಿದೆ. ಅದನ್ನು ಧಿಕ್ಕರಿಸಿ ಪ್ರತಿಭಟನೆ, ಬಂದ್ ಮಾಡುವುದು ಎಷ್ಟು ಸರಿ? ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಆದರೆ ರಾಜ್ಯದ ಶಾಂತಿ ಭಂಗ ಮಾಡಲು, ಪ್ರಚೋದನೆ ನೀಡಲು ಅವಕಾಶವಿಲ್ಲ. ಇದರಲ್ಲಿ ಓಟ್ ಬ್ಯಾಂಕ್ ರಾಜಕಾರಣ ಮಾಡುವುದು ಮಹಾ ಪಾಪದ ಕೆಲಸ ಎಂದರು.
ಸದಸ್ಯರು ಪರ ವಿರೋಧಗಳ ವಾದಕ್ಕೆ ಉತ್ತರಿಸಿದ ಕಾನೂನು ಸಚಿವ ಮಾಧುಸ್ವಾಮಿ, ಸುಪ್ರೀಂ ಕೋರ್ಟ್ ತೀರ್ಮಾನ ಪ್ರಕಟಿಸುವ ವರೆಗೆ ಸರಕಾರ ಹೈಕೋರ್ಟ್ ಆದೇಶವನ್ನು ಜಾರಿ ಮಾಡಲೇಬೇಕು ಎಂದರು.
ಸ್ವಯಂಪ್ರೇರಿತ ಬಂದ್ :
ಹೈಕೋರ್ಟ್ ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಮುಸ್ಲಿಂ ಸಂಘಟನೆಗಳು ರಾಜ್ಯಾದ್ಯಂತ ಸ್ವಯಂ ಪ್ರೇರಿತರಾಗಿ ಬಂದ್ ನಡೆಸಿದ್ದಾರೆ. ದ.ಕ., ಉಡುಪಿ, ಚಿಕ್ಕಮಗಳೂರು, ದೊಡ್ಡಬಳ್ಳಾಪುರ, ಹಾಸನ, ಕೋಲಾರ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮುಸ್ಲಿಂ ಸಂಘಟನೆಗಳು ಬಂದ್ ನಡೆಸಿದವು. ಎಲ್ಲೆಡೆ ಸ್ವಯಂ ಪ್ರೇರಿತವಾಗಿ ತಮ್ಮ ಅಂಗಡಿ, ಮುಂಗಟ್ಟು ಮತ್ತು ಸಂಸ್ಥೆಗಳಲ್ಲಿ ವ್ಯವಹಾರವನ್ನು ಸ್ಥಗಿತಗೊಳಿಸಿದ್ದರು. ಹಲವೆಡೆ ವಿದ್ಯಾರ್ಥಿಗಳು ಶಾಲೆಗೆ ಗೈರು ಹಾಜರಾಗಿದ್ದೂ ಕಂಡುಬಂತು.