ಮ್ಯಾಂಚೆಸ್ಟರ್: ಅಂತಿಮ ದಿನ ಸತತವಾಗಿ ಸುರಿದ ಮಳೆಯ ಪರಿಣಾಮ ಆ್ಯಶಸ್ ಸರಣಿಯ ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯ ಡ್ರಾದಲ್ಲಿ ಕೊನೆಗೊಂಡಿದೆ. ಸೋಲಿನ ಅಪಾಯದಲ್ಲಿದ್ದ ಆಸ್ಟ್ರೇಲಿಯಕ್ಕೆ ಮಳೆ ವರವಾಗಿ ಪರಿಣಮಿಸಿದರೆ, ಸರಣಿಯನ್ನು ಸಮಬಲಕ್ಕೆ ತರುವ ಕನಸು ಕಾಣುತ್ತಿದ್ದ ಇಂಗ್ಲೆಂಡ್‌ಗೆ ತೀವ್ರ ನಿರಾಸೆಯಾಗಿದೆ.
275 ರನ್ನುಗಳ ಭಾರೀ ಹಿನ್ನಡೆಗೆ ಸಿಲುಕಿದ್ದ ಆಸ್ಟ್ರೇಲಿಯ 4ನೇ ದಿನದಾಟದ ಅಂತ್ಯಕ್ಕೆ 5ಕ್ಕೆ 214 ರನ್ ಗಳಿಸಿ ಸೋಲು ಖಚಿತ ಎಂಬ ಸ್ಥಿತಿಯಲ್ಲಿತ್ತು. ಆದರೆ ಮಳೆಯಿಂದಾಗಿ ಕೊನೆಯ ದಿನದಾಟ ಒಂದೂ ಎಸೆತ ಕಾಣದೆ ರದ್ದುಗೊಂಡಿತು. ಇದರೊಂದಿಗೆ ಆಸ್ಟ್ರೇಲಿಯ 2-1 ಮುನ್ನಡೆ ಕಾಯ್ದಕೊಂಡಿದ್ದು, ಆ್ಯಶಸ್ ಟ್ರೋಫಿಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಸರಣಿಯ 5ನೇ ಹಾಗೂ ಅಂತಿಮ ಟೆಸ್ಟ್ ಜು. 27ರಂದು ಓವಲ್‌ನಲ್ಲಿ ಆರಂಭವಾಗಲಿದೆ.
ರವಿವಾರ ಕನಿಷ್ಠ ಒಂದು ಅವಧಿಯ ಆಟ ನಡೆದಿದ್ದರೂ ಇಂಗ್ಲೆಂಡ್‌ಗೆ ಗೆಲುವು ಒಲಿಯುವ ಸಾಧ್ಯತೆ ಇತ್ತು. ಮಾರ್ನಸ್ ಲಬುಶೇನ್ ಅವರ ಶತಕದ ಹೊರತಾಗಿಯೂ (111) ಆಸೀಸ್ ಕುಸಿತ ಅನುಭವಿಸಿತ್ತು. ಇನ್ನಿಂಗ್ಸ್ ಸೋಲಿನಿಂದ ಪಾರಾಗಲು ಇನ್ನೂ 61 ರನ್ ಮಾಡಬೇಕಾದ ಒತ್ತಡದಲ್ಲಿತ್ತು. ಮಿಚೆಲ್ ಮಾರ್ಷ್ 31 ಮತ್ತು ಕ್ಯಾಮರಾನ್ ಗ್ರೀನ್ 3 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದರು.
189 ರನ್ ಬಾರಿಸಿದ ಇಂಗ್ಲೆಂಡ್ ಆರಂಭಕಾರ ಜಾಕ್ ಕ್ರಾಲಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಇದು ಬೆನ್ ಸ್ಟೋಕ್ಸ್ ನಾಯಕತ್ವದಲ್ಲಿ ಎದುರಾದ ಮೊದಲ ಡ್ರಾ ಫಲಿತಾಂಶವಾಗಿದೆ. ಇವರ ನಾಯಕತ್ವದ ಹಿಂದಿನ 17 ಟೆಸ್ಟ್‌ಗಳೂ ಸ್ಪಷ್ಟ ಫಲಿತಾಂಶ ದಾಖಲಿಸಿದ್ದವು. 2017ರಲ್ಲಿ ಆ್ಯಶ್ ಕಳೆದುಕೊಂಡ ಇಂಗ್ಲೆಂಡ್, ಇದನ್ನು ಮರಳಿ ತರುವಲ್ಲಿ ಇನ್ನೂ ಯಶಸ್ವಿಯಾಗಿಲ್ಲ. ಅಲ್ಲಿಂದೀಚೆ ಸತತ 4 ಸಲ ಆಸ್ಟ್ರೇಲಿಯ ಆ್ಯಶಸ್ ಜಯಿಸಿದಂತಾಗಿದೆ.
ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯ-317 ಮತ್ತು 5 ವಿಕೆಟಿಗೆ 215. ಇಂಗ್ಲೆಂಡ್-592. ಪಂದ್ಯಶ್ರೇಷ್ಠ: ಜಾಕ್ ಕ್ರಾಲಿ.