Advertisement

ಸಿಂಧು, ಶ್ರೀಕಾಂತ್‌ಗೆ ಅಗ್ನಿಪರೀಕ್ಷೆ; ಚಿರಾಗ್‌-ಸಾತ್ವಿಕ್‌ ಮತ್ತೊಂದು ನಿರೀಕ್ಷೆ

11:42 PM Jul 24, 2023 | Team Udayavani |

ಟೋಕಿಯೊ: ಸೂಪರ್‌ ಸೀರಿಸ್‌ ಬ್ಯಾಡ್ಮಿಂಟನ್‌ ಕೂಟದ ಮತ್ತೊಂದು ಆವೃತ್ತ ಮಂಗಳವಾರ ಟೋಕಿಯೊದಲ್ಲಿ ಆರಂಭವಾಗಲಿದೆ. ಇದು “ಜಪಾನ್‌ ಓಪನ್‌ ಸೂಪರ್‌-750′ ಪಂದ್ಯಾವಳಿಯಾಗಿದ್ದು, ಭಾರತದ ಬಹುತೇಕ ಆಟಗಾರರು ಪಾಲ್ಗೊಳ್ಳಲಿದ್ದಾರೆ. ಇವರಲ್ಲಿ ಸತತ ವೈಫ‌ಲ್ಯ ಕಾಣುತ್ತಲೇ ಬಂದಿರುವ ಪಿ.ವಿ. ಸಿಂಧು ಮತ್ತು ಕೆ. ಶ್ರೀಕಾಂತ್‌ ಅವರಿಗೆ ಇದೊಂದು ಅಗ್ನಿಪರೀಕ್ಷೆ ಆಗಲಿದೆ.

Advertisement

2024ರ ಪ್ಯಾರಿಸ್‌ ಒಲಿಂಪಿಕ್ಸ್‌ ಸರಿಯಾಗಿ ಒಂದು ವರ್ಷ ಬಾಕಿ ಇದ್ದು, ಸಿಂಧು ಮತ್ತು ಶ್ರೀಕಾಂತ್‌ ಅವರ ಕಳಪೆ ಫಾರ್ಮ್ ಭಾರತದ ಪಾಲಿಗೆ ಚಿಂತೆಯ ಸಂಗತಿ ಆಗಿದೆ. ಕಳೆದ ವಾರದ ಕೊರಿಯಾ ಓಪನ್‌ ಪಂದ್ಯಾವಳಿಯಲ್ಲಿ ತನಗಿಂತ ಕೆಳಗಿನ ರ್‍ಯಾಂಕಿಂಗ್‌ ಆಟಗಾರ್ತಿ ಪೈ ಯು-ಪೊ ವಿರುದ್ಧ ಸೋತದ್ದು ಸಿಂಧುಗೆ ಎದುರಾಗಿರುವ ಭಾರೀ ಹಿನ್ನಡೆಯಾಗಿದೆ. ಟೋಕಿಯೊದಲ್ಲಾದರೂ ಉತ್ತಮ ಪ್ರದರ್ಶನ ನೀಡಬೇಕಿದೆ.
ಜಪಾನ್‌ ಓಪನ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಸಿಂಧು ಚೀನದ ಜಾಂಗ್‌ ಯಿ ಮಾನ್‌ ವಿರುದ್ಧ ಸೆಣಸಲಿದ್ದಾರೆ. ಈ 20ನೇ ರ್‍ಯಾಂಕಿಂಗ್‌ ಆಟಗಾರ್ತಿ ವಿರುದ್ಧ ಸಿಂಧು 2-2 ಸಮಬಲದ ದಾಖಲೆ ಹೊಂದಿದ್ದಾರೆ. ಕೊನೆಯ ಸಲ ಮುಖಾಮುಖೀಯಾದದ್ದು ಕಳೆದ ಮಲೇಷ್ಯಾ ಓಪನ್‌ ಕ್ವಾರ್ಟರ್‌ ಫೈನಲ್‌ನಲ್ಲಿ. ಇಲ್ಲಿ ಸಿಂಧು ಜಯ ಸಾಧಿಸಿದ್ದರು. ಟೋಕಿಯೊದಲ್ಲಿ ಮೊದಲ ಸುತ್ತಿನ ಜಯ ಸಾಧಿಸಿದರೆ ಸಿಂಧುಗೆ ತೈ ಜು ಯಿಂಗ್‌ ಅವರ ಕಠಿನ ಸವಾಲು ಎದುರಾಗುವ ಸಾಧ್ಯತೆ ಇದೆ. ಸಿಂಧು ವಿರುದ್ಧ ಯಿಂಗ್‌ 19-5 ಅಂತರದ ಭರ್ಜರಿ ಗೆಲುವಿನ ದಾಖಲೆ ಹೊಂದಿದ್ದಾರೆ. ಒಮ್ಮೆಯಂತೂ ಸಿಂಧು ಸತತ 9 ಪಂದ್ಯಗಳಲ್ಲಿ ಸೋಲನುಭವಿಸಿದ್ದರು!

ಚಿರಾಗ್‌-ಸಾತ್ವಿಕ್‌ ಮತ್ತೊಂದು ನಿರೀಕ್ಷೆ
ರವಿವಾರವಷ್ಟೇ ವಿಶ್ವದ ನಂ.1 ಜೋಡಿಯನ್ನು ಮಣಿಸಿ “ಕೊರಿಯಾ ಓಪನ್‌’ ಡಬಲ್ಸ್‌ ಪ್ರಶಸ್ತಿ ಗೆದ್ದ ಚಿರಾಗ್‌ ಶೆಟ್ಟಿ-ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ ಜೋಡಿ ಇಲ್ಲಿಯೂ ಕಣಕ್ಕಿಳಿಯಲಿದೆ. ಇವರ ಫಾರ್ಮ್ ಟೋಕಿಯೊದಲ್ಲೂ ಮುಂದುವರಿಯುವುದೆಂಬ ನಿರೀಕ್ಷೆ ಅಭಿಮಾನಿಗಳದ್ದು. 3ನೇ ಶ್ರೇಯಾಂಕದ ಭಾರತೀಯ ಜೋಡಿ ಇಂಡೋ ನೇಷ್ಯಾದ ಲಿಯೋ ರೋಲಿ ಕಾರ್ನಾಂಡೊ- ಡೇನಿಯಲ್‌ ಮಾರ್ಟಿನ್‌ ವಿರುದ್ಧ ಮೊದಲ ಸುತ್ತಿನ ಪಂದ್ಯ ಆಡಲಿದೆ.

ಮಲೇಷ್ಯಾ ಮಾಸ್ಟರ್ ಚಾಂಪಿಯನ್‌ ಎಚ್‌.ಎಸ್‌. ಪ್ರಣಯ್‌ 8ನೇ ಶ್ರೇಯಾಂಕ ಪಡೆದಿದ್ದು, ಚೀನದ ಶ್ರೇಯಾಂಕ ರಹಿತ ಆಟಗಾರ ಲಿ ಶಿ ಫೆಂಗ್‌ ಅವರನ್ನು ಎದು ರಿಸುವರು. ಕೆ. ಶ್ರೀಕಾಂತ್‌ ಚೈನೀಸ್‌ ತೈಪೆಯ ಚೌ ಟೀನ್‌ ಚೆನ್‌ ವಿರುದ್ಧ ಆಡಲಿದ್ದಾರೆ.

ಮರಳಿದ ಲಕ್ಷ್ಯ ಸೇನ್‌
ಕೊರಿಯಾ ಓಪನ್‌ನಲ್ಲಿ ಬ್ರೇಕ್‌ ಪಡೆ ದಿದ್ದ ಇನ್‌ಫಾರ್ಮ್ ಶಟ್ಲರ್‌ ಲಕ್ಷ್ಯ ಸೇನ್‌ ಮರಳಿ ಕಣಕ್ಕೆ ಇಳಿಯಲಿದ್ದಾರೆ. ಇವರ ಎದುರಾಳಿ ಭಾರತದವರೇ ಆದ ಪ್ರಿಯಾಂಶು ರಾಜಾವತ್‌. ಗೆದ್ದವರು ಇಂಡೋನೇಷ್ಯಾದ ಆ್ಯಂಟನಿ ಸಿನಿಸುಕ ಗಿಂಟಿಂಗ್‌ ಅವರನ್ನು ಎದುರಿಸುವ ಸಾಧ್ಯತೆ ಇದೆ. ವನಿತಾ ವಿಭಾಗ ದಲ್ಲಿ ಮಾಳವಿಕಾ ಬನ್ಸೋಡ್‌ ಆತಿಥೇಯ ನಾಡಿನ ಅಯಾ ಒಹೊರಿ ವಿರುದ್ಧ, ಆಕರ್ಷಿ ಕಶ್ಯಪ್‌ ಅಗ್ರ ಶ್ರೇಯಾಂಕದ ಅಕಾನೆ ಯಮಾಗುಚಿ ವಿರುದ್ಧ ಮೊದಲ ಸುತ್ತಿನ ಪಂದ್ಯ ಆಡುವರು. ಡಬಲ್ಸ್‌ ವಿಭಾಗದಲ್ಲಿ ಎಂ.ಆರ್‌. ಅರ್ಜುನ್‌-ಧ್ರುವ ಕಪಿಲ, ಟ್ರೀಸಾ ಜಾಲಿ-ಗಾಯತ್ರಿ ಗೋಪಿಚಂದ್‌ ಸ್ಪರ್ಧಿಸಲ್ಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next