Advertisement

Test Cricket: ಪ್ರವಾಸಿ ಇಂಗ್ಲೆಂಡ್‌ ವಿರುದ್ಧ ಪಾಕಿಸ್ಥಾನಕ್ಕೆ 152 ರನ್‌ಗಳ ಗೆಲುವು

01:16 AM Oct 19, 2024 | Team Udayavani |

ಮುಲ್ತಾನ್‌: ಸ್ವಿನ್‌ದ್ವಯರಾದ ಸಜಿದ್‌ ಖಾನ್‌ ಮತ್ತು ನೋಮನ್‌ ಅಲಿ ಅವರ ಮಾರಕ ದಾಳಿಯ ನೆರವಿನಿಂದ ಪಾಕಿಸ್ಥಾನ ತಂಡವು ಪ್ರವಾಸಿ ಇಂಗ್ಲೆಂಡ್‌ ತಂಡದೆ ದುರಿನ ದ್ವಿತೀಯ ಟೆಸ್ಟ್‌ ಪಂದ್ಯದಲ್ಲಿ 152 ರನ್ನುಗಳ ಜಯ ಸಾಧಿಸಿದೆ.

Advertisement

ಈ ಗೆಲುವಿನಿಂದ ಮೂರು ಪಂದ್ಯಗಳ ಟೆಸ್ಟ್‌ ಸರಣಿ 1-1 ಸಮಬಲಗೊಂಡಿದೆ. ಸರಣಿ ನಿರ್ಣಾಯಕ ಪಂದ್ಯ ಗುರುವಾರದಿಂದ ರಾವಲ್ಪಿಂಡಿಯಲ್ಲಿ ಆರಂಭವಾಗಲಿದೆ. ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್‌ ಇನ್ನಿಂಗ್ಸ್‌ ಮತ್ತು 47 ರನ್ನುಗಳಿಂದ ಗೆಲುವು ಸಾಧಿಸಿತ್ತು. ಎಡಗೈ ಸ್ಪಿನ್ನರ್‌ ನೋಮನ್‌ ಅಲಿ ಮತ್ತು ಸಜಿದ್‌ ಖಾನ್‌ ಇಂಗ್ಲೆಂಡಿನ ಎಲ್ಲ 20 ವಿಕೆಟ್‌ಗಳನ್ನು ಹಾರಿಸಿ ತಂಡದ ಭರ್ಜರಿ ಗೆಲುವಿಗೆ ಮಹತ್ತರ ಕೊಡುಗೆ ಸಲ್ಲಿಸಿದರು.

ಗೆಲ್ಲಲು 297 ರನ್‌ ಗಳಿಸುವ ಗುರಿ ಪಡೆದ ಇಂಗ್ಲೆಂಡ್‌ ತಂಡವು ಸಜಿದ್‌ ಮತ್ತು ನೋಮನ್‌ ದಾಳಿಗೆ ತತ್ತರಿಸಿ ಕೇವಲ 144 ರನ್ನಿಗೆ ಆಲೌಟಾಗಿ ಸೋಲನ್ನು ಕಂಡಿತು. ಇಂಗ್ಲೆಂಡಿನ ದ್ವಿತೀಯ ಇನ್ನಿಂಗ್ಸ್‌ ವೇಳೆ ಸಜಿದ್‌ ಮತ್ತು ನೋಮನ್‌ ಮಾತ್ರ ದಾಳಿ ಸಂಘಟಿಸಿದ್ದರು. ಅವರಿಬ್ಬರು ನಿರಂತರ 33.3 ಓವರ್‌ ದಾಳಿ ಸಂಘಟಿಸಿ ಇಂಗ್ಲೆಂಡಿನ 10 ವಿಕೆಟ್‌ ಉರುಳಿಸಿದರು. ನೋಮನ್‌ 46 ಕ್ಕೆ 8 ವಿಕೆಟ್‌ ಪಡೆದರೆ ಇನ್ನೆರಡು ವಿಕೆಟನ್ನು ಸಜಿದ್‌ ಪಡೆದರು. ಮೊದಲ ಇನ್ನಿಂಗ್ಸ್‌ನಲ್ಲಿ ಸಜಿದ್‌ 7 ಮತ್ತು ನೋಮನ್‌ ಮೂರು ವಿಕೆಟ್‌ ಉರುಳಿಸಿದ್ದರು.

ಇದು ನಾಯಕರಾಗಿ ಆಯ್ಕೆಯಾದ ಬಳಿಕ ಶಾನ್‌ ಮಸೂದ್‌ ಪಾಲಿಗೆ ಚೊಚ್ಚಲ ಗೆಲುವಿನ ಸಂಭ್ರಮವಾಗಿದೆ. ಕಳೆದ ವರ್ಷ ಅವರು ಟೆಸ್ಟ್‌ ತಂಡದ ನಾಯಕರಾಗಿ ನೇಮಕಗೊಂಡ ಬಳಿಕ ಆಡಿದ ಆರು ಪಂದ್ಯಗಳಲ್ಲಿ ಪಾಕಿಸ್ಥಾನ ಸೋಲನ್ನು ಕಂಡಿತ್ತು. ಇಂಗ್ಲೆಂಡ್‌ ವಿರುದ್ಧದ ನಾಲ್ಕು ಪಂದ್ಯ ಸಹಿತ ತವರಿನಲ್ಲಿ ಸತತ 11 ಪಂದ್ಯಗಳಲ್ಲಿ ಸೋತ ಬಳಿಕ ಇದು ಪಾಕಿಸ್ಥಾನದ ಮೊದಲ ಗೆಲುವು ಆಗಿದೆ.

ಸಜಿದ್‌-ನೋಮನ್‌ 20 ವಿಕೆಟ್‌
ಸ್ಪಿನ್ನರ್‌ಗಳಾದ ಸಜಿದ್‌ ಖಾನ್‌ ಮತ್ತು ನೋಮನ್‌ ಅಲಿ ಅದ್ಭುತ ದಾಳಿ ಸಂಘಟಿಸಿ ಇಂಗ್ಲೆಂಡಿನ ಎಲ್ಲ 20 ವಿಕೆಟ್‌ ಹಾರಿಸಿರುವುದು 1972ರ ಬಳಿಕ ಮೊದಲ ನಿದರ್ಶನವಾಗಿದೆ. ಸಜಿದ್‌ ಖಾನ್‌ 111ಕ್ಕೆ 7 ಮತ್ತು 93ಕ್ಕೆ 2 ಹಾಗೂ ನೋಮನ್‌ ಅಲಿ 101ಕ್ಕೆ 3 ಮತ್ತು 46ಕ್ಕೆ 8 ವಿಕೆಟ್‌ ಹಾರಿಸಿ ಗಮನ ಸೆಳೆದಿದ್ದಾರೆ. 1972ರಲ್ಲಿ ಇಂಗ್ಲೆಂಡ್‌ ವಿರುದ್ದವೇ ಲಾರ್ಡ್ಸ್‌ ಪಂದ್ಯದಲ್ಲಿ ಆಸ್ಟ್ರೇಲಿಯದ ಡೆನಿಸ್‌ ಲಿಲ್ಲಿ ಮತ್ತು ಬಾಬ್‌ ಮ್ಯಾಸ್ಸೀ ಇಂಗ್ಲೆಂಡಿನ ಎಲ್ಲ 20 ವಿಕೆಟ್‌ ಕಿತ್ತು ತಂಡಕ್ಕೆ ಜಯ ತಂದುಕೊಟ್ಟಿದ್ದರು. ಟೆಸ್ಟ್‌ನಲ್ಲಿ ಇಬ್ಬರು ಬೌಲರ್‌ಗಳು ಎಲ್ಲ 20 ವಿಕೆಟ್‌ ಕಿತ್ತಿರುವುದು ಇದು ಏಳನೇ ಸಲವಾಗಿದೆ.

Advertisement

ಸಂಕ್ಷಿಪ್ತ ಸ್ಕೋರು: ಪಾಕಿಸ್ಥಾನ 366 ಮತ್ತು 221; ಇಂಗ್ಲೆಂಡ್‌ 291 ಮತ್ತು 144 (ಬೆನ್‌ ಸ್ಟೋಕ್ಸ್‌ 37, ನೋಮನ್‌ ಅಲಿ 46ಕ್ಕೆ 8, ಸಜಿದ್‌ ಖಾನ್‌ 93ಕ್ಕೆ 2).

Advertisement

Udayavani is now on Telegram. Click here to join our channel and stay updated with the latest news.

Next