Advertisement

ಮನೆಯಲ್ಲಿ ಪರೀಕ್ಷೆ; 38 ವಿದ್ಯಾರ್ಥಿಗಳಿಗೆ ಜಾಮೀನು

11:20 PM May 13, 2019 | Team Udayavani |

ರಾಯಚೂರು: ಗುಲ್ಬರ್ಗ ವಿಶ್ವವಿದ್ಯಾಲಯದಿಂದ ನಡೆದ ಬಿಕಾಂ ಪರೀಕ್ಷೆಯನ್ನು ನಗರದ ಮನೆಯೊಂದರಲ್ಲಿ ಬರೆಸಿದ ಪ್ರಕರಣಕ್ಕೆ ಸಂಬಂ ಧಿಸಿ ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಪಡೆದರೆ, 38 ವಿದ್ಯಾರ್ಥಿಗಳಿಗೆ ಇಲ್ಲಿನ ಜೆಎಂಎಫ್‌ ಒಂದನೇ ಹೆಚ್ಚುವರಿ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

Advertisement

ನಗರದ ಐಡಿಎಸ್‌ಎಂಟಿ ಲೇಔಟ್‌ನ ಮನೆಯಲ್ಲಿ ಭಾನುವಾರ ಬಿಕಾಂ ಎರಡನೇ ಸೆಮಿಸ್ಟರ್‌ನ ಪರೀಕ್ಷೆ ನಡೆದಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಜಾಗೃತ ದಳ ಸಿಬ್ಬಂದಿ, ಪ್ರಶ್ನೆಪತ್ರಿಕೆ, ಉತ್ತರ ಪತ್ರಿಕೆಗಳನ್ನು ವಶಕ್ಕೆ ಪಡೆದು ಅಕ್ರಮದ ಕುರಿತು ಪಶ್ಚಿಮ ಠಾಣೆಯಲ್ಲಿ ದೂರು ನೀಡಿತ್ತು. ದೂರಿನ ಮೇರೆಗೆ ಸೆಕ್ಷನ್‌ 420, ಶಿಕ್ಷಣ ಕಾಯ್ದೆ ಉಲ್ಲಂಘನೆ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಪರೀಕ್ಷೆಯಲ್ಲಿ ವಿವೇಕಾನಂದ, ಡಿ.ಕೆ.ಭಂಡಾರಿ ಹಾಗೂ ಜ್ಞಾನಗಂಗಾ ಕಾಲೇಜಿನ ವಿದ್ಯಾರ್ಥಿಗಳಿದ್ದರು. ಘಟನೆಯ ಪ್ರಮುಖ ರೂವಾರಿ ನ್ಯೂ ಚೈತನ್ಯ ಕಾಲೇಜಿನ ಮುಖ್ಯಸ್ಥ ಪವನಕುಮಾರ್‌, ಪ್ರಮುಖ ಆರೋಪಿ ನಿರಂಜನ್‌, ವಿದ್ಯಾರ್ಥಿನಿಯರೂ ಸೇರಿ 40 ಜನರನ್ನು ವಶಕ್ಕೆ ಪಡೆಯಲಾಗಿತ್ತು.

ಬಳಿಕ ರಿಮ್ಸ್‌ನಲ್ಲಿ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ನಡೆಸಿ ಮಧ್ಯರಾತ್ರಿ ಜೆಎಂಎಫ್‌ಸಿ ಒಂದನೇ ಹೆಚ್ಚುವರಿ ನ್ಯಾಯಾ ಧೀಶರ ಎದುರು ಹಾಜರುಪಡಿಸಲಾಗಿತ್ತು. ಆದರೆ, ವಿದ್ಯಾರ್ಥಿಗಳ ಭವಿಷ್ಯ ಕಾಪಾಡುವಂತೆ ಪಾಲಕರು ಅಂಗಲಾಚಿದ ಪರಿಣಾಮ ನ್ಯಾಯಾ ಧೀಶರಾದ ಅವಿನಾಶ, ಎಲ್ಲ ವಿದ್ಯಾರ್ಥಿಗಳಿಂದ ಬಾಂಡ್‌ ಬರೆಸಿಕೊಂಡು ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದ್ದಾರೆ. ಆದರೆ, ಪವನಕುಮಾರ್‌, ನಿರಂಜನ್‌ಗೆ ಜಾಮೀನು ಸಿಕ್ಕಿಲ್ಲ. ಈ ಪ್ರಕ್ರಿಯೆ ಮುಗಿಯುವ ವೇಳೆಗೆ ಬೆಳಗಿನ ಜಾವ 3 ಗಂಟೆ ಆಗಿತ್ತು.

ಪರೀಕ್ಷಾ ಕೇಂದ್ರ ಸ್ಥಳಾಂತರ: ಇನ್ನು ಘಟನೆ ಹಿನ್ನೆಲೆಯಲ್ಲಿ ನಗರಕ್ಕೆ ಆಗಮಿಸಿದ ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿ ಪ್ರೊ| ಎಸ್‌.ಆರ್‌.ನಿರಂಜನ್‌ ನೇತೃತ್ವದ ತಂಡ ಪ್ರಕರಣಕ್ಕೆ ಸಂಬಂಧಿ ಸಿದ ಮೂರು ಕಾಲೇಜುಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯಿತು. ಬೆಳಗ್ಗೆ ವಿವೇಕಾನಂದ ಕಾಲೇಜ್‌ಗೆ ತೆರಳಿದ ತಂಡ, ಪರೀಕ್ಷಾ ಅಕ್ರಮಕ್ಕೆ ಕಾರಣವಾದ ಅಂಶಗಳ ಕುರಿತು ಮಾಹಿತಿ ಸಂಗ್ರಹಿಸಿದರು. ಬಳಿಕ ಡಿ.ಕೆ.ಭಂಡಾರಿ, ಜ್ಞಾನಗಂಗಾ ಕಾಲೇಜುಗಳಿಗೆ ತೆರಳಿ ಮಾಹಿತಿ ಪಡೆದರು.

Advertisement

ಬಳಿಕ ಪಶ್ಚಿಮ ಠಾಣೆಗೆ ಭೇಟಿ ನೀಡಿ ಪೊಲೀಸರಿಂದ ಮಾಹಿತಿ ಪಡೆದು ನಿರ್ಗಮಿಸಿತು. ಅದರ ಜತೆಗೆ ಈ ಮೂರು ಕಾಲೇಜುಗಳ ಪರೀಕ್ಷಾ ಕೇಂದ್ರಗಳನ್ನು ಸ್ಥಳಾಂತರಿಸಲು ಕುಲಪತಿ ಆದೇಶಿಸಿದ್ದಾರೆ. .ಕೆ.ಭಂಡಾರಿ ಕಾಲೇಜಿನ ಪರೀಕ್ಷಾರ್ಥಿಗಳನ್ನು ಎಂಇಎಂ ಕಾಲೇಜಿಗೆ, ಜ್ಞಾನಗಂಗಾ ಕಾಲೇಜಿನ ವಿದ್ಯಾರ್ಥಿಗಳನ್ನು ಬಿಆರ್‌ಬಿ ಕಾಲೇಜಿಗೆ, ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಗಳನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿದು ಬಂದಿದೆ.

ಮಾಧ್ಯಮಗಳ ಮೇಲೆ ಪಾಲಕರು ಗರಂ: ಈ ಅಕ್ರಮದಲ್ಲಿ ವಿದ್ಯಾರ್ಥಿಗಳು ಸಿಲುಕಿಕೊಂಡು ಠಾಣೆ ಮೆಟ್ಟಿಲೇರುತ್ತಿದ್ದಂತೆ ಪಾಲಕರು ತರಾತುರಿಯಲ್ಲಿ ಆಗಮಿಸಿದ್ದರು. ಮಕ್ಕಳ ಭವಿಷ್ಯ ಹಾಳಾಗದಂತೆ ನೋಡಿಕೊಳ್ಳಿ ಎಂದು ಪೊಲೀಸರಿಗೆ ಹಾಗೂ ವಕೀಲರ ಎದುರು ಅಂಗಲಾಚಿ ಬೇಡುತ್ತಿದ್ದರು. ಇದೇ ವೇಳೆ ಕೆಲ ಪಾಲಕರು ನಮ್ಮ ಮಕ್ಕಳನ್ನು ಮಾಧ್ಯಮಗಳಲ್ಲಿ ಯಾಕೆ ತೋರಿಸಿದ್ದೀರಿ ಎಂದು ಮಾಧ್ಯಮದವರ ಎದುರು ಹರಿಹಾಯ್ದ ಪ್ರಸಂಗವೂ ನಡೆಯಿತು.

ಪರೀಕ್ಷೆ ಅಕ್ರಮಕೋರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ
ರಾಯಚೂರು: “ಬಿಕಾಂ ಪರೀಕ್ಷೆಯನ್ನು ಮನೆಯಲ್ಲಿ ಕುಳಿತು ಬರೆದ ಪ್ರಕರಣದ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥ ವ್ಯಕ್ತಿ ಹಾಗೂ ಸಂಸ್ಥೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವುದಾಗಿ’ ಗುಲ್ಬರ್ಗ ವಿವಿ ಕುಲಪತಿ ಪ್ರೊ| ಎಸ್‌.ಆರ. ನಿರಂಜನ್‌ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, 4 ವರ್ಷದಲ್ಲಿ ಸಾಕಷ್ಟು ಅಕ್ರಮಗಳಿಗೆ ಕಡಿವಾಣ ಹಾಕಲಾಗಿದೆ. ಇದೇ ಕಾರಣಕ್ಕೆ ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಕ್ಲಸ್ಟರ್‌ ಪದ್ಧತಿ ಜಾರಿಗೊಳಿಸಲಾಗಿತ್ತು. ಒಂದೇ ಕಾಲೇಜಿನವರು ಒಂದೇ ಕೇಂದ್ರದಲ್ಲಿ ಪರೀಕ್ಷೆ ಬರೆಯಬಾರದು ಎಂಬುದೇ ಇದರ ಉದ್ದೇಶ. ಆದರೆ, ಇಲ್ಲಿ ಮನೆಯಲ್ಲಿ ಪರೀಕ್ಷೆ ಹೇಗೆ ನಡೆಸಲಾಗಿದೆ? ಅವರಿಗೆ ಪ್ರಶ್ನೆಪತ್ರಿಕೆ, ಉತ್ತರ ಪತ್ರಿಕೆ ಹೇಗೆ ತಲುಪಿದೆ. ಇದರ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ಸೂಕ್ತ ತನಿಖೆ ನಡೆಸಲಾಗುವುದು ಎಂದರು.

ಕುಲಸಚಿವ ಸೋಮಶೇಖರ, ಮೌಲ್ಯಮಾಪನ ವಿಭಾಗದ ಕುಲಸಚಿವ ಡಿ.ಎಂ.ಮದರಿ, ಪರೀಕ್ಷಾ ಸುಧಾರಣಾ ಸಮಿತಿ ಮುಖ್ಯಸ್ಥ ಡಾ| ವಿದ್ಯಾಸಾಗರ್‌, ಜಾಗೃತ ದಳದ ಮುಖ್ಯಸ್ಥ ಪ್ರೊ| ಪ್ರಾಣೇಶ ಕುಲಕರ್ಣಿ ಇದ್ದರು.

ಇದೊಂದು ಗಂಭೀರ ಪ್ರಕರಣ. ವಿದ್ಯಾರ್ಥಿಗಳ ಪ್ರವೇಶಾತಿ ಸಂಖ್ಯೆ, ಕಾಲೇಜಿನ ವಿವರ, ಎಲ್ಲಿಂದ, ಯಾರಿಗೆ ಪ್ರಶ್ನೆ ಪತ್ರಿಕೆಗಳು ರವಾನೆಯಾಗಿವೆ, ವಿದ್ಯಾರ್ಥಿಗಳನ್ನು ದಾರಿ ತಪ್ಪಿಸಿದ್ದು ಯಾರು, ಈಗ ಸೆರೆ ಸಿಕ್ಕಿರುವ ಇಬ್ಬರ ಪಾತ್ರವೇನು ಎಂಬ ವಿವರ ಪಡೆಯಲಾಗುವುದು. ಇದರಲ್ಲಿ ಭಾಗಿಯಾದ ಸ್ವಾಮಿ ವಿವೇಕಾನಂದ, ಡಿ.ಕೆ.ಭಂಡಾರಿ, ಜ್ಞಾನಗಂಗಾ ಕಾಲೇಜಿನ ವಿದ್ಯಾರ್ಥಿಗಳ ಸಂಪೂರ್ಣ ಮಾಹಿತಿ ಪಡೆಯಲಾಗಿದೆ. ಹಿಂದೆ 215 ಪರೀಕ್ಷಾ ಕೇಂದ್ರಗಳಿದ್ದವು.

ಅಕ್ರಮ ಎಸಗಿದ ಅನೇಕ ಕೇಂದ್ರಗಳನ್ನು ರದ್ದುಗೊಳಿಸುತ್ತ 140ಕ್ಕೆ ತಂದು ನಿಲ್ಲಿಸಿದ್ದೇವೆ. ಈ ಮೂರು ಪರೀಕ್ಷಾ ಕೇಂದ್ರಗಳನ್ನು ತಕ್ಷಣಕ್ಕೆ ರದ್ದುಪಡಿಸಿದಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಸೋಮವಾರ ಪರೀಕ್ಷೆಗೆ ಅವಕಾಶ ನೀಡಲಾಗಿದೆ. ಪೊಲೀಸರಿಂದ ಮಾಹಿತಿ ಪಡೆದು ಕೂಲಂಕಷವಾಗಿ ಪರಿಶೀಲಿಸಿ ಕ್ರಮ ಜರುಗಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next