ವಾಷಿಂಗ್ಟನ್: ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ನಾಸಾ) ವಿಜ್ಞಾನಿಗಳು, ಭೂಮಿಯನ್ನೇ ಹೋಲುವ ಗ್ರಹವೊಂದನ್ನು ಪತ್ತೆ ಮಾಡಿರುವುದಾಗಿ ಮಂಗಳವಾರ ಘೋಷಿಸಿದ್ದಾರೆ. ಅನ್ಯ ಸೌರಮಂಡಲಗಳಲ್ಲಿ ಇರಬಹುದಾದ ಭೂಮಿಯನ್ನು ಹೋಲುವ ಗ್ರಹಗಳನ್ನು ಪತ್ತೆ ಮಾಡಲೆಂದೇ ಹಾರಿಬಿಡಲಾಗಿರುವ ‘ಟ್ರಾನ್ಸಿಟಿಂಗ್ ಎಕ್ಸೋಪ್ಲಾನೆಟ್ ಸರ್ವೇ ಸ್ಯಾಟಲೈಟ್ (ಟಿಇಎಸ್‌ಎಸ್)’ ಎಂಬ ಉಪಗ್ರಹದ ಮೂಲಕ ಇದನ್ನು ಪತ್ತೆ ಹಚ್ಚಿರುವುದಾಗಿ ವಿಜ್ಞಾನಿಗಳು ತಿಳಿಸಿದ್ದಾರೆ.
ಇದಕ್ಕೆ ‘ಟಿಒಐ 700 ಡಿ’ ಎಂದು ಹೆಸರಿಸಲಾಗಿದ್ದು, ಇದು ನಾವಿರುವ ಭೂಮಿಯಿಂದ 101.5 ಜ್ಯೋತಿರ್ವರ್ಷಗಳಷ್ಟು ದೂರ ಇದೆ. ಆ ಗ್ರಹವು ಘನೀಕೃತ ನೀರಿನಿಂದ ತುಂಬಿದೆ. ತನ್ನ ಸೌರಮಂಡಲದ ಸೂರ್ಯನಿಂದ ನಿರ್ದಿಷ್ಟ ಅಂತರದಲ್ಲಿರುವ ಆ ಗ್ರಹ ನಾವಿರುವ ಭೂಮಿ ಗಿಂತ ನಾಲ್ಕು ಪಟ್ಟು ದೊಡ್ಡದಿದ್ದು, ಜೀವಿಗಳಿಗೆ ವಾಸಯೋಗ್ಯವಾದ ಪರಿಸರದೊಂದಿಗೆ ಆ ಗ್ರಹ ತನ್ನ ಸೂರ್ಯನ ಸುತ್ತ ಗಿರಕಿ ಹೊಡೆಯುತ್ತಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
2018ರ ಏಪ್ರಿಲ್‌ನಲ್ಲಿ ಹಾರಿಬಿಡಲಾಗಿದ್ದ ಟಿಇಎಸ್‌ಎಸ್, ಈವರೆಗೆ ಭೂಮಿಯನ್ನು ಹೋಲುವ 4,000 ಗ್ರಹಗಳನ್ನು ಪತ್ತೆ ಮಾಡಿದೆ. ಆದರೆ, ತೀರಾ ಇತ್ತೀಚೆಗೆ, ದೈತ್ಯ ಗ್ರಹಗಳಾದ ‘ಟಿಒಐ 700 ಎ’, ‘ಟಿಒಐ 700 ಬಿ’, “ಟಿಒಐ 700 ಸಿ’ ಹಾಗೂ ‘ಟಿಒಐ 700 ಡಿ’ ಎಂಬ ಗ್ರಹಗಳನ್ನು ಪತ್ತೆ ಹಚ್ಚಿದೆ ಎಂದು ನಾಸಾ ಹೇಳಿದೆ.
– 2018ರಲ್ಲಿ ಹಾರಿಬಿಡಲಾಗಿದ್ದ ವಿಶೇಷ ಉಪಗ್ರಹದಿಂದ ಅನ್ವೇಷಣೆ
– ನಾವಿರುವ ಭೂಮಿಗಿಂತ ನಾಲ್ಕು ಪಟ್ಟು ದೊಡ್ಡದಿದೆ ಟಿಒಐ 700 ಡಿ
– ನಮ್ಮ ಭೂಮಿಗೂ ಹೊಸ ಗ್ರಹಕ್ಕೂ ಇರುವ ದೂರ 101.5 ಜ್ಯೋತಿವರ್ಷ
– ಹೊಸ ಗ್ರಹದಲ್ಲಿ ನೀರು ತುಂಬಿದ್ದು ಅದು ಘನೀಕೃತವಾಗಿದೆ ಎಂದ ವಿಜ್ಞಾನಿಗಳು