ನವದೆಹಲಿ: ಮೂರನೇ ಅವಧಿಯ ಎನ್ ಡಿಎ ಸರ್ಕಾರದಲ್ಲಿ ಮೊದಲ ಬಾರಿಗೆ ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿರುವ ಎಚ್.ಡಿ.ಕುಮಾರಸ್ವಾಮಿ, ನಾನು ಸ್ವಾರ್ಥದ ವ್ಯಕ್ತಿ ಅಲ್ಲ ಹಾಗೂ ಸಚಿವನಾಗಿ ನನ್ನ ಅಭಿವೃದ್ಧಿ ಕಾರ್ಯ ಕೇವಲ ನನ್ನ ರಾಜ್ಯಕ್ಕೆ ಮಾತ್ರವಲ್ಲ, ಇಡೀ ದೇಶಕ್ಕೆ ವಿಸ್ತರಿಸಬೇಕಿದೆ ಎಂದು ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.
ಇದನ್ನೂ ಓದಿ:BJP ಯಿಂದ ಅನ್ಯಾಯ; ಜಿಗಜಿಣಗಿಗೆ ಉಪ ಪ್ರಧಾನಿ ಹುದ್ದೆ ನೀಡಲು ಮಾದಿಗರ ಒಕ್ಕೂಟ ಒತ್ತಾಯ |
ಉಕ್ಕು ಮತ್ತು ಭಾರೀ ಕೈಗಾರಿಕಾ ಸಚಿವರಾಗಿ ಅಧಿಕಾರ ಸ್ವೀಕರಿಸಿರುವ ಎಚ್ ಡಿಕೆ ಬಳಿ ಸುದ್ದಿಗಾರರು ಮಾತನಾಡುತ್ತ, ಟೆಸ್ಲಾದಂತಹ ಕಂಪನಿಯನ್ನು ಕರ್ನಾಟಕದಲ್ಲಿ ಹೂಡಿಕೆ ಮಾಡಿಸುವ ಬಗ್ಗೆ ಆಸಕ್ತಿ ಹೊಂದಿದ್ದೀರಾ ಎಂದು ಪ್ರಶ್ನಿಸಿದ್ದರು.
“ ಹೌದು ಆ ಪ್ರಯತ್ನ ನಡೆಸುತ್ತೇವೆ ಎಂದ ಕುಮಾರಸ್ವಾಮಿ, ನನ್ನ ಅಭಿವೃದ್ಧಿ ಕಾಳಜಿ ಕೇವಲ ಕರ್ನಾಟಕ ಮಾತ್ರ ಸೀಮಿತವಲ್ಲ, ಇದು ಇಡೀ ದೇಶದ ಅಭಿವೃದ್ಧಿಗೆ ಸಂಬಂಧಿಸಿದ್ದು, ನಾವೆಲ್ಲ ಒಟ್ಟಾಗಿ ಕಾರ್ಯನಿರ್ವಹಿಸಬೇಕಾಗಿದೆ. ನಾನು ಸ್ವಾರ್ಥ ವ್ಯಕ್ತಿ ಅಲ್ಲ, ನಾವು ದೇಶದ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಮೋದಿಗೆ ಮಸ್ಕ್ ಅಭಿನಂದನೆ:
ನರೇಂದ್ರ ಮೋದಿ ಅವರು ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅಭಿನಂದನೆ ಸಲ್ಲಿಸಿದ್ದರು. ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಮೋದಿ ಅವರಿಗೆ ಅಭಿನಂದನೆಗಳು, ಮುಂಬರುವ ದಿನಗಳಲ್ಲಿ ಭಾರತದಲ್ಲಿ ನಮ್ಮ ಕಂಪನಿ ಕಾರ್ಯನಿರ್ವಹಿಸಲು ಅನುಕೂಲವಾಗಲಿದೆಯೇ ಎಂಬ ನಿರೀಕ್ಷೆಯಲ್ಲಿರುವುದಾಗಿ ಎಲಾನ್ ಮಸ್ಕ್ ಟ್ವೀಟ್ ಮಾಡಿದ್ದರು.