ನವದೆಹಲಿ: ಜಮ್ಮು-ಕಾಶ್ಮೀರ ಸೇರಿದಂತೆ ಭಾರತದ ವಿವಿಧ ಭಾಗಗಳಲ್ಲಿ ಪಾಕಿಸ್ಥಾನ ಪ್ರೇರಿತ ಭಯೋತ್ಪಾದಕ ಚಟುವಟಿಕೆಗಳನ್ನು ವಿಶ್ವದ ಅನೇಕ ರಾಷ್ಟ್ರಗಳು ಒಕ್ಕೊರಳಿನಿಂದ ಖಂಡಿಸುತ್ತಿವೆ ಮತ್ತು ಭಯೋತ್ಪಾದಕರಿಗೆ ಬೆಂಬಲ ನೀಡುತ್ತಿರುವ ಪಾಕಿಸ್ಥಾನದ ನೀಚ ಬುದ್ದಿಯನ್ನು ಜಾಗತಿಕ ಮಟ್ಟದಲ್ಲಿ ಬೆತ್ತಲು ಮಾಡುತ್ತಿರುವ ಭಾರತದ ಪ್ರಯತ್ನಕ್ಕೆ ಈಗಾಗಲೇ ಹಲವು ರಾಷ್ಟ್ರಗಳು ತಮ್ಮ ಬೆಂಬಲವನ್ನು ವ್ಯಕ್ತಪಡಿಸುತ್ತಿವೆ.
ಈ ಅಂಶಕ್ಕೆ ಪೂರಕವಾಗಿರುವ ಬೆಳವಣಿಗೆಯೊಂದರಲ್ಲಿ ಪ್ರಭಾವಿ ಪೋಲಂಡ್ ಸಂಸದ ಮತ್ತು ಯುರೋಪಿಯನ್ ಪಾರ್ಲಿಮೆಂಟಿನ ಸದಸ್ಯರಲ್ಲಿ ಒಬ್ಬರಾಗಿರುವ ರಿಸರ್ಡ್ ಝಾರ್ನೆಕಿ ಅವರು ಭಾರತದ ಪ್ರಜಾಪ್ರಭುತ್ವವನ್ನು ‘ಗ್ರೇಟ್ ಡೆಮಾಕ್ರಸಿ’ ಎಂದು ಬಣ್ಣಿಸಿದ್ದಾರೆ. ಮತ್ತು ಇದೇ ಸಂದರ್ಭದಲ್ಲಿ, ಭಯೋತ್ಪಾದಕರ ಸ್ವರ್ಗವಾಗಿರುವ ಪಾಕಿಸ್ಥಾನಕ್ಕೆ ಝಾರ್ನೆಕಿ ಅವರು ಮಾತಿನ ಚಾಟಿ ಬೀಸಿದ್ದಾರೆ.
‘ಭಾರತವು ವಿಶ್ವದಲ್ಲೇ ಬಲಿಷ್ಠವಾಗಿರುವ ಪ್ರಜಾಪ್ರಭುತ್ವವನ್ನು ಹೊಂದಿದೆ. ಈ ದೇಶದ ಜಮ್ಮು ಮತ್ತುಕಾಶ್ಮೀರ ಭಾಗಗಳಲ್ಲಿ ಸಂಭವಿಸಿರುವ ಭಯೋತ್ಪಾದನಾ ಕೃತ್ಯಗಳನ್ನು ನಾವೆಲ್ಲಾ ಗಮನಿಸಲೇಬೇಕಾಗಿದೆ.
ಇಲ್ಲಿಗೆ ಭಯೋತ್ಪಾದಕರೇನೂ ಚಂದ್ರಲೋಕದಿಂದ ಇಳಿದುಬರುತ್ತಿಲ್ಲ, ಬದಲಾಗಿ ಇವರೆಲ್ಲಾ ನೆರೆರಾಷ್ಟ್ರದಿಂದಲೇ ನುಸುಳಿ ಬರುತ್ತಿದ್ದಾರೆ. ಹಾಗಾಗಿ ನಾವೆಲ್ಲರೂ ಭಾರತಕ್ಕೆ ಬೆಂಬಲವನ್ನು ನೀಡಲೇಬೆಕು’ ಎಂದು ರಿಸರ್ಡ್ ಝಾರ್ನೆಕಿ ಅವರು ಐರೋಪ್ಯ ಒಕ್ಕೂಟದ ಸಂಸತ್ತಿನ ಸರ್ವಪಕ್ಷಗಳ ಸಂಸದರ ಸಭೆಯಲ್ಲಿ ಮಾತನಾಡುತ್ತಾ ಅಭಿಪ್ರಾಯಪಟ್ಟರು.
ಇನ್ನು ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಐರೋಪ್ಯ ಒಕ್ಕೂಟದ ಸಂಸತ್ತಿನ ಇನ್ನೋರ್ವ ಸದಸ್ಯ ಮಾರ್ಟುಸ್ಯುಯೆಲ್ಲೋ ಅವರು ಪಾಕಿಸ್ಥಾನವು ಪದೇ ಪದೇ ಅಣ್ವಸ್ತ್ರ ಯುದ್ಧದ ಬೆದರಿಕೆಯನ್ನು ಹಾಕುತ್ತಿದೆ ಇದು ಯುರೋಪಿಯನ್ ಒಕ್ಕೂಟವು ಗಂಭೀರವಾಗಿ ಪರಿಗಣಿಸಬೇಕಾಗಿರುವ ವಿಚಾರವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಯುರೋಪ್ ನಾದ್ಯಂತ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಭಯೋತ್ಪಾದಕರು ಯೋಜನೆಗಳನ್ನು ಪಾಕಿಸ್ಥಾನದ ಯಾವುದೋ ಮೂಲೆಯಲ್ಲಿ ಕುಳಿತು ಹೆಣೆಯುತ್ತಿರುತ್ತಾರೆ ಎಂದು ಇದೇ ಸಂಸದ ಪಾಕ್ ಮೇಲೆ ತನ್ನ ಆಕ್ರೋಶವನ್ನು ವ್ಯಕ್ತಪಡಿಸಿದರು.
ಕಾಶ್ಮೀರ ಸಮಸ್ಯೆಗೆ ಭಾರತ ಮತ್ತು ಪಾಕಿಸ್ಥಾನಗಳೆರಡೂ ದ್ವಿಪಕ್ಷೀಯ ಮಾತುಕತೆಗಳ ಮೂಲಕ ಒಂದು ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಮತ್ತು ಕಾಶ್ಮೀರಿಗರ ಆತ್ಮಗೌರವ ಮತ್ತು ರಾಜಕೀಯ ಹಿತಾಸಕ್ತಿಗಳಿಗೆ ಧಕ್ಕೆಯಾಗದ ರೀತಿಯಲ್ಲಿ ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕು ಎಂದು ಐರೋಪ್ಯ ಒಕ್ಕೂಟದ ಬಹಳಷ್ಟು ಸದಸ್ಯರು ಅಭಿಪ್ರಾಯಪಟ್ಟರು.