Advertisement

ಭಯೋತ್ಪಾದಕರಿಂದ ದ.ಕ.  ಜಿಲ್ಲೆಯೂ ಸುರಕ್ಷಿತವಲ್ಲ: ಸಿ.ಟಿ. ರವಿ

11:48 AM Oct 05, 2017 | |

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯೂ ಭಯೋತ್ಪಾದಕರಿಂದ ಸುರಕ್ಷಿತವಲ್ಲ. ಐಸಿಸ್‌ ಉಗ್ರಗಾಮಿಗಳು ಜಿಲ್ಲೆಯಲ್ಲಿಯೂ ನೆಲೆಯೂರಿರುವ ಬಗ್ಗೆ ವ್ಯಾಪಕವಾಗಿ ಚರ್ಚೆಯಾಗುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಬಂಟ್ವಾಳ ಕ್ಷೇತ್ರ ಬಿಜೆಪಿ ಚುನಾವಣಾ ಉಸ್ತುವಾರಿ, ಶಾಸಕ ಸಿ.ಟಿ. ರವಿ ಒತ್ತಾಯಿಸಿದ್ದಾರೆ.

Advertisement

ಅವರು ಅ. 4ರಂದು ಬಿ.ಸಿ. ರೋಡ್‌ ಬಿಜೆಪಿ ಪಕ್ಷ ಕಚೇರಿಗೆ ಭೇಟಿ ನೀಡಿದ ಸಂದರ್ಭ ಮಾಧ್ಯಮದವ ರೊಂದಿಗೆ ಮಾತನಾಡಿದರು. ಶಂಕಿತ ಭಯೋತ್ಪಾದಕ ಕೇಂದ್ರಗಳ ಇರುವಿಕೆ ಮತ್ತು ಚಟುವಟಿಕೆಯ ಬಗ್ಗೆ ಮಾಧ್ಯಮ ವರದಿಗಳಲ್ಲಿ ಉಲ್ಲೇಖ ಆಗಿರುವುದನ್ನು ಪ್ರಸ್ತಾವಿಸಿದರು. ಈ ಹಿನ್ನೆಲೆಯಲ್ಲಿ ಇವರಿಗೆ ಎಲ್ಲಿ ತರಬೇತಿ ನೀಡಲಾಗುತ್ತಿದೆ ಎಂಬುದನ್ನು ಪತ್ತೆ ಹಚ್ಚಬೇಕೆಂದು ಪೊಲೀಸ್‌ ಇಲಾಖೆಯನ್ನು ಆಗ್ರಹಿಸುತ್ತಿರುವುದಾಗಿ ತಿಳಿಸಿದರು. ರಾಜಕೀಯ ಪಕ್ಷಗಳು ರಾಷ್ಟ್ರೀಯ ಹಿತಾಸಕ್ತಿಯನ್ನು ಬಲಿಕೊಡಬಾರದು. ಸಮಾಜಘಾತುಕ, ದೇಶ ದ್ರೋಹಿಗಳನ್ನು ಬೆಳೆಸಲು ಯಾರೂ ಅವಕಾಶ ನೀಡಬಾರದು ಎಂದರು. 

ಪಕ್ಷ ಸಂಘಟನೆಗೆ ಒತ್ತು
ಮುಂಬರುವ ವಿಧಾನ ಸಭಾ ಚುನಾವಣೆಗೆ ರಾಜ್ಯದ 224 ವಿಧಾನ ಸಭಾ ಕ್ಷೇತ್ರಗಳನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದೆ. ಹಾಗೆಯೇ ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲೂ ಪ್ರಮುಖರನ್ನು ಹಾಗೂ ಕಾರ್ಯಕರ್ತರನ್ನು ಸೇರಿಸಿಕೊಂಡು ಪಕ್ಷವನ್ನು ಸಂಘಟಿಸಲಾಗುವುದು ಎಂದರು. ಅದಕ್ಕೂ ಮೊದಲು ಅವರು ಸ್ಥಳೀಯ ಪಕ್ಷ ಪ್ರಮುಖರ ಸಭೆ ನಡೆಸಿ ಪಕ್ಷ ಸಂಘಟನೆಯ ಕುರಿತಂತೆ ಸಮಾಲೋಚನೆ ನಡೆಸಿದರು. 

ಬಂಟ್ವಾಳ ಕ್ಷೇತ್ರ ಬಿಜೆಪಿ ಮುಖಂಡ ರಾಜೇಶ್‌ ನಾೖಕ್‌ ಉಳಿಪಾಡಿಗುತ್ತು, ಕ್ಷೇತ್ರದ ಸಮಿತಿಯ ಅಧ್ಯಕ್ಷ ದೇವದಾಸ್‌ ಶೆಟ್ಟಿ, ಮಾಜಿ ಶಾಸಕ ಎ.ರುಕ್ಮಯ ಪೂಜಾರಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next