Advertisement

ಕುಪ್ವಾರದಲ್ಲಿ ಉರಿ ಮಾದರಿ ದಾಳಿ ಮೂವರು ಹುತಾತ್ಮ, ವ್ಯಕ್ತಿ ಸಾವು

02:41 AM Apr 28, 2017 | Team Udayavani |

ಶ್ರೀನಗರ/ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದ ಉರಿಯಲ್ಲಿರುವ ಸೇನಾ ನೆಲೆಯ ಮೇಲೆ ಪಾಕಿಸ್ತಾನ ಪ್ರೇರಿತ ಉಗ್ರರು ದಾಳಿ ನಡೆಸಿ 85 ಮಂದಿ ಅಸುನೀಗಿದ್ದರು. ಅದೇ ಮಾದರಿಯ ದಾಳಿಯನ್ನು ಕಣಿವೆ ರಾಜ್ಯದ ಕುಪ್ವಾರದಲ್ಲಿ ಜೈಶ್‌-ಎ-ಮೊಹಮ್ಮದ್‌ ಸಂಘಟನೆಗೆ ಸೇರಿದ ಉಗ್ರರು ನಡೆಸಿದ್ದಾರೆ. ಈ ದಾಳಿಯಲ್ಲಿ ಒಬ್ಬ ಕ್ಯಾಪ್ಟನ್‌ ಸೇರಿದಂತೆ ಇಬ್ಬರು ಸೈನಿಕರು ಹುತಾತ್ಮರಾಗಿದ್ದಾರೆ. ಏಳು ಮಂದಿ ಯೋಧರಿಗೆ ಗಾಯಗಳಾಗಿವೆ. ಬೆಳಗ್ಗೆ ಸುಮಾರು 4 ಗಂಟೆಗೆ ಈ ದಾಳಿ ಆರಂಭವಾಗಿದ್ದು, ಸುಮಾರು 35 ನಿಮಿಷಗಳ ಕಾಲ ಉಗ್ರರು, ಸೇನಾ ಪಡೆ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ನಡುವೆ ಕಾರ್ಯಾಚರಣೆ ವಿರೋಧಿಸಿ ಗುಂಪೊಂದು ಸೇನೆಯತ್ತ ಕಲ್ಲು ತೂರಾಟ ನಡೆಸಿತು. ಈ ಗುಂಪನ್ನು ಚದುರಿಸಲು ಗುಂಡು ಹಾರಿಸಿದ್ದರಿಂದ 70 ವರ್ಷ ವಯಸ್ಸಿನ ವ್ಯಕ್ತಿ ಅಸುನೀಗಿದ್ದಾರೆ.

Advertisement

ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ಚೌಕೀಬಲ್‌ ಸೇನಾ ಶಿಬಿರದ ಮೇಲೆ ದಾಳಿ ನಡೆದಿದೆ. ಈ ಭಾಗದಲ್ಲಿನ ದುರ್ಗಮ ಮಾರ್ಗ ಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿದ್ದ ಸೈನಿಕರ ಮೇಲೆ ಉಗ್ರರು ಏಕಾಏಕಿ ದಾಳಿ ನಡೆಸಿದ್ದು, ಕ್ಯಾಪ್ಟನ್‌ ಆಯೂಶ್‌ ಯಾದವ್‌ (25) ಹಾಗೂ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ಗಾಯಗೊಂಡಿರುವ ಯೋಧರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ರಕ್ಷಣಾ ಪಡೆಗಳು ಉಗ್ರರ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿರುವುದನ್ನು ಅರಿತ ಉಗ್ರರು ಏಕಾಏಕಿ ಅವರ ಮೇಲೆರಗಿದ್ದಾರೆ. 

ಉರಿ ಮಾದರಿ ದಾಳಿ: ಪ್ರಸ್ತುತ ಘಟನೆ ನಡೆದ ಸ್ಥಳ ಉರಿ ಪ್ರಾಂತ್ಯದಿಂದ 100 ಕಿ.ಮೀ. ದೂರದಲ್ಲಿದ್ದು, ಕಳೆದ ವರ್ಷ ಸೆ.17ರಂದು ನಡೆದಿದ್ದ ಉರಿ ದಾಳಿ ಮಾದರಿಯಲ್ಲೇ ಉಗ್ರರು ಕುಪ್ವಾರದಲ್ಲೂ ದಾಳಿ ನಡೆಸಿದ್ದಾರೆ. 17 ಯೋಧರನ್ನು ಬಲಿ ಪಡೆದ ಉರಿ ದಾಳಿಯಂತೆ ಕುಪ್ವಾರ ದಾಳಿ ಕೂಡ ನಸುಕಿನಲ್ಲೇ ನಡೆದಿದೆ. ಘಟನೆ ಸ್ಥಳದಲ್ಲಿ 3 ಎಕೆ47 ರೈಫ‌ಲ್‌ಗ‌ಳು, ಒಂದು ಚೈನೀಸ್‌ ಪಿಸ್ತೂಲ್‌ ಮತ್ತು ಒಂದು ಗ್ರೆನೇಡ್‌ ಲಾಂಚರ್‌ಗಳನ್ನು ಸೇನೆ ವಶಕ್ಕೆ ಪಡೆದಿದೆ. ಇಬ್ಬರು ಉಗ್ರರು ಪರಾರಿಯಾಗಿದ್ದಾರೆ.

ಅಂದ್ರಾಬಿ ಬಂಧನ: ಕಾಶ್ಮೀರ ಪ್ರತ್ಯೇಕತಾವಾದಿ ಬಣದ ನಾಯಕಿ ಅಸಿಯಾ ಅಂದ್ರಾಬಿಯನ್ನು ಪೊಲೀಸರು ಬಂಧಿಸಿದ್ದಾರೆ. ಗುರುವಾರ ಮುಂಜಾನೆ ಅಂದ್ರಾಬಿ ಮನೆಗೆ ತೆರಳಿದ ಪೊಲೀಸರು ಸಾರ್ವಜನಿಕರ ಸುರಕ್ಷತಾ ಕಾಯ್ದೆ ಅಡಿಯಲ್ಲಿ ಆಕೆಯನ್ನು  ವಶಕ್ಕೆ ಪಡೆದರು. ರಕ್ಷಣಾ ಪಡೆ ಸಿಬ್ಬಂದಿ ಮೇಲೆ ಕಲ್ಲೆಸೆಯುವಂತೆ ಮಹಿಳೆಯರನ್ನು ಪ್ರಚೋದಿಸಿ ಜನಜೀವನಕ್ಕೆ ಅಡ್ಡಿಪಡಿಸಿದ ಆರೋಪ ಅಂದ್ರಾಬಿ ಮೇಲಿತ್ತು.

ಇಬ್ಬರು ಉಗ್ರರ ಕೊಂದ ಯೋಧ
ಒಟ್ಟಾರೆ ದಾಳಿಯನ್ನು ವಿಫ‌ಲಗೊಳಿಸಿದ್ದು ನಾಯ್ಕ ರಿಶಿ. ಹೌಸ್‌ ಕೀಪರ್‌ ವೃತ್ತಿಯಲ್ಲಿರುವ ಅವರು ಗುಂಡಿನ ಚಕಮಕಿಯಿಂದಾಗಿ ಕೈಯಲ್ಲಿ ರಕ್ತ ಇಳಿಯುತ್ತಿದ್ದರೂ ಇಬ್ಬರು ಉಗ್ರರನ್ನು ನಿರ್ದಾಕ್ಷಿಣ್ಯವಾಗಿ ಕೊಂದು ಹಾಕಿದ್ದಾರೆ. ಮತ್ತಿಬ್ಬರು ಉಗ್ರರತ್ತ ಗುಂಡು ಹಾರಿಸಿದರೂ, ಅವರು ಪರಾರಿಯಾಗಿದ್ದರು. ಇದೇ ಸಂದರ್ಭದಲ್ಲಿ ಅವರ ಕೈಯ್ಯಲ್ಲಿದ್ದ ರೈಫ‌ಲ್‌ ಖಾಲಿಯಾಗಿತ್ತು. ಕೂಡಲೇ ಸತ್ತು ಬಿದ್ದಿದ್ದ ಉಗ್ರನ ರೈಫ‌ಲ್‌ ತೆಗೆದುಕೊಂಡು ಫೈರಿಂಗ್‌ ಮುಂದುವರಿಸಿದರು. ಅವರು ಬಿಹಾರದ ಅರಿಯಾ ಜಿಲ್ಲೆಯವರಾಗಿದ್ದು, ಎಂಟು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.

Advertisement

ಪ್ರತ್ಯೇಕ ಮಹಿಳಾ ಪಡೆ 
ತಿಂಗಳಿನಿಂದ ಕಣಿವೆ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಹದಗೆಟ್ಟಿದ್ದು, ಸಾರ್ವಜನಿಕರು ರಕ್ಷಣಾ ಪಡೆ ಸಿಬಂದಿ ಮೇಲೆ ಕಲ್ಲೆಸೆಯುವ ಮೂಲಕ ಹಿಂಸಾಚಾರದಲ್ಲಿ ತೊಡಗಿದ್ದಾರೆ. ಇದೇ ವೇಳೆ ಕಲ್ಲೆಸೆಯುವ ಕೃತ್ಯದಲ್ಲಿ ಮಹಿಳೆಯರೂ ಭಾಗಿಯಾಗಿರುವುದು ರಕ್ಷಣಾಪಡೆಗಳಿಗೆ ತಲೆನೋವಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಸಂಪೂರ್ಣ ಮಹಿಳಾ ಸಿಬಂದಿಗಳನ್ನೇ ಒಳಗೊಂಡ ಪ್ರತ್ಯೇಕ ಮೀಸಲು ಪೊಲೀಸ್‌ ಪಡೆಯೊಂದನ್ನು ಕಣಿವೆ ರಾಜ್ಯದಲ್ಲಿ ನಿಯೋಜಿಸಲು ಗೃಹ ಸಚಿವಾಲಯ ನಿರ್ಧರಿಸಿದೆ. ಎ.24ರಂದು ಪ್ರತಿಭಟನೆಗೆ ಇಳಿದಿದ್ದ ವಿದ್ಯಾರ್ಥಿನಿಯರು, ಶ್ರೀನಗರದ ಲಾಲ್‌ ಚೌಕ್‌ನಲ್ಲಿ ಜಮಾವಣೆಗೊಂಡು, ಪೊಲೀಸರ ವಿರುದ್ಧ ಕಲ್ಲೆಸೆದ ಘಟನೆ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ನಿರ್ಧರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next