Advertisement

370 ರದ್ದು ಎಫೆಕ್ಟ್: ಈಗ ಜಮ್ಮು-ಕಾಶ್ಮೀರದಲ್ಲಿ ಉಗ್ರ ಸಂಘಟನೆ, ಉಗ್ರರ ಸ್ಥಿತಿ ಏನಾಗಿದೆ?

01:08 PM Aug 07, 2020 | Nagendra Trasi |

ಶ್ರೀನಗರ್: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿ ಒಂದು ವರ್ಷ ಪೂರ್ಣಗೊಂಡಿದ್ದು, ಈ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರ್ ಡೈರೆಕ್ಟರ್ ಜನರಲ್ ಪೊಲೀಸ್ ದಿಲ್ಬಾಗ್ ಸಿಂಗ್ ಅವರು ಉಗ್ರರ ಚಟುವಟಿಕೆ ಬಹಳಷ್ಟು ಕಡಿಮೆಯಾಗಿರುವ ಕುರಿತು ವಿವರ ನೀಡಿದ್ದಾರೆ.

Advertisement

ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ಸತತವಾಗಿ ಭಯೋತ್ಪಾದಕರ ವಿರುದ್ಧ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿದ ಪರಿಣಾಮ ಇಂದು ಜಮ್ಮು-ಕಾಶ್ಮೀರದಲ್ಲಿ ಬಹುತೇಕ ಉಗ್ರರ ಸಂಘಟನೆಗಳು ನಾಯಕನಿಲ್ಲದಂತಾಗಿದೆ ಎಂದು ತಿಳಿಸಿದ್ದಾರೆ.

ಈ ಮೊದಲು ಜಮ್ಮು-ಕಾಶ್ಮೀರದಲ್ಲಿ 350ರಿಂದ 400 ಮಂದಿ ಉಗ್ರರು ಸಕ್ರಿಯವಾಗಿದ್ದರು. ಆದರೆ ಇಂದು 200 ಮಂದಿ ಉಗ್ರರು ಇದ್ದಿರುವುದಾಗಿ ಹೇಳಿದರು. ಆದರೆ ಬಹುತೇಕ ಎಲ್ಲಾ ಉಗ್ರ ಸಂಘಟನೆಗಳಲ್ಲಿ ಈಗ ಮುಖಂಡನೇ ಇಲ್ಲದಂತಾಗಿದೆ. ಉಗ್ರರ ಸಂಘಟನೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದ್ದ ಹಾಗೂ ಪ್ರಮುಖ ಉಗ್ರ ಮುಖಂಡರನ್ನು ಎನ್ ಕೌಂಟರ್ ನಲ್ಲಿ ಹೊಡೆದುರುಳಿಸಲಾಗಿದೆ ಎಂದರು.

2019ರ ಜುಲೈ ತಿಂಗಳವರೆಗೆ 131 ಉಗ್ರರನ್ನು ಹತ್ಯೆಗೈಯಲಾಗಿತ್ತು. ಆದರೆ ಜುಲೈನಿಂದ ಡಿಸೆಂಬರ್ ವರೆಗೆ ಕೇವಲ 29 ಉಗ್ರರನ್ನು ಹೊಡೆದುರುಳಿಸಲಾಗಿತ್ತು. ಕಾನೂನು ಸುವ್ಯವಸ್ಥೆಯನ್ನು ಬಿಗಿಗೊಳಿಸಿದ್ದರ ಪರಿಣಾಮ ಸೇನಾ ಕಾರ್ಯಾಚರಣೆ ಕೂಡಾ ಕಡಿಮೆಯಾಗಿತ್ತು. 2019ರಲ್ಲಿ ಸೇನೆ ನಡೆಸಿದ 67 ಯಶಸ್ವಿ ಕಾರ್ಯಾಚರಣೆಯಲ್ಲಿ 160 ಉಗ್ರರು ಬಲಿಯಾಗಿದ್ದರು ಎಂದು ಸಿಂಗ್ ವಿವರಿಸಿದರು.

Advertisement

2020ರಲ್ಲಿ ಈವರೆಗೆ 150 ಉಗ್ರರು ಸೇನೆಯ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿದ್ದಾರೆ. ಇದರಲ್ಲಿ 30 ವಿದೇಶಿ ಹಾಗೂ 120 ಸ್ಥಳೀಯ ಉಗ್ರರು ಹಾಗೂ ಎಲ್ಲಾ ಪ್ರಮುಖ ಉಗ್ರಗಾಮಿ ಸಂಘಟನೆಯ 39 ಉನ್ನತ ಕಮಾಂಡರ್ಸ್ ಗಳು ಸೇರಿರುವುದಾಗಿ ತಿಳಿಸಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ ಬಹುತೇಕ ಉಗ್ರಗಾಮಿ ಸಂಘಟನೆಗಳು ತೀವ್ರವಾಗಿ ಶಸ್ತ್ರಾಸ್ತ್ರ ಸಮಸ್ಯೆ ಎದುರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಶಸ್ತ್ರಾಸ್ತ್ರ ಮತ್ತು ಸ್ಫೋಟಕ ಸರಬರಾಜು ಮಾಡಲು ಹೊಸ ಉಪಾಯ ಹುಡುಕಿಕೊಂಡಿದೆ. ಡ್ರೋಣ್ ಮೂಲಕ ಶಸ್ತ್ರಾಸ್ತ್ರ ಸರಬರಾಜು ಮಾಡುವ ತಂತ್ರಕ್ಕೆ ಮೊರೆ ಹೋಗಿದೆ. ಆದರೆ ಭಾರತೀಯ ಸೇನಾ ಪಡೆ ಇಂತಹ ಹಲವು ಪ್ರಯತ್ನವನ್ನು ವಿಫಲಗೊಳಿಸಿರುವುದಾಗಿ ವರದಿ ತಿಳಿಸಿದೆ.

2013ಕ್ಕೆ ಹೋಲಿಸಿದಲ್ಲಿ 2018 ಕಾರ್ಯಾಚರಣೆಯ ಮಹತ್ವದ ವರ್ಷವಾಗಿದೆ ಎಂದು ಕರೆದಿರುವ ಡಿಜಿಪಿ, ಈ ಮೊದಲಿಗಿಂತಲೂ ಈಗ ಭದ್ರತಾ ವ್ಯವಸ್ಥೆ ಹಚ್ಚಾಗಿದೆ ಎಂದರು. 2013ರಿಂದ ಹೆಚ್ಚಿನ ಸಂಖ್ಯೆಯ ಯುವಕರು ಉಗ್ರ ಸಂಘಟನೆಗೆ ಸೇರಿಕೊಂಡಿದ್ದರು. 2017ರವರೆಗೂ ಉಗ್ರರ ನೇಮಕಾತಿ ನಡೆಯುತ್ತಿತ್ತು. ಉಗ್ರ ಸಂಘಟನೆಯ ಪೋಸ್ಟರ್ ಬಾಯ್ ಗಳಾದ ಮನಾನ್ ವಾನಿ, ಬುಹ್ರಾನ್ ವಾನಿ ಹಾಗೂ ರಿಯಾಜ್ ನೈಕೂ ತುಂಬಾ ಜನಪ್ರಿಯತೆ ಗಳಿಸಿದ್ದು, ಯುವಕರು ಈ ಉಗ್ರರ ಪೋಸ್ಟರ್ ಅನ್ನು ಉಪಯೋಗಿಸುತ್ತಿದ್ದರು.

ಇಂತಹ ಯುವ ಉಗ್ರ ಸಂಘಟನೆಯ ವಿರುದ್ಧ 2017 ಮತ್ತು 2018ರಲ್ಲಿ ಯಶಸ್ವಿ ಕಾರ್ಯಾಚರಣೆ ನಡೆಸಲು ಆರಂಭಿಸಿದ್ದೇವು.  2018ರಲ್ಲಿ ಗವರ್ನರ್ ಆಡಳಿತ ಬಂದ ಮೇಲೆ ಲ್ಯಾಂಡ್ ಮಾರ್ಕ್ ಕಾರ್ಯಾಚರಣೆ ನಡೆಸಿದ್ದೇವು. ಕಾನೂನು ಸುವ್ಯವಸ್ಥೆಗಾಗಿ ಉಗ್ರರ ವಿರುದ್ಧ ಕಾರ್ಯಾಚರಣೆಯಲ್ಲಿ ಉಗ್ರರ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿರುವುದಾಗಿ ತಿಳಿಸಿದರು.

2018ರಲ್ಲಿ 93 ಯಶಸ್ವಿ ಕಾರ್ಯಾಚರಣೆ ನಡೆಸಲಾಗಿತ್ತು. ಅದೇ ರೀತಿ 2019ರಲ್ಲಿಯೂ ಯಶಸ್ವಿ ಶೋಧ ಮತ್ತು ಕಾರ್ಯಾಚರಣೆ ಮೂಲಕ ಉಗ್ರರನ್ನು ಹೊಡೆದುರುಳಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next