Advertisement
ಜೆಎಂಬಿ ಉಗ್ರರಾದ ಕೌಸರ್, ಆದಿಲ್ ಶೇಖ್, ಹಬೀಬುರ್ ರೆಹಮಾನನ್ನು ಎನ್‌ಐಎ ಬಂಧಿಸಿದೆ. ಆದರೆ, ಅವರ ಜತೆಗಿದ್ದ ನಾಜೀರ್ ಶೇಖ್, ನಜ್ರುಲ್ಲಾ ಇಸ್ಲಾಂ, ಆಸೀಫ್ ಇಕ್ಬಾಲ್, ಆರೀಪ್ ರಾಜ್ಯದಲ್ಲೇ ತಲೆಮರೆಸಿಕೊಂಡಿರುವ ಶಂಕೆಯಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ನಾಲ್ವರು ಉಗ್ರರ ಬಂಧನಕ್ಕೆ ಎನ್‌ಐ ಶೋಧ ಮುಂದುವರಿಸಿದೆ. ಇತ್ತ ರಾಜ್ಯ ಪೊಲೀಸರು ಕೂಡ ಪ್ರತ್ಯೇಕ ನಡೆಸುತ್ತಿದ್ದಾರೆ. ನಾಲ್ವರು ಆರೋಪಿಗಳು ಉಗ್ರ ಚಟುವಟಿಕೆಗಳನ್ನು ಸಕ್ರಿಯಗೊಳಿಸುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ತನಿಖೆ ಕ್ಷಿಪ್ರಗೊಂಡಿದೆ.
Related Articles
Advertisement
ಈ ಸಂಚಿನ ಮೊದಲ ಭಾಗವಾಗಿ ಸ್ಫೋಟಕಗಳನ್ನು ತಯಾರಿಸುವ ವೇಳೆ ಬುಧ್ವಾìನ್ ಜಿಲ್ಲೆಯ ಕಗ್ರಾಗರ್‌ನ ಮನೆಯಲ್ಲಿ 2014ರ ಅಕ್ಟೋಬರ್ 2ರಂದು ಸ್ಫೋಟಕ ಸಿಡಿದು ಇಬ್ಬರು ಮೃತಪಟ್ಟ ಬಳಿಕ ಜೆಎಂಬಿ ಉಗ್ರ ಸಂಘಟನೆಯ ಅಸ್ತಿತ್ವದ ಬಗ್ಗೆ ಬೆಳಕಿಗೆ ಬಂದಿತು. ಇದಾದ ಬಳಿಕ, ಜೆಎಂಬಿಯ ಹಲವು ಮಂದಿ ಉಗ್ರರ ಬಂಧನವಾದ ಬಳಿಕ ಪ್ರಮುಖ ಉಗ್ರ ಕೌಸರ್ ಹಾಗೂ ಮತ್ತಿತರರು ತಲೆಮರೆಸಿಕೊಳ್ಳಲು ಬೆಂಗಳೂರಿಗೆ ಬಂದಿದ್ದರು ಎಂದು ಮೂಲಗಳು ತಿಳಿಸಿವೆ.
ನಗರಕ್ಕೆ ಧಾವಿಸಿದ ಜೆಎಂಬಿ ಉಗ್ರರ ತಂಡ ಜೀವನೋಪಾಯಕ್ಕಾಗಿ ಬಟ್ಟೆ ವ್ಯಾಪಾರ, ಏರ್‌ಪಿನ್, ಚಿಕ್ಕ ಪುಟ್ಟ ಅಲಂಕಾರಿಕ ವಸ್ತುಗಳನ್ನು ಮಾರಾಟ ಮಾಡಿಕೊಂಡು ಕೆ.ಆರ್.ಪುರ ಸಮೀಪದ ಬಾಡಿಗೆ ಮನೆಯಲ್ಲಿ ಕೆಲಕಾಲ ವಾಸವಿತ್ತು. ನಂತರ ತಂಡದ ಸದಸ್ಯರು ನಗರ ಹಾಗೂ ನಗರ ಹೊರವಲಯದ ಹಲವೆಡೆ ಆಶ್ರಯ ಪಡೆದಿದ್ದರಲ್ಲದೇ ಚಿಕ್ಕಬಾಣವಾರದ ಹಳೆ ರೈಲು ನಿಲ್ದಾಣದ ಮನೆಯಲ್ಲೂ ವಾಸವಾಗಿದ್ದರು.
ಅದೇ ಮನೆಯಲ್ಲಿ ಕೌಸರ್ ತನ್ನ ಸಹಚರರಾದ ಆದಿಲ್, ಹಬೀಬುರ್ ರೆಹಮಾನ್, ನಾಜೀರ್ ಶೇಖ್, ನಜ್ರುಲ್ಲಾ ಇಸ್ಲಾಂ, ಆಸೀಫ್ ಇಕ್ಬಾಲ್, ಆರೀಪ್‌ಗೆ ಸ್ಫೋಟಕ ತಯಾರಿಕೆ ನಡೆಸಲು ಹೇಳಿದ್ದ. ಬಳಿಕ ಅಲ್ಲಿಂದ ಸ್ಫೋಟಕಗಳನ್ನು ಹೊತ್ತೂಯ್ದು ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ರಾಕೆಟ್ ಬಾಂಬ್ ಉಡಾವಣೆಯನ್ನು ಎರಡು ಬಾರಿ ಪ್ರಯೋಗ ನಡೆಸಿದ್ದರು.
ಹಣ ಹೊಂದಿಸಲು ದರೋಡೆ: ಆರ್ಥಿಕವಾಗಿ ಪ್ರಬಲವಾಗಲು ಹವಣಿಸುತ್ತಿದ್ದ ಜೆಎಂಬಿ ಉಗ್ರರು ಹಣ ಹೊಂದಿಸಲು ದರೋಡೆ, ಸುಲಿಗೆ ಕೃತ್ಯಗಳಿಗೆ ಕೈ ಹಾಕಿದರು. ಅತ್ತಿಬೆಲೆ ಸೇರಿದಂತೆ ನಗರ ಹೊರವಲಯದ ಹಲವು ಕಡೆ ದುಷ್ಕೃತ್ಯಗಳ ಮೂಲಕ ಹಣ ಸಂಗ್ರಹಿಸುತ್ತಿದ್ದರು.ಅದೇ ಹಣವನ್ನು ಬಳಸಿ ಉಪ್ಪಾರಪೇಟೆ, ಚಿಕ್ಕಪೇಟೆ ಮುಂತಾದ ಕಡೆ ಬಾಂಬ್ ತಯಾರಿಕೆಗೆ ಬೇಕಾದ ಕಚ್ಚಾ ಸಾಮಗ್ರಿಗಳನ್ನು ಬಳಸಿ ಚಿಕ್ಕಬಾಣವಾರದ ಮನೆಯಲ್ಲಿ ಸ್ಫೋಟಕಗಳ ತಯಾರಿಯಲ್ಲಿ ತೊಡಗಿದ್ದರು ಎಂದು ಮೂಲಗಳು ಹೇಳಿವೆ.
* ಮಂಜುನಾಥ ಲಘುಮೇನಹಳ್ಳಿ