Advertisement

ರಾಜಧಾನಿಯಲ್ಲಿದ್ದುಕೊಂಡೇ “ವಿಧ್ವಂಸಕ’ಕೃತ್ಯಕ್ಕೆ ಉಗ್ರರ ಸಂಚು!

01:09 AM Jul 09, 2019 | Team Udayavani |

ಬೆಂಗಳೂರು: ಚಿಕ್ಕಬಾಣಾವರದ ಬಾಡಿಗೆ ಮನೆಯಲ್ಲಿ ವಾಸವಿದ್ದ ಜಮಾತ್‌ ಉಲ್‌ ಮುಜಾಯಿದ್ದೀನ್‌ ಬಾಂಗ್ಲಾದೇಶ್‌ (ಜೆಎಂಬಿ) ಉಗ್ರ ಹಬೀಬುರ್‌ ರೆಹಮಾನ್‌ ತನ್ನ ಮೂವರು ಸಹಚರರ ಜತೆ ಸೇರಿ ಭಾರೀ ಪ್ರಮಾಣದ ವಿಧ್ವಂಸಕ ಕೃತ್ಯಕ್ಕೆ ಸಂಚುರೂಪಿಸಿದ್ದ ಎಂಬ ಆಘಾತಕಾರಿ ಸಂಗತಿ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ತನಿಖೆಯಲ್ಲಿ ಬಯಲಾಗಿದೆ.

Advertisement

ಕೆಲ ದಿನಗಳ ಹಿಂದೆ ದೊಡ್ಡಬಳ್ಳಾಪುರದಲ್ಲಿ ಬಂಧಿಸಲ್ಪಟ್ಟ ಜೆಎಂಬಿ ಉಗ್ರ ಹಬೀಬುರ್‌ ರೆಹಮಾನ್‌ ಎನ್‌ಐಎ ವಿಚಾರಣೆ ವೇಳೆ ಈ ಮಾಹಿತಿ ಬಾಯ್ಬಿಟ್ಟಿದ್ದಾನೆ. ಈ ಮಾಹಿತಿ ಆಧರಿಸಿ ಚಿಕ್ಕಬಾಣಾವರದಲ್ಲಿ ತನ್ನ ಮೂವರು ಸಹಚರರೊಂದಿಗೆ ಉಳಿದುಕೊಂಡಿದ್ದ ಬಾಡಿಗೆ ಮನೆ ಮೇಲೆ ಭಾನುವಾರ ರಾತ್ರಿ ದಾಳಿ ನಡೆಸಿ, ಶೋಧ ನಡೆಸಿದೆ.

ಕಾರ್ಯಾಚರಣೆ ವೇಳೆ ದೊರೆತ ಏರ್‌ಗನ್‌, ಟಿಫಿನ್‌ ಬಾಕ್ಸ್‌ ಗ್ರೆನೇಡ್‌ ಸೇರಿ ಇತರ ಸ್ಫೋಟಕಗಳನ್ನು ಜಪ್ತಿ ಮಾಡಿ ಮಹಜರು ಪೂರ್ಣಗೊಳಿಸಿರುವ ಎನ್‌ಐಎ ತಂಡ, ಆರೋಪಿಗಳ ವಿರುದ್ಧ ಸೋಲದೇವನಹಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದೆ. 2018ರಲ್ಲಿ ಚಿಕ್ಕಬಾಣಾವರದ ಮನೆಯಲ್ಲಿ ತಂಗಿದ್ದ ಹಬೀಬುರ್‌ ಹಾಗೂ ಆತನ ಮೂವರು ಸಹಚರರು ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದರು ಎಂಬುದು ತನಿಖೆ ವೇಳೆ ಗೊತ್ತಾಗಿದೆ.

ಆತ ತಂಗಿದ್ದ ಮನೆಯಲ್ಲಿ ಸ್ಫೋಟಕಗಳು ಪತ್ತೆಯಾಗಿವೆ. ಈ ಕುರಿತು ತನಿಖೆ ನಡೆಸಬೇಕು ಎಂದು ಎನ್‌ಐಎ ದೂರು ನೀಡಿದೆ. ಈ ನಿಟ್ಟಿನಲ್ಲಿ ಹಬೀಬುರ್‌ ಸೆರಿದಂತೆ ನಾಲ್ವರ ವಿರುದ್ಧ ಉಗ್ರ ಚಟುವಟಿಕೆ ನಿಷೇಧ ಕಾಯಿದೆ ಅನ್ವಯ ಎಫ್ಐಆರ್‌ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದರು.

ಮೊಬೈಲ್‌ ಚಾರ್ಜರ್‌ ಮಾರಾಟ: 2014ರಲ್ಲಿ ಬುಧ್ವಾನ್‌ ಬಾಂಬ್‌ ಸ್ಫೋಟ ಬಳಿಕ ಬಹುತೇಕ ದಕ್ಷಿಣ ರಾಜ್ಯಗಳಲ್ಲಿ ಆಶ್ರಯಪಡೆದಿದ್ದ ಕೌಸರ್‌, ಹಬೀಬುರ್‌ ಮತ್ತಿತರರು, 2018ರಲ್ಲಿ ಚಿಕ್ಕಬಾಣಾವರಕ್ಕೆ ಬಂದಿದ್ದರು. ಹಬೀಬುರ್‌ ಸ್ಥಳೀಯ ಮಧ್ಯವರ್ತಿಯೊಬ್ಬನ ಸಹಾಯದಿಂದ ಬಾಡಿಗೆ ಮನೆ ಪಡೆದುಕೊಂಡಿದ್ದ. ಬಳಿಕ ಸಹಚರರು ಆತನನ್ನು ಸೇರಿಕೊಂಡಿದ್ದರು. ಸ್ಥಳೀಯರ ಜತೆ ಹೆಚ್ಚಾಗಿ ಬೆರೆಯದ ನಾಲ್ವರೂ, ಮೊಬೈಲ್‌ ಚಾರ್ಜರ್‌, ಅಲಂಕಾರಿಕ ವಸ್ತುಗಳ ಮಾರಾಟ ಮಾಡುತ್ತಿದ್ದರು. ಹೀಗಾಗಿ ಸ್ಥಳೀಯರಿಗೂ ಅನುಮಾನ ಬಂದಿರಲಿಲ್ಲ ಎಂದು ಮೂಲಗಳು ತಿಳಿಸಿವೆ.

Advertisement

ಬೋಧಗಯಾ ಸ್ಫೋಟಕ್ಕೆ ಬಾಂಬ್‌ ತಯಾರಾಗಿತ್ತೇ?: 2018ರ ಜ.19ರಂದು ಬಿಹಾರದ ಕಾಲಚಕ್ರ ಮೈದಾನದಲ್ಲಿ ಬೌದ್ಧಗುರು ದಲೈಲಾಮಾ ಹಾಗೂ ಅಂದಿನ ಬಿಹಾರ ರಾಜ್ಯಪಾಲರ ಉಪಸ್ಥಿತ ಕಾರ್ಯಕ್ರಮದಲ್ಲಿ ಜೆಎಂಬಿ ಉಗ್ರ ಸಂಘಟನೆ ಐಇಡಿ ಸ್ಫೋಟಿಸಿದೆ.

ಹಬೀಬುರ್‌ ಮತ್ತು ಆತನ ಸಹಚರರು ವಾಸವಿದ್ದ ಚಿಕ್ಕಬಾಣಾವರದ ಮನೆಯಲ್ಲಿ ಸ್ಫೋಟಕಗಳು ಪತ್ತೆಯಾಗಿದ್ದು, ಐಇಡಿ ತಯಾರಿಕೆಯಲ್ಲಿ ನಿಪುಣನಾಗಿದ್ದ ಹಬೀಬುರ್‌ ಬೋಧಗಯಾ ಸ್ಫೋಟಕ್ಕೆ ಐಇಡಿ ರವಾನಿಸಿದ್ದನೇ ಎಂಬ ಸಂಶಯ ಮೂಡಿದೆ. ಈ ಆಯಾಮದಲ್ಲೂ ತನಿಖೆ ನಡೆಸಲಾಗುವುದು ಎಂದು ಮೂಲಗಳು ಹೇಳಿವೆ.

Advertisement

Udayavani is now on Telegram. Click here to join our channel and stay updated with the latest news.

Next