ಬೆಂಗಳೂರು: ಶ್ರೀಲಂಕಾದ ಕೊಲಂಬೋದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ಬೆನ್ನಲ್ಲೇ ಭಾರತದ ಮೇಲೂ ಉಗ್ರರ ಕರಿ ನೆರಳು ಬಿದ್ದಿದ್ದು, ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಸಂಚರಿಸುವ ರೈಲುಗಳನ್ನು ಗುರಿಯಾಗಿಸಿಕೊಂಡು ಉಗ್ರರು ಸ್ಫೋಟ ನಡೆಸಬಹುದು ಎಂಬ ಭೀತಿ ಉಂಟಾಗಿದೆ
ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ನಿಲಮಣಿ ಎನ್. ರಾಜು ಅವರು, ದಕ್ಷಿಣ ಭಾರತದ ಎಲ್ಲಾ ರಾಜ್ಯಗಳ ಪೊಲೀಸ್ ಮುಖ್ಯಸ್ಥರು, ಬೆಂಗಳೂರು ರೈಲ್ವೆ ವಿಭಾಗದ ಮುಖ್ಯಸ್ಥರು, ನವದೆಹಲಿಯ ಪೊಲೀಸ್ ಮುಖ್ಯಸ್ಥರು(ಆರ್‌ಪಿಎಫ್), ರಾಜ್ಯ ಕಾನೂನು ಸುವ್ಯವಸ್ಥೆ ಹೆಚ್ಚುವರಿ ಪೊಲೀಸ್ ಆಯುಕ್ತರು, ನಗರ ಪೊಲೀಸ್ ಆಯುಕ್ತರು, ಬೆಂಗಳೂರು ಗುಪ್ತಚರ ವಿಭಾಗಕ್ಕೆ ಪತ್ರ ಬರೆದು ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಸಂದೇಶ ರವಾನಿಸಿದ್ದಾರೆ.
ತಮಿಳುನಾಡಿನ ರಾಮನಾಥಪುರಂಗೆ ಈಗಾಗಲೇ 19 ಮಂದಿ ಉಗ್ರರು ನುಗ್ಗಿದ್ದಾರೆ ಎಂದು ಬೆಂಗಳೂರು ನಗರ ಪೊಲೀಸ್ ನಿಯಂತ್ರಣ ಕೊಠಡಿಗೆ ಶುಕ್ರವಾರ ಸಂಜೆ ಲಾರಿ ಚಾಲಕನೊಬ್ಬ ಕರೆ ಮಾಡಿ ಮಾಹಿತಿ ನೀಡಿದ್ದಾನೆ. ಸಂಜೆ 5.30ರ ಸುಮಾರಿಗೆ ಕರೆ ಮಾಡಿರುವ ಲಾರಿ ಚಾಲಕ ಸ್ವಾಮಿ ಸುಂದರಮೂರ್ತಿ ಈ ಎಚ್ಚರಿಕೆ ನೀಡಿದ್ದಾನೆ. ಈತನ ಮಾಹಿತಿ ಪ್ರಕಾರ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಪುದು ಚೇರಿ, ಗೋವಾ, ಮಹಾರಾಷ್ಟ್ರಗಳಲ್ಲಿ ದಾಳಿ ನಡೆಯಲಿದೆ. ವಿಶೇಷವಾಗಿ ರೈಲುಗಳಲ್ಲಿ ಸ್ಫೋಟ ನಡೆಯಲಿದೆ ಎಂದು ಎಚ್ಚರಿಸಿದ್ದಾನೆ. ಹೀಗಾಗಿಯೇ ನೀಲಮಣಿ ರಾಜು ಎಚ್ಚರಿಕೆ ನೀಡಿದ್ದಾರೆ.
ನಕಲಿ ಕರೆ?
ಪೊಲೀಸ್ ಸಹಾಯ ವಾಣಿ ಕರೆ ಮಾಡಿರುವ ವ್ಯಕ್ತಿ ಈ ಹಿಂದೆಯೂ ಇದೇ ರೀತಿಯ ಕರೆಗಳನ್ನು ಮಾಡುತ್ತಿದ್ದ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಆತನ ಹುಡುಕಾಟ ಕೂಡ ನಡೆಯುತ್ತಿದೆ.