Advertisement
ಬಾಂಗ್ಲಾ ಕ್ರಿಕೆಟ್ ತಂಡದ 17 ಆಟಗಾರರನ್ನು ಬಸ್‌ನಲ್ಲಿ ಒಯ್ಯಲಾಗಿತ್ತು. ಈ ಪೈಕಿ ಕ್ರಿಕೆಟಿಗರಾದ ಲಿಟನ್ ದಾಸ್, ನಯೀಮ್ ಹುಸೇನ್ ಹಾಗೂ ಬೌಲಿಂಗ್ ತರಬೇತುದಾರ, ಕರ್ನಾಟಕದ ಸುನೀಲ್ ಜೋಶಿ ಮಸೀದಿಗೆ ತೆರಳದೇ ಹೊಟೇಲ್‌ನಲ್ಲೇ ಉಳಿದುಕೊಂಡಿದ್ದರು. ಭಾರತದ ವಾಣಿಜ್ಯ ರಾಜಧಾನಿ ಮುಂಬಯಿಯ ಕಂಪ್ಯೂಟರ್ ಎಂಜಿನಿಯರ್, ಕ್ರಿಕೆಟ್ ವಿಶ್ಲೇಷಕ ಶ್ರೀನಿವಾಸ ಚಂದ್ರಶೇಖರನ್, ಬಾಂಗ್ಲಾ ತಂಡದ ಜತೆಗೆ ಬಸ್‌ನಲ್ಲಿ ತೆರಳಿದ್ದರು. ಹೆಚ್ಚು ಕಡಿಮೆ 8ರಿಂದ 10 ನಿಮಿಷ ಭಯಾನಕ ದಾಳಿಯನ್ನು ಕಣ್ಣಾರೆ ನೋಡುವಂತಹ ಸ್ಥಿತಿ ಬಾಂಗ್ಲಾ ಕ್ರಿಕೆಟಿಗರಿಗೆ ಎದುರಾಗಿತ್ತು. ಬಾಂಗ್ಲಾ ಕ್ರಿಕೆಟಿಗರಿಗೆ ಆರಂಭದಲ್ಲಿ ಬಸ್‌ನಿಂದ ಕೆಳಗಿಳಿಯಲು ಭದ್ರತಾ ಸಿಬಂದಿ ಅವಕಾಶ ನೀಡಿರಲಿಲ್ಲ. ದಾಳಿ ಮುಗಿದು ಹಲವು ನಿಮಿಷಗಳ ಅನಂತರ, ಮಸೀದಿಗೆ ಸಮೀಪದಲ್ಲೇ ಇದ್ದ ಹ್ಯಾಗ್ಲೆ ಪಾರ್ಕ್ ಮೂಲಕ ಹೊಟೇಲ್‌ಗೆ ತೆರಳಲು ಅವಕಾಶ ನೀಡಲಾಯಿತು.
ಘಟನೆಗೆ ಬಾಂಗ್ಲಾ ಕ್ರಿಕೆಟಿಗರು ಪ್ರತ್ಯಕ್ಷದರ್ಶಿಗಳಾಗಿದ್ದರು. ಬಸ್‌ನಲ್ಲಿ ಕುಳಿತುಕೊಂಡು, ಉಸಿರು ಬಿಗಿಹಿಡಿದು, ಘಟನೆಯನ್ನು ವೀಕ್ಷಿಸುತ್ತಿದ್ದ ಅವರು ಸ್ತಂಭೀಭೂತರಾಗಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಬಾಂಗ್ಲಾದೇಶ ತಂಡದ ವ್ಯವಸ್ಥಾಪಕ ಖಾಲಿದ್ ಮಸೂದ್, “ಘಟನೆಯಲ್ಲಿ ನಾವು ಸಿಕ್ಕಿಕೊಳ್ಳಲಿಲ್ಲ ಎನ್ನುವುದನ್ನು ನೆನೆದರೆ ಅಬ್ಟಾ ಎನಿಸುತ್ತದೆ. ಇಡೀ ಘಟನೆ ಒಂದು ಸಿನಿಮಾ ದೃಶ್ಯವಿದ್ದಂತಿತ್ತು. ರಕ್ತಸಿಕ್ತ ಜನರು ಮಸೀದಿಯಿಂದ ಹೊರನುಗ್ಗುತ್ತಿದ್ದದ್ದನ್ನು ನಾವು ಕಣ್ಣಾರೆ ಕಾಣಬಹುದಿತ್ತು. ಇಂತಹ ಭಯಾನಕ ಘಟನೆ ನೋಡಿದ ಆಟಗಾರರು ಇದರ ಪರಿಣಾಮಕ್ಕೊಳಗಾಗುವುದು ಸಹಜ. ಬಸ್‌ನಲ್ಲಿ ಸಿಕ್ಕಿಕೊಂಡು ಹೊರಬರಲಾಗದ ಸ್ಥಿತಿಗೆ ತಲುಪಿದ್ದ ಕೆಲ ಆಟಗಾರರು, ಪಾರಾಗುವ ದಾರಿ ತಿಳಿಯದೇ ಕಣ್ಣೀರು ಸುರಿಸುತ್ತಿದ್ದರು’ ಎಂದಿದ್ದಾರೆ. ಘಟನೆ ಬಗ್ಗೆ ಶ್ರೀನಿವಾಸ್ ಚಂದ್ರಶೇಖರ್ ಪ್ರತಿಕ್ರಿಯಿಸಿ, “ಪ್ರಾರಂಭದಲ್ಲಿ ನಮಗೆ ಪ್ರತಿಕ್ರಿಯಿಸಲು ಆಗಿರಲಿಲ್ಲ. ಭೀತರಾಗಿದ್ದಾಗ ನಿಮ್ಮ ಮನಸ್ಸು ಸಹಜವಾಗಿ ಸ್ಥಗಿತಗೊಂಡಿರುತ್ತದೆ. ಎಲ್ಲರಿಗೂ ಹಾಗೆ ಆಗಿತ್ತು. ಸುಮ್ಮನೆ ತಲೆ ಬಗ್ಗಿಸಿಕೊಂಡು ಕೂತಿದ್ದೆವು’ ಎಂದಿದ್ದಾರೆ.
ಘಟನೆಯ ಹಿನ್ನೆಲೆಯಲ್ಲಿ ಬಾಂಗ್ಲಾದೇಶ ತಂಡ ನ್ಯೂಜಿಲ್ಯಾಂಡ್ ಪ್ರವಾಸವನ್ನು ಮೊಟಕುಗೊಳಿಸಿ ಸ್ವದೇಶಕ್ಕೆ ಆಗಮಿಸಲು ನಿರ್ಧರಿಸಿದೆ. ಮಾ. 16ರಿಂದ ಇಲ್ಲಿ ಸರಣಿಯ 3ನೇ ಟೆಸ್ಟ್ ಆರಂಭವಾಗಬೇಕಿತ್ತು.
Related Articles
ಭಾರತ ಕ್ರಿಕೆಟ್ ತಂಡದ ಮಾಜಿ ಬೌಲರ್, ಕರ್ನಾಟಕ ತಂಡದ ಮಾಜಿ ನಾಯಕ ಎಡಗೈ ಸ್ಪಿನ್ನರ್ ಸುನೀಲ್ ಜೋಶಿ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ಅವರು ಬಾಂಗ್ಲಾ ದೇಶ ತಂಡದ ಸ್ಪಿನ್ ಬೌಲಿಂಗ್ ತರಬೇತುದಾರರಾಗಿ ಕಿವೀಸ್‌ಗೆ ತೆರಳಿದ್ದರು. ಆದರೆ ಅವರು ಬಾಂಗ್ಲಾ ಆಟಗಾರರೊಂದಿಗೆ ತೆರಳದೆ ಹೊಟೇಲ್‌ನಲ್ಲೇ ಉಳಿದುಕೊಂಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಜೋಶಿ, “ಮಂಗಳವಾರ ನಾನು ಭಾರತಕ್ಕೆ ಹಿಂದಿರುಗುತ್ತೇನೆ, ಇದಕ್ಕೂ ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದಿದ್ದಾರೆ.
Advertisement
“ಅದು ಭಯೋತ್ಪಾದಕ ಕೃತ್ಯವೆಂದೇ ಗೊತ್ತಾಗಿರಲಿಲ್ಲ’ಬಾಂಗ್ಲಾ ಕ್ರಿಕೆಟ್ ತಂಡದ ವೀಡಿಯೋ ವಿಶ್ಲೇಷಕರಾಗಿ ಕಿವೀಸ್‌ಗೆ ತೆರಳಿದ್ದ, ಭಾರತದ ಕಂಪ್ಯೂಟರ್ ಎಂಜಿನಿಯರ್ ಶ್ರೀನಿವಾಸ್ ಚಂದ್ರಶೇಖರನ್, ಘಟನೆಯನ್ನು ಕಣ್ಣಾರೆ ಕಂಡು ನಡುಗಿ ಹೋಗಿದ್ದಾರೆ. ತಮ್ಮೆದುರಿನ ಸಾವುನೋವುಗಳಿಗೆ ಸಾಕ್ಷಿಗಳಾಗಿದ್ದಾರೆ. ಇಡೀ ಘಟನೆಯನ್ನು ಅವರು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. “ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸುವ ಉದ್ದೇಶ ತಂಡಕ್ಕಿತ್ತು. ಅದಕ್ಕೆಂದೇ ಹ್ಯಾಗ್ಲೆ ಪಾರ್ಕ್‌ನಲ್ಲಿದ್ದ ಮಸೀದಿಗೆ ತೆರಳಿದ್ದೆವು. ಗುಂಡಿನ ದಾಳಿ ನಡೆಯುತ್ತಿದ್ದ ಸ್ಥಳಕ್ಕೂ ಬಾಂಗ್ಲಾ ಕ್ರಿಕೆಟಿಗರ ಬಸ್‌ಗೂ ಕೆಲವೇ ಮೀಟರ್‌ಗಳ ಅಂತರವಿತ್ತು. ಆರಂಭದಲ್ಲಿ ನಮಗೆ ಗುಂಡಿನ ಶಬ್ದ ಕೇಳಿ ಬಂತು. ಕೆಲವೇ ನಿಮಿಷಗಳಲ್ಲಿ ಮಹಿಳೆಯೊಬ್ಬಳು ರಸ್ತೆ ಮೇಲೆ ಬಿದ್ದು ಮೂಛೆì ಹೋಗಿದ್ದಳು. ಅದನ್ನು ನೋಡಿ ವೈದ್ಯಕೀಯ ನೆರವು ಬೇಕಿರಬಹುದು ಎನ್ನುವ ಕಾರಣಕ್ಕೆ ಕೆಲವು ಆಟಗಾರರು ಬಸ್‌ನಿಂದ ಕೆಳಕ್ಕಿಳಿದು ಮಹಿಳೆಯ ನೆರವಿಗೆ ಹೋಗಲು ಸಿದ್ಧವಾಗಿದ್ದರು. ಅಷ್ಟರಲ್ಲೇ ರಕ್ತಸಿಕ್ತರಾಗಿದ್ದ ಇನ್ನೊಂದಷ್ಟು ಮಂದಿ ಮಸೀದಿಯಿಂದ ಹೊರಗೆ ಓಡಿ ಬರುತ್ತಿರುವುದನ್ನು ನೋಡಿದೆವು. ಆಗ ಏನೋ ದೊಡ್ಡ ದುರಂತವೇ ನಡೆಯುತ್ತಿದೆ ಎಂಬ ಸುಳಿವು ಸಿಕ್ಕಿತು. ಆಗ ನಮಗೆ ಸೀಟ್ ಬಿಟ್ಟು, ಕೆಳಗೆ ಮಲಗಿಕೊಳ್ಳಲು ಸೂಚನೆ ಬಂತು. ಇನ್ನೆಷ್ಟು ನಿಮಿಷ ಹೀಗೆ ಇರಬೇಕು ಎಂದು ಗೊತ್ತಿರಲಿಲ್ಲ. ನಿಧಾನಕ್ಕೆ ಪರಿಸ್ಥಿತಿ ತಿಳಿಯಾಗುತ್ತ ಬಂದಾಗ ಆಟಗಾರರೂ ಸಹಜ ಸ್ಥಿತಿಗೆ ಬಂದರು…’ ಹೀಗೆಂದು ಹೇಳುತ್ತಿರುವಾಗ ಚಂದ್ರಶೇಖರನ್ ಧ್ವನಿ ನಡುಗುತ್ತಿತ್ತು.