ಬೆಂಗಳೂರು: ನಡು ರಸ್ತೆಯಲ್ಲಿ ಮದ್ಯ ಸೇವಿಸಿ ಗಲಾಟೆ ಮಾಡುತ್ತಿದ್ದುದನ್ನು ಪ್ರಶ್ನಿಸಿದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಮೇಲೆ ಹಲ್ಲೆ ನಡೆಸಿದ ಮೂವರು ಟೆಕ್ಕಿಗಳನ್ನು ಎಚ್‌ಎಎಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜ.12ರಂದು ತಡರಾತ್ರಿ 2 ಗಂಟೆ ಸುಮಾರಿಗೆ ಎಚ್‌ಎಎಲ್‌ನ ಗ್ರೂಪ್‌ಫೀಲ್ಡ್ ಮಾಲ್ ಬಳಿ ಈ ಘಟನೆ ನಡೆದಿದೆ.
ಜಮ್ಮು ಕಾಶ್ಮೀರದ ಸಮೀರ್ ಖನ್ನಾ (25), ಆಂಧ್ರಪ್ರದೇಶದ ಚಂದ್ರಶೇಖರ್ ಅಲಿಯಾಸ್ ಶಂಕರ್ (27) ಹಾಗೂ ದೆಹಲಿಯ ನವೀನ್ (28) ಬಂಧಿತ ಟೆಕ್ಕಿಗಳು. ಆರೋಪಿಗಳು ಹಲ್ಲೆ ನಡೆಸಿದ್ದರಿಂದ ಪಿಎಸ್‌ಐ ನವೀನ್ ಹಾಗೂ ಪೇದೆ ಮೋಹನ್ ಗಾಯಗೊಂಡಿದ್ದಾರೆ. ಮೂವರೂ ಆರೋಪಿಗಳು ಮುನೇಕೊಳಲುವಿನಲ್ಲಿ ಪ್ರತ್ಯೇಕ ಪಿಜಿಗಳಲ್ಲಿ ವಾಸವಾಗಿದ್ದು, ಸಾಫ್ಟ್ವೇರ್ ಕಂಪನಿಯೊಂದರಲ್ಲಿ ಉದ್ಯೋಗ ಮಾಡುತ್ತಿದ್ದಾರೆ.
ಜ.12ರಂದು ಪಿಎಸ್‌ಐ ನವೀನ್ ರಾತ್ರಿ ಪಾಳಿಯ ಪೇದೆ ಜತೆ ಗಸ್ತು ತಿರುಗುತ್ತಿದ್ದರು. ಇದೇ ವೇಳೆ ಆರೋಪಿಗಳು ಎಚ್‌ಎಎಲ್‌ನ ಗ್ರೂಪ್‌ಫೀಲ್ಡ್ ಮಾಲ್ ಬಳಿ ಮದ್ಯ ಸೇವಿಸುತ್ತ ರಸ್ತೆ ಮಧ್ಯೆ ನಿಂತು ಕೂಗಾಡುತ್ತಿದ್ದರು. ಇದನ್ನು ಕಂಡ ಸ್ಥಳೀಯರು ಮನೆಗೆ ಹೋಗುವಂತೆ ಸೂಚಿಸಿದ್ದಾರೆ. ಆದರೂ ಆರೋಪಿಗಳು ಸಾರ್ವಜನಿಕರನ್ನು ಹೆದರಿಸಿ ಅಲ್ಲೇ ನಿಂತು ಗಲಾಟೆ ಮಾಡುತ್ತಿದ್ದರು.
ವಿಷಯ ತಿಳಿದು ಸ್ಥಳಕ್ಕೆ ಬಂದ ಸಬ್ ಇನ್ಸ್‌ಪೆಕ್ಟರ್ ನವೀನ್ ಮತ್ತು ಪೇದೆ ಮೋಹನ್, ಸ್ಥಳದಿಂದ ತೆರಳುವಂತೆ ಮೂವರಿಗೂ ಸೂಚಿಸಿದ್ದಾರೆ. ಆದರೆ, ಪೊಲೀಸರ ಮಾತು ಲೆಕ್ಕಿಸದ ಆರೋಪಿಗಳು ವಾಗ್ವಾದ ನಡೆಸಿದ್ದು, ಇದು ವಿಕೋಪಕ್ಕೆ ಹೋದಾಗ ಮೂವರೂ ಸೇರಿಕೊಂಡು ಪಿಎಸ್‌ಐ ಹಾಗೂ ಪೇದೆ ಮೇಲೆ ಹಲ್ಲೆ ನಡೆಸಿದ್ದಾರೆ.
ಕೂಡಲೇ ಠಾಣೆಗೆ ಮಾಹಿತಿ ನೀಡಿ ಹೆಚ್ಚಿನ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿಕೊಂಡ ಪಿಎಸ್‌ಐ, ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಆರೋಪಿಗಳ ವಿರುದ್ಧ ಸಮವಸ್ತ್ರದಲ್ಲಿದ್ದ ಸರ್ಕಾರಿ ಅಧಿಕಾರಿ ಮೇಲೆ ಹಲ್ಲೆ ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಎಚ್‌ಎಎಲ್ ಠಾಣೆ ಪೊಲೀಸರು ತಿಳಿಸಿದ್ದಾರೆ.