ಶ್ರೀನಗರ : ಇಲ್ಲಿನ ವಿಮಾನ ನಿಲ್ದಾಣದ ಸಮೀಪದಲ್ಲೇ ಇರುವ ಬಿಎಸ್‌ಎಫ್ ಕ್ಯಾಂಪ್ ಗುರಿಯಾಗಿರಿಸಿಕೊಂಡು ಉಗ್ರರು ಮಂಗಳವಾರ ನಸುಕಿನ ವೇಳೆ ದಾಳಿ ನಡೆಸಿದ್ದಾರೆ. ಪ್ರತಿ ದಾಳಿ ನಡೆಸಿದಾಗ ಓರ್ವ ಯೋಧ ಹುತಾತ್ಮನಾಗಿ, ಇತರ ಐವರು ಭದ್ರತಾ ಸಿಬಂದಿಗಳು ಗಾಯಗೊಂಡಿದ್ದಾರೆ. ದಾಳಿಗೆ ಕಾರಣರಾದ ಮೂವರು ಉಗ್ರರನ್ನು ಹೊಡೆದುರುಳಿಸಲಾಗಿದೆ.
ನಸುಕಿನ 4 ಗಂಟೆಯ ವೇಳೆ ಮೂವರು ಉಗ್ರರು ಹೊಂಚು ದಾಳಿ ನಡೆಸಿದ್ದು, ಉಗ್ರರು ಸಮೀಪದ ಪಕ್ಕದ ಕಟ್ಟಡದಲ್ಲಿ ಅವಿತು ಕುಳಿತಿದ್ದು ಅವರಿಗಾಗಿ ಭಾರೀ ಸಂಖ್ಯೆಯ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿ ಮೂವರನ್ನು ಹತ್ಯೆಗೈದಿವೆ.
ರಾಷ್ಟ್ರೀಯ ರೈಫಲ್ಸ್, ಸಿಆರ್‌ಪಿಎಫ್ ಮತ್ತು ಶ್ರೀನಗರ ಪೊಲೀಸರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ದಾಳಿಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಐಜಿಪಿ ಮುನೀರ್ ಖಾನ್ ಜೈಷ್-ಇ -ಮೊಹಮದ್ ಸಂಘಟನೆಯ ಉಗ್ರರು ದಾಳಿ ನಡೆಸಿದ್ದು , ಮೂವರನ್ನು ಹತ್ಯೆಗೈಯಲಾಗಿದೆ. ಓರ್ವ ಯೋಧ ಹುತಾತ್ಮರಾಗಿದ್ದು,ಇಬ್ಬರು ಪೊಲೀಸರು ಸೇರಿ ಐವರು ಭದ್ರತಾ ಸಿಬಂದಿಗಳು ಗಾಯಗೊಂಡಿದ್ದು ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿಸಿದರು.
ವಿಮಾನ ನಿಲ್ದಾಣದಲ್ಲಿ ಭದ್ರತಾ ಕಾರಣಗಳಿಗಾಗಿ ತಾತ್ಕಾಲಿಕವಾಗಿ ಎಲ್ಲಾ ವಿಮಾನಗಳ ಸಂಚಾರವನ್ನು ಸ್ಥಗಿತ ಗೊಳಿಸಲಾಗಿತ್ತು. ವಿಮಾನ ನಿಲ್ದಾಣದ ಸುತ್ತ ಮುತ್ತ ಹೈ ಅಲರ್ಟ್ ಘೋಷಿಸಿಲಾಗಿದೆ.