ಇಸ್ಲಾಮಾಬಾದ್: ಫ್ರಾನ್ಸ್ ಮೂಲದ ಹಣಕಾಸು ವಿಚಕ್ಷಣಾ ಕಾರ್ಯಪಡೆ (ಎಫ್ಎಟಿಎಫ್)ಯಿಂದ ಬೂದು ಬಣ್ಣದ ಪಟ್ಟಿಗೆ ಸೇರ್ಪಡೆಯಾಗಿರುವ ಪಾಕಿಸ್ತಾನ ಈಗ ಎಚ್ಚೆತ್ತುಕೊಂಡಿದೆ. ಅದರಂತೆ, ವಿವಿಧ ದೇಶಗಳ ಜತೆಗೆ ಅಪರಾಧಿಗಳ ಮಾಹಿತಿ ವಿನಿಮಯ ಮಾಡಿಕೊಳ್ಳುವುದರ ಬಗೆಗಿನ ವಿಧೇಯಕವನ್ನು ಅಲ್ಲಿನ ಸಂಸತ್ ಅಂಗೀಕರಿಸಿದೆ. ಉಗ್ರರಿಗೆ ನೀಡುತ್ತಿರುವ ಬೆಂಬಲ ಸಂಪೂರ್ಣ ಸ್ಥಗಿತಗೊಳಿಸುವ ನಿಟ್ಟಿನಲ್ಲಿ ಎಫ್ಎಟಿಎಫ್ ಒಟ್ಟು 27 ಅಂಶಗಳನ್ನು ಪಾಲನೆ ಮಾಡಬೇಕು ಎಂದು ಮುಂದಿನ ತಿಂಗಳ ಅಂತ್ಯದ ವರೆಗೆ ಈಗಾಗಲೇ ಗಡುವು ವಿಧಿಸಿದೆ. ಈ ಪೈಕಿ ಕನಿಷ್ಠ 22 ಅಂಶಗಳನ್ನು ಪಾಲನೆ ಮಾಡದೇ ಇದ್ದರೆ ಪಾಕಿಸ್ತಾನವನ್ನು ಕಪ್ಪುಪಟ್ಟಿಗೆ ಸೇರ್ಪಡೆ ಮಾಡಲಾಗುತ್ತದೆ.
ಡಿ.6ರಂದು 22 ಪ್ರಶ್ನೆಗಳಿಗೆ ಪಾಕಿಸ್ತಾನ ಉತ್ತರಗಳನ್ನು ಸಲ್ಲಿಕೆ ಮಾಡಿತ್ತು.
ಇಲ್ಲಿನ ನ್ಯಾಷನಲ್ ಅಸೆಂಬ್ಲಿಯಲ್ಲಿ ಅನುಮೋದನೆಗೊಂಡಿರುವ “ಪರಸ್ಪರ ಕಾನೂನು ಸಹಕಾರ (ಅಪರಾಧಿಗಳಿಗೆ ಸಂಬಂಧಿಸಿದ ವಿಚಾರಗಳು) ವಿಧೇಯಕ 2019’ರ ಪ್ರಕಾರ ಇತರ ದೇಶಗಳಲ್ಲಿ ಇರುವ ಅಪರಾಧಿಗಳ ಬಗ್ಗೆ ವಿಚಾರಣೆ, ತನಿಖೆ, ಅವರು ಇರುವ ಸ್ಥಳದ ಬಗ್ಗೆ ಮಾಹಿತಿ ಕೋರಲು ಅವಕಾಶ ಇದೆ.
ಪ್ರತಿಪಕ್ಷ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ ಈ ವಿಧೇಯಕಕ್ಕೆ ವಿರೋಧ ವ್ಯಕ್ತಪಡಿಸಿದೆ.