ಮುಂಬೈ: 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಶಸ್ತ್ರಾಸ್ತ್ರ ಪೂರೈಸಿದ ಆರೋಪದಡಿಯಲ್ಲಿ ಗ್ಯಾಂಗ್ ಸ್ಟರ್ ಮುಸ್ತಫಾ ದೊಸ್ಸಾ, ಫೈರೋಜ್ ಅಬ್ದುಲ್ ರಶೀದ್ ಖಾನ್, ತಾಹಿರ್ ಮರ್ಚಂಟ್, ಭೂಗತ ಪಾತಕಿ ಅಬು ಸಲೇಂ, ಕರಿಮುಲ್ಲಾ ಖಾನ್ ಸೇರಿದಂತೆ 6ಆರೋಪಿಗಳನ್ನು ದೋಷಿ ಎಂದು ಮುಂಬೈ ವಿಶೇಷ ಟಾಡಾ ಕೋರ್ಟ್ ಶುಕ್ರವಾರ ಮಹತ್ವದ ತೀರ್ಪು ಪ್ರಕಟಿಸಿದೆ. ಪ್ರಕರಣದಲ್ಲಿ ಅಬ್ದುಲ್ ಕಯೂಮ್ ಶೇಖ್ ನನ್ನು ಖುಲಾಸೆಗೊಳಿಸಿದೆ.
ಮುಸ್ತಫಾ ದೌಸಾ ಸ್ಫೋಟ ಪ್ರಕರಣದ ಸಂಚಿನ ರೂವಾರಿಯಾಗಿದ್ದು, ಸುಮಾರು 3000 ಕೆಜಿ ಆರ್ ಡಿಎಕ್ಸ್ ಅನ್ನು ಪೂರೈಸಿದ್ದ. ಅಷ್ಟೇ ಅಲ್ಲ ಕೆಲವು ಯುವಕರನ್ನು ಶಸ್ತ್ರಾಸ್ತ್ರ ತರಬೇತಿಗಾಗಿ ಪಾಕಿಸ್ತಾನಕ್ಕೆ ಕಳುಹಿಸಿಕೊಟ್ಟಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಘಟನೆ ನಡೆದು ಸುಮಾರು 24 ವರ್ಷಗಳ ಬಳಿಕ ತೀರ್ಪು ಹೊರಬಿದ್ದಂತಾಗಿದೆ. ಜಾಗತಿಕವಾಗಿ ತಲ್ಲಣಗೊಳಿಸಿದ್ದ ಮುಂಬೈ ಬಾಂಬ್ ಸ್ಫೋಟದಲ್ಲಿ 257 ಮಂದಿ ಬಲಿಯಾಗಿದ್ದರು. ಅಂದಾಜು 27 ಕೋಟಿ ರೂಪಾಯಿಯಷ್ಟು ಆಸ್ತಿ ಪಾಸ್ತಿ ನಷ್ಟವಾಗಿತ್ತು.
1993ರ ಮಾರ್ಚ್ 12ರಂದು ದೇಶದ ವಾಣಿಜ್ಯ ನಗರಿ ಏರ್ ಇಂಡಿಯಾ ಬಿಲ್ಡಿಂಗ್, ಬಾಂಬೆ ಸ್ಟಾಕ್ ಎಕ್ಸಚೇಂಜ್ ಸೇರಿದಂತೆ 12 ಸ್ಥಳಗಳಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸಿತ್ತು. ಈ ಪ್ರಕರಣದಲ್ಲಿ ಮುಸ್ತಫಾ ದೊಸ್ಸಾ, ಅಬು ಸಲೇಂ, ರಿಯಾಜ್ ಸಿದ್ದಿಖಿ, ಖ್ವಾಯೂಮ್ ಶೇಕ್, ತಾಹೆರ್ ಮರ್ಚಂಟ್, ಕರಿಮುಲ್ಲಾ ಖಾನ್, ಫೈರೋಜ್ ರಶೀದ್ ಖಾನ್ ಸೇರಿದಂತೆ 7 ಮಂದಿ ಆರೋಪಿಗಳಾಗಿದ್ದರು. ಮುಸ್ತಫಾ, ಅಬು ಸಲೇಂ, ತಾಹಿರ್ ಮರ್ಚಂಟ್ ಹಾಗೂ ಫೈರೋಜ್ ಖಾನ್ 1993ರ ಮುಂಬೈ ಸರಣಿ ಸ್ಫೋಟದ ಪ್ರಮುಖ ಸಂಚುಗಾರರು ಎಂದು ಟಾಡಾ ಕೋರ್ಟ್ ಹೇಳಿದೆ.
ಅಬ್ದುಲ್ ಸಲೇಂ ಗುಜರಾತ್ ಗೆ ತೆರಳಿ 9 ಎಕೆ 56, 100 ಗ್ರೆನೇಡ್ಸ್ ಹಾಗೂ ಶಸ್ತ್ರಾಸ್ತ್ರವನ್ನು ತೆಗೆದುಕೊಂಡು ಮುಂಬೈಗೆ ತಂದಿದ್ದು, ಅದರಲ್ಲಿ ಕೆಲವು ಶಸ್ತ್ರಾಸ್ತ್ರವನ್ನು ನಟ ಸಂಜಯ್ ದತ್ ಗೆ ನೀಡಿರುವುದಾಗಿ ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿತ್ತು. ಸಲೇಂನನ್ನು 2002ರಲ್ಲಿ ಪೋರ್ಚುಗಲ್ ನಲ್ಲಿ ಬಂಧಿಸಿ, 2005ರಲ್ಲಿ ಭಾರತಕ್ಕೆ ಗಡಿಪಾರು ಮಾಡಲಾಗಿತ್ತು.