Advertisement

ಭಯೋತ್ಪಾದನೆ ಬೇರು ಸಹಿತ ಕೀಳಬೇಕು: ಜೋಶಿ

12:20 PM May 22, 2019 | Suhan S |

ಧಾರವಾಡ: ಭಯೋತ್ಪಾದನೆಯು ಜಗತ್ತಿನಾದ್ಯಂತ ಹಬ್ಬಿದ ಕ್ಯಾನ್ಸರ್‌ ರೋಗವಾಗಿದೆ. ಭಯೋತ್ಪಾದನೆ ಕಾರ್ಯವನ್ನು ವಿರೋಧಿಸದೇ ಅದನ್ನು ಬೇರು ಸಹಿತ ನಿರ್ಮೂಲನೆ ಮಾಡಲು ಸಮಸ್ತ ಭಾರತೀಯರು ಸಿದ್ಧವಾಗಬೇಕು ಎಂದು ಉತ್ತರ ಕರ್ನಾಟಕ ಸೈನಿಕರ ಕಲ್ಯಾಣ ಸಮಿತಿ ಪ್ರಧಾನ ಕಾರ್ಯದರ್ಶಿ ಕೃಷ್ಣ ಜೋಶಿ ಹೇಳಿದರು.

Advertisement

ಡಿಸಿ ಕಚೇರಿ ಆವರಣದಲ್ಲಿರುವ ಕಾರ್ಗಿಲ್ ಸ್ತೂಪದ ಬಳಿ ಭಯೋತ್ಪಾದನಾ ವಿರೋಧಿ ದಿನಾಚರಣೆ ಅಂಗವಾಗಿ ಉತ್ತರ ಕರ್ನಾಟಕ ಸೈನಿಕರ ಕಲ್ಯಾಣ ಸಮಿತಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಯೋತ್ಪಾದನೆ ಒಂದು ಅಸಾಂಪ್ರದಾಯಿಕ ಯುದ್ಧ. ಭಾರತ ಶಾಂತಿ ಬಯಸುವ ರಾಷ್ಟ್ರವಾಗಿದ್ದು, ಎಂದಿಗೂ ನಾವು ಇನ್ನೊಂದು ರಾಷ್ಟ್ರದ ಭೂಪ್ರದೇಶವನ್ನು ಕಬಳಿಸುವ, ಆಕ್ರಮಿಸುವ ಕೃತ್ಯವನ್ನು ಎಸಗಿಲ್ಲ. ಆದರೆ ಭಾರತವನ್ನು ಕೆಣಕಿದರೆ ನಮಗಿನ್ನು ಉಳಿಗಾಲವಿಲ್ಲ ಎಂಬ ಎಚ್ಚರಿಕೆಯನ್ನು ಭಾರತ ಪಾಕಿಸ್ತಾನಕ್ಕೆ ನೀಡಿದೆ. ಪ್ರಾಣತೆತ್ತ ನಮ್ಮ ವೀರಸೈನಿಕರನ್ನು ಸದಾ ಸ್ಮರಿಸಬೇಕಾದದ್ದು ಆದ್ಯ ಕರ್ತವ್ಯ. ಭಯೋತ್ಪಾದನೆ ನಿಗ್ರಹಿಸುವಲ್ಲಿ ನಮ್ಮನ್ನು ನಾವೇ ತೊಡಗಿಸಿಕೊಳ್ಳೋಣ ಎಂದರು.

ಅಧ್ಯಕ್ಷತೆ ವಹಿಸಿದ್ದ ಉತ್ತರ ಕರ್ನಾಟಕ ಸೈನಿಕರ ಕಲ್ಯಾಣ ಸಮಿತಿ ಅಧ್ಯಕ್ಷ ಚಂದ್ರಶೇಖರ ಅಮಿನಗಡ ಮಾತನಾಡಿ, ಭಯೋತ್ಪಾದಕರ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸಿ ತಕ್ಕ ಶಿಕ್ಷೆಯನ್ನು ನೀಡಲು ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಸಹಕಾರ ನೀಡಬೇಕು ಎಂದರು.

2001 ಸೆ. 18ರಂದು ಕಾಶ್ಮೀರದ ಅನಂತನಾಗ ಜಿಲ್ಲೆಯಲ್ಲಿ ಭಯೋತ್ಪಾದಕರ ಗುಂಡಿಗೆ ಬಲಿಯಾದ ವೀರಯೋಧ ರಾಘವೇಂದ್ರ ಬಡಿಗೇರ ಅವರ ಪೋಷಕರಾದ ಮಹಾದೇವಪ್ಪ ಮತ್ತು ಇಂದಿರಾ ಅವರನ್ನು ಗೌರವಿಸಲಾಯಿತು.

Advertisement

ವೀರಣ್ಣ ಒಡ್ಡೀನ, ಪಂಡಿತ ಮುಂಜಿ, ಎಸ್‌.ಬಿ. ಗುತ್ತಲ, ಪ್ರಾಣೇಶ ಪಾಶ್ಚಾಪುರ, ಭೀಮಪ್ಪ ಜಾಧವ, ಈರಪ್ಪಣ್ಣ ಅಮೀನಗಡ, ಬಾಬುರಾವ್‌ ರಾಠೊಡ, ನಜೀರ ಗೊರವನಕೊಳ್ಳ, ನಾಗರತ್ನಾ ಅಮೀನಗಡ, ಪ್ರಕಾಶ ಕುಲಕರ್ಣಿ, ಎ.ಆರ್‌. ಜೋಶಿ, ಪಿ.ಎನ್‌. ಪಾಟೀಲ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next