ನವದೆಹಲಿ: ಭಯೋತ್ಪಾದನೆ ಚಟುವಟಿಕೆಗಳಿಗೆ ಹಣಕಾಸು ನೆರವು ನೀಡಿದ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾಗಿದ್ದ ಅಪರಾಧಿ ಯಾಸಿನ್ ಮಲಿಕ್ ಗೆ ಎನ್ ಐಎ ಕೋರ್ಟ್ ಬುಧವಾರ (ಮೇ 25) ಜೀವಾವಧಿ ಶಿಕ್ಷೆ ಹಾಗೂ 10 ಲಕ್ಷ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.
ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಆರೋಪದಡಿ ಎನ್ ಐಎ ಕೋರ್ಟ್ ಜಮ್ಮು-ಕಾಶ್ಮೀರ ಪ್ರತ್ಯೇಕತಾವಾದಿ ಮುಖಂಡ ಯಾಸಿನ್ ಮಲಿಕ್ ದೋಷಿ ಎಂದು ತೀರ್ಪು ನೀಡಿತ್ತು. ಬುಧವಾರ (ಮೇ 25) ಶಿಕ್ಷೆಯ ಪ್ರಮಾಣ ಘೋಷಿಸುವುದಾಗಿ ತಿಳಿಸಿದ್ದು, ಈ ಹಿನ್ನೆಲೆಯಲ್ಲಿ ಇಂದು ಬಿಗಿ ಪೊಲೀಸ್ ಭದ್ರತೆಯಲ್ಲಿ ಯಾಸಿನ್ ಮಲಿಕ್ ನನ್ನು ಎನ್ ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಯಾಸಿನ್ ಮಲಿಕ್ ಗೆ ಮರಣದಂಡನೆ ಶಿಕ್ಷೆ ನೀಡಬೇಕೆಂದು ಪ್ರಾಸಿಕ್ಯೂಷನ್ ಎನ್ ಐಎ ವಿಶೇಷ ನ್ಯಾಯಾಧೀಶರ ಸಮ್ಮುಖದಲ್ಲಿ ವಾದ, ಪ್ರತಿವಾದ ನಡೆದ ಸಂದರ್ಭದಲ್ಲಿ ಮನವಿ ಮಾಡಿಕೊಂಡಿರುವುದಾಗಿ ಕೋರ್ಟ್ ಮೂಲಗಳು ತಿಳಿಸಿದ್ದವು.
Related Articles
ವಾದ, ಪ್ರತಿವಾದ ಆಲಿಸಿದ್ದ ಜಡ್ಜ್ ಇಂದು 3.30ಕ್ಕೆ ಶಿಕ್ಷೆಯ ಪ್ರಮಾಣ ಘೋಷಿಸುವುದಾಗಿ ಪ್ರಕಟಿಸಿದ್ದರು. ಬಳಿಕ ತಡವಾಗಿ ಶಿಕ್ಷೆಯನ್ನು ಘೋಷಿಸಲಾಗಿತ್ತು. ನಾನು 1994ರಲ್ಲಿ ಶಸ್ತ್ರಾಸ್ತ್ರವನ್ನು ತ್ಯಜಿಸಿದ ನಂತರ ಮಹಾತ್ಮ ಗಾಂಧಿಯವರ ತತ್ವವನ್ನು ಅನುಸರಿಸುತ್ತಾ ಬಂದಿದ್ದೇನೆ. ಕಾಶ್ಮೀರದಲ್ಲಿ ಈವರೆಗೂ ಅಹಿಂಸಾ ರಾಜಕೀಯದಲ್ಲಿ ತೊಡಗಿದ್ದೇನೆ ಎಂದು ಯಾಸಿನ್ ಮಲಿಕ್ ಕೋರ್ಟ್ ವಿಚಾರಣೆ ವೇಳೆ ತಿಳಿಸಿರುವುದಾಗಿ ವರದಿಯಾಗಿದೆ.
“ನಾನು ದೇಶದ ಏಳು ಪ್ರಧಾನಿಗಳ ಜತೆ ಕೆಲಸ ಮಾಡಿದ್ದೇನೆ ಎಂದು ಹೇಳಿರುವ ಯಾಸಿನ್ ಮಲಿಕ್, ಒಂದು ವೇಳೆ ಕಳೆದ 28 ವರ್ಷಗಳಲ್ಲಿ ಯಾವುದೇ ಭಯೋತ್ಪಾದನೆ ಚಟುವಟಿಕೆ ಅಥವಾ ಹಿಂಸಾಚಾರದಲ್ಲಿ ಶಾಮೀಲಾಗಿದ್ದನ್ನು ಸಾಬೀತುಪಡಿಸಿದರೆ ಗುಪ್ತಚರ ಇಲಾಖೆ ವಿರುದ್ಧ ಹೋರಾಡುವುದಾಗಿ ಎಚ್ಚರಿಸಿದ್ದಾರೆ. ಅಲ್ಲದೇ ಪುರಾವೆ ಸಿಕ್ಕಲ್ಲಿ ರಾಜಕೀಯದಿಂದ ನಿವೃತ್ತಿಯಾಗಿ, ಮರಣದಂಡನೆ ಶಿಕ್ಷೆ ಸ್ವೀಕರಿಸುವುದಾಗಿ ಮಲಿಕ್ ತಿಳಿಸಿರುವುದಾಗಿ ವರದಿ ವಿವರಿಸಿದೆ.
ಶ್ರೀನಗರದಲ್ಲಿ ಕಲ್ಲು ತೂರಾಟ; ಬಿಗಿ ಪೊಲೀಸ್ ಬಂದೋಬಸ್ತ್
ಯಾಸಿನ್ ಮಲಿಕ್ ಗೆ ದೆಹಲಿಯ ಎನ್ ಐಎ ಕೋರ್ಟ್ ಶಿಕ್ಷೆಯ ಪ್ರಮಾಣ ಘೋಷಿಸುವ ಮುನ್ನ ಶ್ರೀನಗರದ ಹಲವೆಡೆ ಕಲ್ಲು ತೂರಾಟ ನಡೆಸಿದ ಘಟನೆ ನಡೆದಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದು, ಗಾಳಿಯಲ್ಲಿ ಗುಂಡು ಹಾರಿಸಿ ಗುಂಪನ್ನು ಚದುರಿಸಲು ಯತ್ನಿಸುತ್ತಿರುವ ದೃಶ್ಯ ಮಾಧ್ಯಮಗಳಲ್ಲಿ ವರದಿಯಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಲಾಲ್ ಚೌಕ್ ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ ಎಂದು ವರದಿ ತಿಳಿಸಿದೆ.