ಬ್ಯೂನಸ್ ಐರಿಸ್ : ‘ಭಯೋತ್ಪಾದನೆ ಮತ್ತು ಹಣಕಾಸು ಅಪರಾಧಗಳು ವಿಶ್ವ ಎದುರಿಸುತ್ತಿರುವ ಎರಡು ಅತೀ ದೊಡ್ಡ ಬೆದರಿಕೆಗಳು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿನ ಜಿ20 ಶೃಂಗದ ಪಾರ್ಶ್ವದಲ್ಲಿ ಬ್ರಿಕ್ಸ್ ನಾಯಕರ ಅನೌಪಚಾರಿಕ ಸಭೆಯಲ್ಲಿ ಹೇಳಿದರು.
“ಭಯೋತ್ಪಾದನೆ ಮತ್ತು ಹಣಕಾಸು ಅಪರಾಧಗಳು ವಿಶ್ವದ ಮುಂದಿರುವ ಎರಡು ಅತೀ ದೊಡ್ಡ ಬೆದರಿಕೆಗಳು. ಇವನ್ನು ನಿಗ್ರಹಿಸದಿದ್ದರೆ ವಿಶ್ವಕ್ಕೆ ಉಳಿಗಾಲವಿಲ್ಲ. ಹಣಕಾಸು ಅಪರಾಧಗಳನ್ನು ಎಸಗುವವರು ಭಯೋತ್ಪಾದನೆಯಷ್ಟೇ ದೊಡ್ಡ ಬೆದರಿಕೆಯನ್ನು ಒಡ್ಡುತ್ತಾರೆ. ಭಯೋತ್ಪಾದನೆಯ ಹಾಗೆ ಕಪ್ಪು ಹಣದ ವಿರುದ್ಧ ಕೂಡ ಇಡಿಯ ಜಗತ್ತು ಒಂದಾಗಿ ಹೋರಾಡಬೇಕಿದೆ” ಎಂದು ಮೋದಿ ಹೇಳಿದರು.
‘ವಿಶ್ವದ ಅಭಿವೃದ್ಧಿಶೀಲ ದೇಶಗಳು ಒಗ್ಗೂಡಿ ತಮ್ಮ ಸಮಾನ ಹಿತಾಸಕ್ತಿಯ ವಿಷಯಗಳಿಗಾಗಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕು’ ಎಂದು ಮೋದಿ ಕರೆ ನೀಡಿದರು.
‘ವಿಶ್ವಸಂಸ್ಥೆಯಲ್ಲಾಗಲೀ ಬಹು ಸ್ತರದ ಜಾಗತಿಕ ಸಂಘಟನೆಗಳಲ್ಲಾಗಲೀ ಅಭಿವೃದ್ಧಿಶೀಲ ದೇಶಗಳು ತಮ್ಮ ಸಮಾನ ಹಿತಾಸಕ್ತಿಯ ವಿಷಯಗಳ ಬಗ್ಗೆ ಒಂದಾಗಿ ಧ್ವನಿ ಎತ್ತಬೇಕು. ನಾವು ಬ್ರಿಕ್ಸ್ ಶೃಂಗಕ್ಕೆ ಬರಲು ಕಾರಣವೇ ಇದಾಗಿದೆ’ ಎಂದು ಮೋದಿ ಹೇಳಿದರು.
ಬ್ರಝಿಲ್, ರಶ್ಯ, ಭಾರತ, ಚೀನ ಮತ್ತು ದಕ್ಷಿಣ ಆಫ್ರಿಕ ದೇಶಗಳು ಬ್ರಿಕ್ಸ್ ಅಂಗ-ದೇಶಗಳಾಗಿವೆ.