ನವದೆಹಲಿ: ಕಳೆದ ನಾಲ್ಕು ವರ್ಷಗಳಲ್ಲಿ ಜಮ್ಮು- ಕಾಶ್ಮೀರದಲ್ಲಿ ಕಾರ್ಯಪ್ರವೃತ್ತರಾಗಿರುವ ಉಗ್ರರ ನಾನಾ ಸಂಘಟನೆಗಳು 700 ಮಂದಿ ಯುವಕರನ್ನು ತಮ್ಮಲ್ಲಿ ನೇಮಕ ಮಾಡಿಕೊಂಡಿವೆ. ಇವರಲ್ಲಿ 141 ಉಗ್ರವಾದಿಗಳು ವಿದೇಶಿ ಮೂಲದವರು ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.
ಸಚಿವಾಲಯ ನೀಡಿರುವ ಪ್ರಕಟಣೆಯ ಪ್ರಕಾರ, 2018ರಲ್ಲಿ 187 ಮಂದಿ ನಾನಾ ಸಂಘಟನೆಗಳಿಗೆ ನೇಮಕವಾಗಿದ್ದರೆ, 2019ರಲ್ಲಿ 121, 2020ರಲ್ಲಿ 181 ಹಾಗೂ 2021ರಲ್ಲಿ 142 ಉಗ್ರರು ನೇಮಕವಾಗಿದ್ದಾರೆ. ಇದೇ ಜೂನ್ ಅಂತ್ಯದ ಹೊತ್ತಿಗೆ 69 ಉಗ್ರರು ನೇಮಕವಾಗಿದ್ದಾರೆ.
ಜು. 5ರಿಂದೀಚೆಗೆ 82 ವಿದೇಶಿ ಉಗ್ರರು ಸಕ್ರಿಯರಾಗಿದ್ದಾರೆ. ಇವರ ಜೊತೆಯಲ್ಲಿ 59 ಸ್ಥಳೀಯ ಉಗ್ರರು ಸಹಾಯಕ್ಕೆ ಇದ್ದಾರೆ. ವಿದೇಶಿ ಉಗ್ರರಲ್ಲಿ ಬಹುತೇಕರು ಲಷ್ಕರ್-ಎ-ತೊಯ್ಯಬಾ ಹಾಗೂ ಅದರ ಭಾಗವಾದ “ದ ರೆಸಿಸ್ಟನ್ಸ್ ಫ್ರಂಟ್’, “ಜೈಷ್-ಎ-ಮೊಹಮ್ಮದ್’ ಹಾಗೂ “ಹಿಜ್ಬುಲ್ ಮುಜಾಹಿದ್ದೀನ್’ ಸಂಘಟನೆಗಳಿಗೆ ಸೇರಿದವರು.
ಪ್ರಸಕ್ತ ವರ್ಷ ಇಲ್ಲಿಯವರೆಗೆ, ಜಮ್ಮು ಕಾಶ್ಮೀರದಲ್ಲಿ 55 ಎನ್‌ಕೌಂಟರ್‌ಗಳು ನಡೆದಿದ್ದು, 125 ಉಗ್ರರು ಹತರಾಗಿದ್ದಾರೆ. ಇವರಲ್ಲಿ 91 ಉಗ್ರರು ವಿದೇಶಿಗರಾಗಿದ್ದು, 34 ಮಂದಿ ಸ್ಥಳೀಯ ಉಗ್ರರಾಗಿದ್ದಾರೆ. ಇದೇ ಎನ್‌ಕೌಂಟರ್‌ಗಳಲ್ಲಿ ಒಟ್ಟು 123 ಉಗ್ರರನ್ನು ಸೆರೆ ಹಿಡಿಯಲಾಗಿದ್ದು ಅವರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಎನ್‌ಕೌಂಟರ್‌ಗಳಲ್ಲಿ ಭದ್ರತಾ ಪಡೆಗಳ ಇಬ್ಬರು ಸಿಬ್ಬಂದಿ ಹುತಾತ್ಮರಾಗಿದ್ದರೆ, 23 ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.
2018ರಲ್ಲಿ 185 ಉಗ್ರರನ್ನು ಸೆರೆ ಹಿಡಿಯಲಾಗಿತ್ತು. 2019ರಲ್ಲಿ 148, 2020ರಲ್ಲಿ 251 ಹಾಗೂ 2021ರಲ್ಲಿ 172 ಉಗ್ರರನ್ನು ಸೆರೆ ಹಿಡಿಯಲಾಗಿದೆ ಎಂದು ಸಚಿವಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.