Advertisement

ಭಾರತದಲ್ಲಿರುವ ಇಸ್ರೇಲಿಗರ ಮೇಲೆ ದಾಳಿ ಮಾಡಲು ಅಲ್-ಖೈದಾ, ಐ.ಎಸ್.ಐ. ಪ್ಲ್ಯಾನ್!

09:20 AM Sep 27, 2019 | Hari Prasad |

ನವದೆಹಲಿ: ಸೆಪ್ಟಂಬರ್ ಮತ್ತು ಅಕ್ಟೋಬರ್ ತಿಂಗಳಿನ ರಜಾ ದಿನಗಳಲ್ಲಿ ಭಾರತದಲ್ಲಿರುವ ಯಹೂದಿಗಳು ಮತ್ತು ಇಸ್ರೇಲ್ ಸಮುದಾಯಗಳ ಮೇಲೆ ದಾಳಿ ಮಾಡುವ ಯೋಜನೆಯೊಂದನ್ನು ಜಾಗತಿಕಮಟ್ಟದ ಉಗ್ರ ಸಂಘಟನೆ ಅಲ್-ಖೈದಾ ಮತ್ತು ಐಸಿಸ್ ನೊಂದಿಗೆ ನಂಟು ಹೊಂದಿರುವ ಉಗ್ರ ಸಂಘಟನೆಗಳು ಹಾಕಿಕೊಂಡಿವೆ ಎಂಬ ಕಳವಳಕಾರಿ ಅಂಶವನ್ನು ಗುಪ್ತಚರ ಇಲಾಖೆ ಬಹಿರಂಗಗೊಳಿಸಿದೆ.

Advertisement

ಯಹೂದಿಗಳ ಸಂಖ್ಯೆ ಅಧಿಕವಿರುವ ರಾಜ್ಯಗಳಿಗೆ ಈ ಕುರಿತಾಗಿ ಎಚ್ಚರಿಕೆಯನ್ನು ನೀಡಲಾಗಿದೆ ಎಂದು ಗುಪ್ತಚರ ಇಲಾಖೆಯ ಉನ್ನತ ಮೂಲಗಳು ಮಾಹಿತಿ ನೀಡಿವೆ. ಸೆಪ್ಟಂಬರ್ ಮತ್ತು ಅಕ್ಟೋಬರ್ ತಿಂಗಳುಗಳಲ್ಲಿ ಯಹೂದಿಗಳ ಮೂರು ಪ್ರಮುಖ ರಜಾದಿನಗಳು ಬರುತ್ತವೆ. ಇದರಲ್ಲಿ ಯಹೂದಿಗಳ ಹೊಸ ವರ್ಷ ಸೆಪ್ಟಂಬರ್ 29 ಮತ್ತು ಅಕ್ಟೋಬರ್ 01ರಂದು ಬಂದರೆ, ಅಕ್ಟೋಬರ್ 8 ಮತ್ತು 9ರಂದು ಜುಡಾಯಿಸಂನ ಪವಿತ್ರ ದಿನಗಳಾಗಿರುತ್ತವೆ. ಹಾಗೆಯೇ ಅಕ್ಟೋಬರ್ 13 ಮತ್ತು 22ರಂದು ಸುಕ್ಕೊಟ್ ಅಥವಾ ಸಮ್ಮಿಲನ ಆಚರಣೆ ನಡೆಯುತ್ತದೆ.

ಈ ಭಯೋತ್ಪಾದನಾ ಸಂಘಟನೆಗಳು ಭಾರತದಲ್ಲಿರುವ ಇಸ್ರೇಲಿ ರಾಯಭಾರಿ ಕಛೇರಿಯ ಮೇಲೆ ದಾಳಿ ಮಾಡುವ ಯೋಜನೆಯನ್ನು ಹಾಕಿಕೊಂಡಿವೆ ಎಂದು ಬೇರೆ ದೇಶಗಳ ಪತ್ತೆದಾರಿ ಏಜೆನ್ಸಿಗಳಿಂದ ಪಡೆದುಕೊಂಡ ಮಾಹಿತಿಗಳ ಆಧಾರದಲ್ಲಿ ಗುಪ್ತಚರ ಅಧಿಕಾರಿಗಳಿಗೆ ಮಾಹಿತಿ ಲಭ್ಯವಾಗಿದೆ ಎಂದು ಸುದ್ದಿಮೂಲಗಳಿಂದ ತಿಳಿದುಬಂದಿದೆ. ಇಸ್ರೇಲಿ ಸಮುದಾಯ ಹೆಚ್ಚಾಗಿರುವ ಪ್ರದೇಶಗಳಲ್ಲಿರುವ ಶಾಲೆಗಳು ಮತ್ತು ಹೊಟೇಲ್ ಗಳೂ ಸಹ ಉಗ್ರಹ ಸಂಭಾವ್ಯ ದಾಳಿಯ ಗುರಿಗಳಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ.

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ ಭಾರತದ ನಿರ್ಧಾರವನ್ನು ಮಿತ್ರರಾಷ್ಟ್ರ ಇಸ್ರೇಲ್ ಬೆಂಬಲಿಸಿರುವುದರಿಂದ ಈ ಭಯೋತ್ಪಾದನಾ ಸಂಘಟನೆಗಳು ಆ ದೇಶದ ಮೇಲೆ ಗರಂ ಆಗಿವೆ ಹಾಗಾಗಿ ಭಾರತದಲ್ಲಿರುವ ಇಸ್ರೇಲಿ ಪ್ರಜೆಗಳನ್ನು ಗುರಿಯಾಗಿಸಿ ದಾಳಿ ನಡೆಸಲು ಈ ಉಗ್ರ ಸಂಘಟನೆಗಳು ಯೋಜಿಸುತ್ತಿವೆ ಎನ್ನಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next