ಮುಂಬೈ: ಪಾಕಿಸ್ತಾನದಲ್ಲಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂ ದೇಶಕ್ಕೆ 4 ವರ್ಷಗಳ ಅವಧಿಯಲ್ಲಿ ಅಪರಾಧ ಕೃತ್ಯಗಳಿಗೆ ನೆರವಾಗುವ ನಿಟ್ಟಿನಲ್ಲಿ 12ರಿಂದ 13 ಕೋಟಿ ರೂ.ಗಳ ವರೆಗೆ ವಿತ್ತೀಯ ನೆರವು ನೀಡಿದ್ದಾನೆ. ಅದಕ್ಕಾಗಿ ಆತ ಹವಾಲಾ ಜಾಲವನ್ನು ಬಳಸಿಕೊಂಡಿದ್ದಾನೆ ಎಂದು ದಾವೂದ್, ಸಹಚರರ ವಿರುದ್ಧ ಎನ್‌ಐಎ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಹಣ ವರ್ಗಾವಣೆಗೆ ದಾವೂದ್ ಛೋಟಾ ಶಕೀಲ್‌ನ ಬೆಂಬಲವನ್ನೂ ಪಡೆದುಕೊಂಡಿದ್ದ ಎಂದು ಸೂರತ್ ಮೂಲದ ಹವಾಲಾ ಡೀಲರ್ ಎನ್‌ಐಎಗೆ ತಿಳಿಸಿದ್ದಾನೆ.
ಪ್ರಕರಣದ ತನಿಖೆ ನಡೆಸುತ್ತಿರುವ ಎನ್‌ಐಎ ಛೋಟಾ ಶಕೀಲ್ ವಿರುದ್ಧ ಒಟ್ಟು 107 ಆರೋಪಗಳನ್ನು ಮಾಡಿದೆ. ದಾವೂದ್ ವಿರುದ್ಧ 1993ರ ಮುಂಬೈ ಸ್ಫೋಟದ ಪ್ರಧಾನ ರೂವಾರಿಯ ಆರೋಪ ಮಾತ್ರವಲ್ಲದೆ, ಸುಲಿಗೆ ಆರೋಪಗಳನ್ನೂ ಮಾಡಿದೆ.
ಆರೋಪಪಟ್ಟಿಯಲ್ಲಿ ದಾವೂದ್, ಛೋಟಾ ಶಕೀಲ್, ಆತನ ಭಾವ ಮೊಹಮ್ಮದ್ ಸಲೀಂ ಖುರೇಷಿ ಹೆಸರುಗಳೂ ಇವೆ. ಸದ್ಯ ಬಂಧಿತನಾಗಿರುವ ಆರಿಫ್ ಶೇಖ್ ಧ್ವನಿಯನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿ ಅದನ್ನು ಶಬೀರ್ ವಾಟ್ಸ್‌ಆ್ಯಪ್‌ಗೆ ಕಳುಹಿಸುತ್ತಿದ್ದ. ಈ ಮೂಲಕ ಸುರಕ್ಷಿತವಾಗಿ ಮಾಹಿತಿ ವರ್ಗಾವಣೆ ಮಾಡುತ್ತಿದ್ದರು. ಈ ಮೂಲಕ ದಾವೂದ್‌ಗೆ ಸಂದೇಶ ಸಿಗುವಂತೆ ಮಾಡುತ್ತಿದ್ದರು. ಅವರ ಮೊಬೈಲ್ ಅನ್ನು ವಿಧಿ ವಿಜ್ಞಾನ ಪರೀಕ್ಷೆಗೆ ಒಳಪಡಿಸಿದಾಗ ಈ ಅಂಶ ದೃಢಪಟ್ಟಿದೆ.
ಹಲವು ಕೃತ್ಯಗಳು:
ಪಾಕಿಸ್ತಾನದಿಂದ 25 ಲಕ್ಷ ರೂ.ಗಳನ್ನು ದೇಶದಲ್ಲಿ ಉಗ್ರ ಚಟುವಟಿಕೆಗಳಿಗಾಗಿ ಕಳುಹಿಸಲಾಗಿತ್ತು. ಈ ಪೈಕಿ 5 ಲಕ್ಷ ರೂ.ಗಳನ್ನು ಶಬ್ಬೀರ್ ಶೇಖ್ ಇರಿಸಿಕೊಂಡಿದ್ದ. ಉಳಿದ ಮೊತ್ತವನ್ನು ಆರಿಫ್ ಶೇಖ್‌ಗೆ ಅಪರಾಧ ಕೃತ್ಯಗಳಿಗೆಂದು ನೀಡಿದ್ದ ಎಂದು ಎನ್‌ಐಎ ಆರೋಪಪಟ್ಟಿಯಲ್ಲಿ ಹೇಳಿದೆ. ಉಗ್ರ ಕೃತ್ಯಗಳಿಗೆ ಸಂಬಂಧಿಸಿದಂತೆ ಸಲೀಂ ಫ್ರುಟ್, ಆರಿಫ್ ಶೇಖ್ ಮತ್ತು ಶಬ್ಬೀರ್ ಶೇಖ್ ಎಂಬವರನ್ನು ಈಗಾಗಲೇ ಬಂಧಿಸಲಾಗಿದೆ.
ದೇಶದ ಹೊರಭಾಗಕ್ಕೆ ಕೂಡ ಛೋಟಾ ಶಕೀಲ್‌ಗೆ ಸಂದಾಯವಾಗುವಂತೆ 16 ಕೋಟಿ ರೂ. ಪಾವತಿ ಮಾಡಲಾಗಿದೆ. ಅದನ್ನು ಆರಿಫ್ ಮತ್ತು ಶಬ್ಬೀರ್ ಎಂಬುವರು ನಡೆಸಿದ್ದಾರೆ ಎಂದು ಎನ್‌ಐಎ ಹೇಳಿದೆ.