Advertisement

ಟೆರರಿಸ್ಟ್‌ಗೆ ರಕ್ಷಿತ್‌-ಪುಷ್ಕರ್‌ ಬೆಂಬಲ

06:00 AM Sep 07, 2018 | Team Udayavani |

ರಾಗಿಣಿ ಅಭಿನಯದ “ದಿ ಟೆರರಿಸ್ಟ್‌’ ಚಿತ್ರ ಈಗ ಮತ್ತೆ ಸುದ್ದಿಯಾಗಿದೆ. ಅಂಬರೀಶ್‌ ಅವರು ಫ‌ಸ್ಟ್‌ ಲುಕ್‌ ಬಿಡುಗಡೆ ಮಾಡಿದ್ದರು. ಆ ಮೂಲಕ ಒಂದಷ್ಟು ಕುತೂಹಲಕ್ಕೆ ಕಾರಣವಾಗಿದ್ದ ಈ ಚಿತ್ರ, ಈಗ ರಕ್ಷಿತ್‌ ಶೆಟ್ಟಿ ಮೂಲಕ ಟ್ರೇಲರ್‌ ಬಿಡುಗಡೆಯಾಗಿ ಇನ್ನೊಂದು ಸುದ್ದಿಯಾಗಿದೆ. ಸದಾ ಹೊಸತನದ ಚಿತ್ರಗಳಿಗೆ ಪ್ರೋತ್ಸಾಹ ನೀಡುತ್ತ ಬಂದಿರುವ ರಕ್ಷಿತ್‌ ಶೆಟ್ಟಿ ಮತ್ತು ಪುಷ್ಕರ್‌ ಮಲ್ಲಿಕಾರ್ಜುನ್‌ ಅಂದು “ದಿ ಟೆರರಿಸ್ಟ್‌’ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಿ ಶುಭಕೋರಿದರು. 

Advertisement

ನಿರ್ದೇಶಕ ಪಿ.ಸಿ. ಶೇಖರ್‌ ಹೇಳುವಂತೆ, “ನನ್ನ ಸಿನಿಮಾ ಕೆರಿಯರ್‌ನಲ್ಲೇ “ದಿ ಟೆರರಿಸ್ಟ್‌’ ತುಂಬ ಕಷ್ಟದ ಚಿತ್ರವಾಗಿದೆ. ಭಯೋತ್ಪಾದನೆಗೆ ಸಂಬಂಧಿಸಿದ ಚಿತ್ರ ಮಾಡುವುದು ಸುಲಭವಲ್ಲ. ಅದಕ್ಕೆ ತಕ್ಕ ಕಥೆ, ಚಿತ್ರಕಥೆ, ಪಾತ್ರಗಳು, ಆಯಾ ಜಾಗಗಳು ಮುಖ್ಯ. ಇಲ್ಲಿ ಮುಖ್ಯವಾಗಿ, ಲೊಕೇಷನ್‌ ಹೈಲೆಟ್‌. ಬೆಂಗಳೂರಿನ ಗಲ್ಲಿಗಲ್ಲಿಯಲ್ಲೂ ಕ್ಯಾಮೆರಾಗಳನ್ನು ಇಟ್ಟು ಚಿತ್ರಿಸಲಾಗಿದೆ. ಇದೊಂದು ಅಂತಾರಾಷ್ಟ್ರೀಯ ಮಟ್ಟದ ವಿಷಯ ಹೊಂದಿರುವುದರಿಂದ ಚಿತ್ರರಂಗದಲ್ಲೊಂದು ಹೊಸತನದ ಚಿತ್ರ ಎಂದು ಹೇಳಬಹುದು. ಅತೀ ಸೂಕ್ಷ್ಮ ವಿಚಾರಗಳು ಇಲ್ಲಿವೆ. ಯಾವುದೇ ಒಂದು ಧರ್ಮ, ಜಾತಿ ಕುರಿತ ಚಿತ್ರವಲ್ಲ. ಇಡೀ ಸಿನಿಮಾ ಸಮಾಜದ ಕಳಕಳಿ ಹೊಂದಿದೆ’ ಎಂಬುದು ನಿರ್ದೇಶಕರ ಹೇಳಿಕೆ. ಟ್ರೇಲರ್‌ ಬಿಡುಗಡೆ ಮಾಡಿದ ರಕ್ಷಿತ್‌ ಶೆಟ್ಟಿ ಅವರಿಗೆ ಪಿ.ಸಿ.ಶೇಖರ್‌ ನಿರ್ದೇಶಿಸಿದ್ದ “ರಾಗ’ ತುಂಬಾನೇ ಇಷ್ಟವಾದ ಚಿತ್ರವಂತೆ. “ಅವರ ಪ್ರತಿ ಚಿತ್ರವೂ ಹೊಸ ಜಾನರ್‌ನಲ್ಲಿವೆ. ಈ ಚಿತ್ರ ಕೂಡ ಹೊಸ ವಿಷಯ ಹೊಂದಿದೆ. ಹೊಸದೇನನ್ನೋ ಕೊಡಲು ಅವರು ಪ್ರಯತ್ನಿಸಿದ್ದಾರೆ. ಇಂತಹ ಪ್ರತಿಭಾವಂತ ತಂಡಕ್ಕೆ ಎಲ್ಲರ
ಪ್ರೋತ್ಸಾಹ ಅಗತ್ಯ. ನಿರ್ದೇಶಕರು ಗ್ಯಾಪ್‌ ಕೊಡದೆ, ಒಂದೊಂದೇ ಚಿತ್ರ ಮಾಡುವ ಮೂಲಕ ಕನ್ನಡಕ್ಕೆ ಹೊಸ ಬಗೆಯ ಚಿತ್ರ ಕೊಡಲಿ’ ಎಂದರು ರಕ್ಷಿತ್‌ ಶೆಟ್ಟಿ. 

ಪುಷ್ಕರ್‌ ಮಲ್ಲಿಕಾರ್ಜುನ್‌ ಚಿತ್ರದ ಟ್ರೇಲರ್‌ ನೋಡಿ, ಬಾಲಿವುಡ್‌ ಸಿನಿಮಾದ ಛಾಯೆ ಕಾಣುತ್ತೆ ಅಂದರು. ನಾಯಕಿ ರಾಗಿಣಿಗೆ ಇದೊಂದು ಹೊಸ ಬಗೆಯ ಚಿತ್ರವಂತೆ. ಒನ್‌ಲೈನ್‌ ಸ್ಟೋರಿ ಕೇಳಿಯೇ ರಾಗಿಣಿ ಚಿತ್ರ ಒಪ್ಪಿದರಂತೆ. “ನನ್ನ ಕೆರಿಯರ್‌ನಲ್ಲೂ “ದಿ ಟೆರರಿಸ್ಟ್‌’ ಹೊಸ ಅನುಭವದ ಚಿತ್ರವಾಗಲಿದೆ. ಟೆರರಿಸ್ಟ್‌ ಎಂಬ ಹೆಸರಿದ್ದರೂ ಇದೊಂದು ಪವರ್‌ ಚಿತ್ರ’ ಎಂಬುದು ರಾಗಿಣಿ ಮಾತು. ಅನಿವಾಸಿ ಭಾರತೀಯರಾದ
ನಿರ್ಮಾಪಕ ಅಲಂಕಾರ್‌ ಸಂತಾನಂ ಈ ಚಿತ್ರವನ್ನು ನಿರ್ಮಿಸಿದ್ದು, ವಿದೇಶದಲ್ಲೂ ಚಿತ್ರ ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿರುವುದಾಗಿ ಹೇಳಿಕೊಂಡರು. ಸಂಗೀತ ನಿರ್ದೇಶಕ ಪ್ರದೀಪ್‌ ವರ್ಮ, ಚಿತ್ರಕ್ಕೆ ಸಂಗೀತ ನೀಡಲು ದೊರೆತ ಅವಕಾಶ ಕುರಿತು ಹೇಳಿಕೊಂಡರು. ಚಿತ್ರಕ್ಕೆ
ಮುರಳಿ ಕೃಷ್ಣ ಛಾಯಾಗ್ರಹಣವಿದೆ.

Advertisement

Udayavani is now on Telegram. Click here to join our channel and stay updated with the latest news.

Next