Advertisement

ಟೆರ್ರಾಕೋಟಾ ಆಭರಣಗಳು

06:00 AM Apr 13, 2018 | |

ಮೂರ್ತಿಗಳನ್ನು ಮಾಡಲು ಮತ್ತು ಕಟ್ಟಡಗಳನ್ನು ಬಿರುಸುಗೊಳಿಸಲು ಬಳಸುವ ಮಣ್ಣೇ ಟೆರ್ರಾಕೋಟ್ ಮಣ್ಣು. ಇದು ಸಾದಾ ಮಣ್ಣಿನಿಂದಲೇ ತಯಾರಿಸುವಂತಹ ಮಣ್ಣಿನ ಬಗೆಯಾಗಿದ್ದು ಸುಟ್ಟಮಣ್ಣು ಎಂದೂ ಕರೆಯಲಾಗುವ ಈ ಬಗೆಯ ಮಣ್ಣು ಪುರಾತನ ಕಾಲದಲ್ಲಿ ಮೂರ್ತಿಗಳನ್ನು ಮತ್ತು ಕಟ್ಟಡಗಳನ್ನು ಅಲಂಕರಿಸಲು ಮಾಡುತ್ತಿದ್ದ ಕಲಾಕೃತಿಗಳಲ್ಲಿ ಬಳಸಲಾಗುತ್ತಿತ್ತು. ಮುಖ್ಯವಾಗಿ ಕರಕುಶಲ ವಸ್ತುಗಳು, ಅಲಂಕಾರಿಕ ವಸ್ತುಗಳನ್ನು ತಯಾರಿಸಲು ಬಳಸುವ ಈ ಬಗೆಯ ಮಣ್ಣುಗಳ ಬಹೂಪಯೋಗಿ ಗುಣವು ಇಂದು ಫ್ಯಾಷನ್‌ ಲೋಕಕ್ಕೂ ವಿಸ್ತೃತಗೊಂಡಿದೆ. ಫ್ಯಾಷನ್‌ ಲೋಕದಲ್ಲಿ ಇಂದು ಟೆರ್ರಾಕೋಟ ಆಭರಣಗಳ ಹವಾ ಹೆಚ್ಚಾಗಿದೆ ಎನ್ನಬಹುದಾಗಿದೆ. ಈ ಬಗೆಯ ಮಣ್ಣನ್ನು ಹಿಂದಿನಿಂದಲೇ ಮೆಹೆಂಜೋದಾರೊ ನಾಗರಿಕತೆಯ ಕಾಲದಿಂದಲೇ ಕರಕುಶಲಕಾರರಿಂದ ಮತ್ತು ಕುಂಬಾರರಿಂದ ಬಳಸಲ್ಪಡುತ್ತಿತ್ತು ಎನ್ನಲಾಗಿದೆ. ಶಿಲ್ಪಗಳನ್ನು, ಕಲಾಕೃತಿಗಳನ್ನು ತಯಾರಿಸುವುದರೊಂದಿಗೆ ಸುಂದರವಾದ ಮತ್ತು ಮನಮೋಹಕವಾದ ವಿವಿಧ ಬಗೆಯ ಆಭರಣಗಳನ್ನೂ ತಯಾರಿಸಬಹುದೆಂಬುದು ನಮ್ಮ ಕರಕುಶಲತೆಗೆ ಮತ್ತು ಸೃಜನಶೀಲತೆಗೆ ಹಿಡಿದ ಕೈಗನ್ನಡಿಯಾಗಿದೆ. ಭಾರತೀಯರ ಅದ್ಭುತವಾದ ಕರಕುಶಲತೆಗೆ ಹಿಡಿದ ಕೈಗನ್ನಡಿಯಂತಿರುವ ಈ ಕಲೆಯು ಸೃಜನಶೀಲತೆಯನ್ನು ಬಳಸಿ ಕನಿಷ್ಟ ತರಬೇತಿ ಯನ್ನು ಪಡೆದುಕೊಂಡು ಕೂಡ  ಸಾಮಾನ್ಯದವರೂ ತಯಾರಿಸು ವಂತಹದಾಗಿದೆ.

Advertisement

ಬೇಕಾಗುವ ಸಾಮಗ್ರಿಗಳು: ಟೆರ್ರಾಕೋಟ ಮಣ್ಣು, ಆಭರಣಗಳನ್ನು ಮಾಡಲು ಅಗತ್ಯವೆನಿಸಿದ ಉಪಕರಣಗಳು, ಮೌಲುxಗಳು, ಪೈಂಟುಗಳು, ಅಲಂಕಾರಕ್ಕಾಗಿ ಬಳಸುವ ವಿವಿಧ ಬಗೆಯ ಬೀಡುಗಳು, ಲೇಸುಗಳು, ಸ್ಟೋನುಗಳು, ಚೈನುಗಳು, ಹುಕ್ಕುಗಳು, ಐ ಪಿನ್‌, ಜಂಪ್‌ ರಿಂಗುಗಳು, ಹೂಪ್‌ ರಿಂಗುಗಳು, ಸ್ಟಾಪರ್‌ ಮತ್ತು  ಪ್ಲೇಯರ್‌ ಇತ್ಯಾದಿ ಸುಲಭವಾಗಿ ಲಭಿಸುವ ಉಪಕರಣಗಳನ್ನು ಬಳಸಿ ಅಂದವಾದ ಮತ್ತು ಬಗೆ ಬಗೆಯ ಆಭರಣಗಳನ್ನು ತಯಾರಿಸಲಾಗುತ್ತದೆ. ಇಂದು ಮಾರುಕಟ್ಟೆಯಲ್ಲಿ ಈ ಮೇಲಿನ ಎಲ್ಲಾ ವಸ್ತುಗಳು ಆರ್ಟ್‌ ಮತ್ತು ಕ್ರಾಫ್ಟ್ ರಾ-ಮೆಟೀರಿಯಲ್ ಮಳಿಗೆಗಳಲ್ಲಿ ಸುಲಭವಾಗಿ ದೊರೆಯುವುದರಿಂದ ತಯಾರಿಕೆ ಸುಲಭವೆನ್ನಬಹುದು.

ಆಭರಣಗಳನ್ನು ಮಾಡುವ ವಿಧಾನ: ಹಸಿ ಮಣ್ಣಿಗೆ ಯಾವ ರೂಪವನ್ನು ಕೊಟ್ಟರೂ ಅದು ತೆಗೆದುಕೊಳ್ಳುವುದರಿಂದ ಕೆಲವು ಸುಲಭ ಉಪಕರಣಗಳನ್ನು ಬಳಸಿ ಬೇಕಾದ ಆಕಾರಕ್ಕೆ ಮತ್ತು ಡಿಸೈನುಗಳನ್ನು ಮಾಡಿಕೊಂಡು ನಂತರ ಕುಲುಮೆಯಲ್ಲಿ ಸುಡಬೇಕಾಗುತ್ತದೆ. ಈ ರೀತಿ ಸುಡುವುದರಿಂದ ಆಭರಣಗಳು ಕಠೊರ ಮತ್ತು ಉತ್ತಮ ಬಾಳಿಕೆ ಬರುವಂತಾಗುತ್ತದೆ. ನಂತರ ಸ್ಯಾಂಡ್‌ ಪೇಪರಿನಿಂದ ಅದನ್ನು ಪಾಲಿಶ್‌ ಮಾಡಿ ನಂತರ ನಮಗೆ ಬೇಕಾದ ಮತ್ತು ಸೂಕ್ತ ಬಣ್ಣಗಳನ್ನು ಕೊಡಬಹುದು. ಆಭರಣಗಳಿಗೆ ಅಗತ್ಯವಿರುವ ರಂಧ್ರಗಳನ್ನು ಮಣ್ಣು ಹಸಿಯಿರುವಾಗಲೇ ಮಾಡಿಕೊಂಡು ನಂತರ ಕುಲುಮೆಯಲ್ಲಿ ಸುಟ್ಟ ನಂತರ ಬೇಕಾದಂತಹ ಬೀಡುಗಳನ್ನು ಸೇರಿಸಿಕೊಳ್ಳಬಹುದು. ಅಷ್ಟೇ ಅಲ್ಲದೆ ಹೊಳೆಯುವ ಲುಕ್ಕನ್ನು ನೀಡಲು ಮತ್ತು ಧೂಳಿನಿಂದ ಆಭರಣಗಳು ಕಳೆಗುಂದದಂತೆ ನೋಡಿಕೊಳ್ಳುವ ಸಲುವಾಗಿ ಅವುಗಳ ಮೇಲ್ಮೆ„ಗೆ ವಾರ್ನಿಶ್‌ ಕೋಟನ್ನು ಕೊಡಲಾಗುತ್ತದೆ. 

ಆಭರಣಗಳ ಬಗೆಗಳು: ಬೇರೆ ಆಭರಣಗಳಂತೆಯೇ ಟೆರ್ರಾಕೋಟ ಆಭರಣಗಳು ಹಲವು ಬಗೆಗಳಲ್ಲಿ ದೊರೆಯುತ್ತವೆ.
 
1 ಕಿವಿಯಾಭರಣಗಳು: ಚಿನ್ನವನ್ನೂ ನಾಚಿಸುವಂತಹ ಟೆರ್ರಾಕೋಟ ಕಿವಿಯಾಭರಣಗಳು ಇಂದು ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಒಂದಕ್ಕಿಂತ ಒಂದು ಭಿನ್ನವೆನಿಸುವ ಡಿಸೈನುಗಳ ಝುಮ್ಕಾಗಳಂತೂ ಹಾಟ್ ಟ್ರೆಂಡ್‌ ಎನಿಸಿವೆ. ಆಂಟಿಕ್‌ ಲುಕ್ಕನ್ನು ಕೊಡುವ ಝುಮ್ಕಾಗಳು, ಟೆರ್ರಾಕೋಟ ಬೀಡುಗಳಿಂದ  ಸುಂದರವಾಗಿ ಅಲಂಕೃತಗೊಂಡ ಹೂಪ್‌ ರಿಂಗುಗಳು, ವಿವಿಧ ಆಕೃತಿಯ ಸ್ಟಡುಗಳು (ಬೆಂಡೋಲೆಗಳು), ಮಾಡರ್ನ್ ದಿರಿಸುಗಳಿಗೂ ಒಪ್ಪುವಂತಹ ಹ್ಯಾಂಗಿಂಗುಗಳು, ಟ್ರೈಬಲ್ ಡಿಸೈನಿನ ಕಿವಿಯಾಭರಣಗಳು ಹೀಗೆ ಹತ್ತು ಹಲವು ಮಾದರಿಗಳಲ್ಲಿ ದೊರೆಯುತ್ತವೆ. ಎಲ್ಲಾ ವಯೋಮಾನದವರೂ ಧರಿಸಬಹುದಾದ ಈ ಆಭರಣಗಳು ಬೆಲೆಯಲ್ಲಿಯೂ ಕೂಡ ಅನುಕೂಲಕರವಾಗಿರುವ ಆಭರಣಗಳು.
 
1 ಕುತ್ತಿಗೆಗೆ ಧರಿಸುವ ಆಭರಣಗಳು: ಬೆಲೆಬಾಳುವ ಎಲ್ಲಾ ಆಭರಣಗಳನ್ನೂ ನಾಚಿಸುವಂತಹ ಟೆರ್ರಾಕೋಟ ಆಭರಣಗಳು ಕುತ್ತಿಗೆಗೆ ಧರಿಸುವ ಆಭರಣಗಳ ಮಾದರಿಯಲ್ಲಿಯೂ ದೊರೆಯುತ್ತವೆ. ವೈವಿಧ್ಯಮಯವಾದ ಡಿಸೈನುಗಳಲ್ಲಿ ದೊರೆಯುವ ಕಂಠಾಭರಣಗಳು ಹೆಂಗಳೆಯರ ಅಚ್ಚುಮೆಚ್ಚಿನ ಆಭರಣಗಳೆನಿಸಿವೆ. ಇವುಗಳಲ್ಲಿ ಹಲವಾರು ಬಗೆಯ  ಡಿಸೈನುಗಳ ನೆಕ್ಲೇಸುಗಳು, ಪೆಂಡೆಂಟ್ ಸೆಟ್ಟುಗಳು, ಲಾಂಗ್‌ ಚೈನ್‌ ಪೆಂಡೆಂಟ್ ಸೆಟ್ಟುಗಳು ದೊರೆಯುತ್ತವೆ. ಅಲ್ಲದೆ ಆಂಟಿಕ್‌ ಮಾದರಿಯ ನೆಕ್ಲೇಸುಗಳು  ಕಾಟನ್‌ ಸೀರೆಗಳೊಂದಿಗೆ ಬಹಳ ಚೆನ್ನಾಗಿ ಒಪ್ಪುತ್ತವೆ. ವಿವಿಧ ಆಕೃತಿಗಳ ಮತ್ತು ವಿವಿಧ ಬಣ್ಣಗಳಲ್ಲಿ ತಯಾರಾಗುವ ಟೆರ್ರಾಕೋಟ ಬೀಡುಗಳು ಆಭರಣಗಳನ್ನು ಗ್ರ್ಯಾಂಡ್‌ ಮತ್ತು ಎಲಿಗ್ಯಾಂಟ್ ಆಗಿ ಪರಿವರ್ತಿಸುತ್ತವೆ.

3 ಕೈಗೆ ಧರಿಸುವ ಆಭರಣಗಳು: ಇವುಗಳಿಂದ ತಯಾರಾಗುವ ಉಂಗುರುಗಳು ಬಹಳ ಸುಂದರವಾಗಿರುತ್ತವೆ. ದೊಡ್ಡ ಗಾತ್ರದ ಪೆಂಡೆಂಟಿನಂತಿರುವ ಉಂಗುರಗಳು ನೆಕ್ಲೇಸ್‌-ಕಿವಿಯೋಲೆಗಳೊಂದಿಗೆ ಸೆಟ್ನಲ್ಲಿ ದೊರೆಯುತ್ತವೆ.
 
4 ಕಾಲಿನ ಆಭರಣಗಳು: ಸುಂದರವಾದ ಟೆರ್ರಾಕೋಟ ಬೀಡುಗಳಿಂದ ತಯಾರಿಸಲ್ಪಟ್ಟ ಆಂಕ್ಲೆಟ್ಟುಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಬೆಳ್ಳಿಯ ಗೆಜ್ಜೆಗಳಂತೆ ಇವುಗಳನ್ನೂ ಕೂಡ ಹಲವು ಸಂದರ್ಭಗಳಲ್ಲಿ ಧರಿಸಬಹುದಾಗಿದೆ. ಕೇವಲ ಆಂಕ್ಲೆಟ್ಟುಗಳಷ್ಟೇ ಅಲ್ಲದೆ ಬೇರೆ ಬಗೆಯ ಫ‌ೂಟ್ ಆಭರಣಗಳೂ (ಸ್ಲೇವ್‌ ಆಭರಣಗಳು) ಟೆರ್ರಾಕೋಟಾ ಆಭರಣಗಳ ಬಗೆಯಲ್ಲಿ ದೊರೆಯುತ್ತವೆ. 

Advertisement

ಯಾವ ದಿರಿಸಿನೊಂದಿಗೆ ಸೂಕ್ತ?
ಟ್ರೆಡಿಶನಲ್ ಮತ್ತು ಮಾಡರ್ನ್, ಫ್ಯೂಷನ್‌ ಮೂರು ಬಗೆಗಳ ಆಭರಣಗಳೂ ದೊರೆಯುವುದರಿಂದ ಸೀರೆಗಳಿಗೆ ಅದರಲ್ಲಿಯೂ ಕಾಟನ್‌ ಸೀರೆಗಳಿಗೆ, ಲೆಹೆಂಗಾಗಳಿಗೆ, ಲಾಂಗ್‌ ಸ್ಕರ್ಟ್‌ ಮತ್ತು ಕ್ರಾಪ್‌ ಟಾಪುಗಳಿಗೆ ಬಹಳ ಚೆನ್ನಾಗಿ ಒಪ್ಪುತ್ತವೆ. ಅಷ್ಟೇ ಅಲ್ಲದೆ ಕುರ್ತಾಗಳು ಮತ್ತು ಅನಾರ್ಕಲಿ ಕುರ್ತಾಗಳೊಂದಿಗೂ ಒಪ್ಪುತ್ತವೆ. 

ನಿರ್ವಹಣೆ ಹೇಗೆ?
ಕುಲಮೆಯಲ್ಲಿ ಸುಡಲ್ಪಟ್ಟಿದ್ದರೂ ಕೂಡ ಮಣ್ಣಿನ ವಸ್ತುಗಳಾದ್ದರಿಂದ ಸೂಕ್ಷ್ಮತೆಯಿಂದ ಬಳಸಬೇಕಾಗುತ್ತದೆ. ಮಕ್ಕಳಿಗೆ ಅಷ್ಟೊಂದು ಸೂಕ್ತವಲ್ಲದ ಇವುಗಳು ಮಹಿಳೆಯರಿಗೆ ಮಾತ್ರ ಸೂಕ್ತವೆನಿಸುವಂತಹ ಆಭರಣಗಳಾಗಿವೆ. ಸೂಕ್ತ ನಿರ್ವಹಣೆಯ ಆವಶ್ಯಕತೆಯಿರುತ್ತದೆ. ಈ ಆಭರಣಗಳನ್ನು ಜೋಡಿಸಿಡುವಾಗ ಅವುಗಳಿಗೆ ಯಾವುದೇ ಹಾನಿಯಾಗದಂತೆ ಗಮನಹರಿಸುವುದು ಅತ್ಯಂತ ಆವಶ್ಯವಾದುದಾಗಿದೆ. ಇವುಗಳಿಗೆ ಬಣ್ಣ ಬಳಿದಿರುವುದರಿಂದಾಗಿ ನೀರಿನಿಂದ ಸ್ವತ್ಛಗೊಳಿಸುವುದು ಸೂಕ್ತವಲ್ಲ. ಬದಲಾಗಿ ಒದ್ದೆ ಬಟ್ಟೆಯನ್ನು ಬಳಸಿ ಇವುಗಳನ್ನು ಸ್ವತ್ಛಗೊಳಿಸಬೇಕಾಗುತ್ತದೆ.

ಮೇಲಿನ ಎಲ್ಲಾ ಆಭರಣಗಳಷ್ಟೇ ಅಲ್ಲದೆ ಇವುಗಳಿಂದ ಹಲವಾರು ಸುಂದರವಾದ ಕಲಾಕೃತಿಗಳನ್ನೂ ಕೂಡ ತಯಾರಿಸಲಾ ಗುತ್ತದೆ. ಈ ಎಲ್ಲಾ ಆಭರಣಗಳ ಬಳಕೆಯಿಂದ  ಗುಡಿಕೈಗಾರಿಕೆಯ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಅಲ್ಲದೆ ಈವುಗಳು ಮಣ್ಣಿನಿಂದ ತಯಾರಿಸಲ್ಪಟ್ಟಿರುವುದರಿಂದ ಚರ್ಮಕ್ಕೆ ಯಾವುದೇ ಹಾನಿಯನ್ನುಂಟುಮಾಡುವುದಿಲ್ಲ. ನಿರ್ವಹಣೆ ಕಷ್ಟವೆನಿಸಿದರೂ ಬೆಲೆಯು ಕಡಿಮೆಯಾಗಿರುವುದರಿಂದ ಯಾರೂ ಕೂಡ ಖರೀದಿಸಿ ಬಳಸಬಹುದು. 

ಪ್ರಭಾ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next