ಬೆಂಗಳೂರು: ಸಾಫ್ಟ್ ವೇರ್ ಎಂಜಿನಿಯರ್ ಆಗಿ ಹತ್ತಾರು ಕನಸು ಕಟ್ಟಿಕೊಂಡಿದ್ದ ಮಹಿಳೆಗೆ ದಿಢೀರ್ ಉದ್ಯೋಗ ತ್ಯಜಿಸುವ ಪರಿಸ್ಥಿತಿ ಬಂದಿತು. ತಮ್ಮ 10 ವರ್ಷದ ಪುತ್ರ ಬುದ್ಧಿಮಾಂದ್ಯನಾಗಿದ್ದರಿಂದ ಆತನ ಆರೈಕೆಗಾಗಿ ವೃತ್ತಿಗೆ ವಿದಾಯ ಹೇಳಿದ್ದರಿಂದ ಮಾನಸಿಕ ಖಿನ್ನತೆ ಒಳಗಾಗಿದ್ದರು. ಖಿನ್ನತೆ, ವಿಪರೀತ ಒತ್ತಡದಿಂದ ಹೊರ ಬರಲು ಕಾರಣವಾಗಿದ್ದು ತಾರಸಿ ಕೈತೋಟ. ಒತ್ತಡ, ಮಾನಸಿಕ ಖನ್ನತೆಯಿಂದ ಹೊರಬರಲು ಟೆರೇಸ್ ಗಾರ್ಡನಿಂಗ್ ಕೂಡ ಒಂದು ರೀತಿಯಲ್ಲಿ “ಔಷಧ’ ಆಗಿರುವ ನಿದರ್ಶನಗಳು ಸಾಕಷ್ಟಿವೆ.
ಆಂಧ್ರಪ್ರದೇಶ ಮೂಲದ ಸುಷ್ಮಾ ರೆಡ್ಡಿ ಎಂಬುವವರು ಬೆಂಗಳೂರಿನ ಜೆ.ಪಿ.ನಗರದಲ್ಲಿ ನೆಲೆಸಿದ್ದು, ತಮ್ಮ ಮಾನಸಿಕ ಖಿನ್ನತೆಯನ್ನು ಹೋಗಲಾಡಿಸಲು ಪ್ರಾರಂಭಿಸಿದ ಈ ಛಾವಣಿ ಕೈತೋಟವು ಸಂಪೂರ್ಣವಾಗಿ ಯಶಸ್ವಿಯಾಗಿದ್ದು, ಇವರು ಬೆಳೆದಿರುವ ಹಣ್ಣು-ತರಕಾರಿಗಳನ್ನು ಮನೆಗೆ ಬಳಸುವ ಜತೆಗೆ ನೆರೆಹೊರೆಯವರಿಗೂ ಸದುಪಯೋಗವಾಗುತ್ತಿದೆ. ಸಾಫ್ಟ್ ವೇರ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸುಷ್ಮಾ ರೆಡ್ಡಿ(39), ತಮ್ಮ 10 ವರ್ಷದ ಪುತ್ರ ಎಡಿಎಚ್‌ಡಿ ಹಾಗೂ ಬುದ್ಧಮಾಂದ್ಯತೆಯಿಂದ ಬಳಲುತ್ತಿದ್ದರಿಂದ ಆತನ ಆರೈಕೆಗಾಗಿ ವೃತ್ತಿ ತ್ಯಜಿಸಿ, ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಗಿಡ-ಮರಗಳನ್ನು ಸಂರಕ್ಷಿಸುವಲ್ಲಿ ಆಸಕ್ತಿ ಹೊಂದಿದ್ದ ಇವರು, ವೈದ್ಯರ ಸಲಹೆ ಮೇರೆಗೆ ಹಾಗೂ ಅವರ ತಂದೆಯ ಪ್ರೇರಣೆಯೊಂದಿಗೆ 2019ರಲ್ಲಿ ಛಾವಣಿ ಕೈತೋಟವನ್ನು ಪ್ರಾರಂಭಿಸಿದರು. ಆರಂಭಿಸಿದ ಮೊದಲ ವರ್ಷ ಒಂದೂ ಬೆಳೆ ಬೆಳೆಯದೇ ವಿಫಲರಾದರು. ಆದರೂ ಛಲ ಬಿಡದೇ, ಯೂಟ್ಯೂಬ್ ಹಾಗೂ ಮತ್ತಿತರ ತಜ್ಞರ ಸಹಾಯದಿಂದಾಗಿ ಛಾವಣಿಯಲ್ಲಿ ಜಲನಿರೋಧಕ ಬಳಸುವ ಮೂಲಕ ಪುನಃ ತರಕಾರಿ-ಹಣ್ಣುಗಳ ಗಿಡಗಳನ್ನು 10 ರಿಂದ 12 ಇಂಚಿನ ಕುಂಡಗಳಲ್ಲಿ ನೆಟ್ಟು ಬೆಳೆಸಲಾರಂಭಿಸಿದರು.
ನಗರ-ಪ್ರದೇಶಗಳಲ್ಲಿನ ಕಡಿಮೆ ಸ್ಥಳದಲ್ಲಿ ಉತ್ತಮ ಆರೋಗ್ಯಕ್ಕೆ ಉಪಯುಕ್ತವಾಗಿರುವ ಡ್ರ್ಯಾಗನ್ ಹಣ್ಣು, ಲಕ್ಷ್ಮಣ ಫಲ, ಮೂಸಂಬಿ, ದಾಳಿಂಬೆ, ಕಿತ್ತಳೆ, ಸ್ಟಾಬೆರಿ, ಮಾವು, ಗೋಡಂಬಿ, ಸ್ಟಾರ್ ಫ್ರೂಟ್, ಅನಾನಸ್, ಪಪ್ಪಾಯ್, ಚೆರ್ರಿ, ನೋನಿ, ಅಂಜೂರ, ಸೀತಾಫಲ ಸೇರಿದಂತೆ ಒಟ್ಟು 60 ಹಣ್ಣಿನ ಗಿಡಗಳು, ಮೆಣಸು, ಟೊಮ್ಯಾಟೋ, ಬೀನ್ಸ್, ಈರುಳ್ಳಿ, ಬೆಳ್ಳುಳ್ಳಿ, ಹೀರೇಕಾಯಿ, ಶುಂಠಿ, ಕೋಸು ಹೀಗೆ ಅನೇಕ ಬಗೆಯ ತಾಜಾ ತರಕಾರಿಗಳನ್ನು ಬೆಳೆಸುವಲ್ಲಿ ಯಶಸ್ವಿಯಾಗಿದ್ದಾರೆ. ಇಷ್ಟೇ ಅಲ್ಲದೇ ಈ ಎಲ್ಲಾ ಬೆಳೆಗಳನ್ನು ಸಾವಯವ ಗೊಬ್ಬರದಿಂದ ಬೆಳೆಯುತ್ತಿದ್ದಾರೆ. ಇದರಿಂದಾಗಿ ನನಗೆ ಮಾನಸಿಕ ಖನ್ನತೆ ದೂರವಾಗಿ, ಹಚ್ಚ-ಹಸಿರಿನ ಗಿಡಗಳ ಮಧ್ಯೆ ಮಗನೊಂದಿಗೆ ಸಂತೋಷವಾಗಿ ಬದುಕು ಕಳೆಯುತ್ತಿದ್ದೇನೆ ಎನ್ನುತ್ತಾರೆ ಸುಷ್ಮಾ ರೆಡ್ಡಿ.
ವಿಡಿಯೋ ಮೂಲಕ ತರಬೇತಿ: ಸುಷ್ಮಾ ರೆಡ್ಡಿ ಅವರು ಟೆರಸ್ ಹಾಳಾಗದಂತೆ, 12ಗಿ12 ಇಂಚಿನ ಬ್ಯಾಗ್ ಗಳಿಂದ 24ಗಿ24 ಇಂಚಿನ ಬ್ಯಾಗ್‌ಗಳಲ್ಲಿ ಹೂ- ತರಕಾರಿ-ಹಣ್ಣುಗಳ ಬೀಜ ಹಾಕುವುದರಿಂದ ಹಿಡಿದು, ಅವು ಗಿಡವಾದ ನಂತರ ಕುಂಡಗಳಲ್ಲಿ ಎಷ್ಟು ಪ್ರಮಾಣದ ಮಣ್ಣು, ಗೊಬ್ಬರವನ್ನು ಹಾಕಿ ಬೆಳೆಸಬೇಕು, ಯಾವ ವಾತಾವರಣದಲ್ಲಿ ಎಷ್ಟು ನೀರನ್ನು ಹಾಕಬೇಕು ಹೀಗೆ ಕಡಿಮೆ ಸ್ಥಳದ ಟೆರೇಸ್‌ನಲ್ಲಿ ಗಿಡಗಳನ್ನು ಹೇಗೆ ಬೆಳೆಸುವುದು ಎಂಬುದನ್ನು ವಿಡಿಯೋಗಳ ಮೂಲಕ ತಿಳಿಸಿಕೊಡುತ್ತಾರೆ.
ತಾರಸಿ ಕೈತೋಟದಲ್ಲಿ ಏನೇನಿವೆ?: ತಾರಸಿ ಕೈತೋಟದಲ್ಲಿ ಲಕ್ಷ್ಮಣ ಫಲ, ಮೂಸಂಬಿ, ದಾಳಿಂಬೆ, ಕಿತ್ತಳೆ, ಡ್ರ್ಯಾಗನ್ ಹಣ್ಣು, ಸ್ಟಾಬೆರಿ, ಮಾವು, ಗೋಡಂಬಿ, ಸ್ಟಾರ್ ಫ್ರೂಟ್, ಅನಾನಸ್, ಅಂಜೂರ, ಸೀತಾಫಲ, ಪಪ್ಪಾಯ್, ಚೆರ್ರಿ, ನೋನಿ, ಸೇರಿದಂತೆ ಒಟ್ಟು 60 ಹಣ್ಣಿನ ಗಿಡಗಳಿವೆ. ಜೊತೆಗೆ ಮೆಣಸು, ಟೊಮ್ಯಾಟೋ, ಬೀನ್ಸ್, ಈರುಳ್ಳಿ, ಬೆಳ್ಳುಳ್ಳಿ, ಹೀರೇಕಾಯಿ, ಮೆಕ್ಕೆಜೋಳ, ಶುಂಠಿ, ಕೋಸು ಹೀಗೆ ಅನೇಕ ಬಗೆಯ ತರಕಾರಿ ಗಿಡಗಳನ್ನು ಬೆಳೆಸಿದ್ದಾರೆ. ಸಂಪೂರ್ಣ ಸಾವಯವ ಗೊಬ್ಬರದಿಂದಲೇ ಈ ಗಿಡಗಳನ್ನು ಬೆಳೆಸಿದ್ದು, ಮನೆಗೆ ಅಗತ್ಯವಾದ ಹಣ್ಣು, ತಾಜಾ ತರಕಾರಿ ಸಿಗುವ ಜೊತೆಗೆ ನೆರೆಹೊರೆಯವರಿಗೂ ಉಚಿತವಾಗಿ ತರಕಾರಿ, ಹಣ್ಣುಗಳನ್ನು ನೀಡುತ್ತಾರೆ.
ಮಗನ ಪರಿಸ್ಥಿತಿಯಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ನನಗೆ ಟೆರೇಸ್ ಗಾರ್ಡನಿಂಗ್ ನಿರ್ಮಾಣದಿಂದ ಒತ್ತಡ ದಿಂದ ಹೊರ ಬಂದು ನೆಮ್ಮದಿ ಸಿಕ್ಕಿದೆ. ಸದ್ಯ ಈ ಗಿಡಗಳೊಂದಿಗೆ ಮಗನನ್ನು ನೋಡಿ ಕೊಳ್ಳುತ್ತಾ ಇದ್ದೇನೆ. ಮುಂದಿನ ದಿನಗಳಲ್ಲಿ ನಮ್ಮದೇ ಆದ ಸ್ವಂತ ಮನೆ ಮಾಡಿಕೊಂಡು ಗಾರ್ಡನಿಂಗ್ ಅನ್ನು ಮತ್ತಷ್ಟು ಅಭಿವೃದ್ಧಿ ಪಡಿಸುವ ಉದ್ದೇಶವಿದೆ.
●ಸುಷ್ಮಾ ರೆಡ್ಡಿ, ತಾರಸಿ ಕೈತೋಟ ಬೆಳೆದವರು
– ಭಾರತಿ ಸಜ್ಜನ್