ಹೊಸದಿಲ್ಲಿ: ಅಯೋಧ್ಯೆ ರಾಮಜನ್ಮಭೂಮಿ ಪ್ರಕರಣದಲ್ಲಿ ಸತತ 40 ದಿನಗಳ ವಿಚಾರಣೆ ಮುಗಿದ ಮೂರು ದಿನಗಳಲ್ಲಿ ಸಂಬಂಧಿಸಿದ ಎಲ್ಲ ಪಕ್ಷಗಳೂ “ಮೌಲ್ಡಿಂಗ್ ಆಫ್ ರಿಲೀಫ್’ ರೂಪದಲ್ಲಿ ತಮ್ಮ ಲಿಖೀತ ಹೇಳಿಕೆಗಳನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಿವೆ. ಈ 40 ದಿನಗಳಲ್ಲಿ ಪಕ್ಷಗಳು ಮಾಡಿದ ವಾದಗಳನ್ನೇ ಅಂತಿಮ ಬೇಡಿಕೆ ಅಥವಾ ಹೇಳಿಕೆಯ ರೂಪದಲ್ಲಿ ಸಲ್ಲಿಸಲಾಗಿದೆ. ಈ ಲಿಖೀತ ಸಲ್ಲಿಕೆಗೆ ಮೂರು ದಿನಗಳ ಕಾಲಾವಕಾಶವನ್ನು ಸುಪ್ರೀಂಕೋರ್ಟ್ ನೀಡಿತ್ತು.
ಇದರ ಜೊತೆಗೇ ಮೂರು ಸದಸ್ಯರ ರಾಜಿ ಸಂಧಾನ ಸಮಿತಿ ಕೂಡ ತನ್ನ ವರದಿಯನ್ನು ಸಲ್ಲಿಸಿದೆ. ಎಲ್ಲ ಪಕ್ಷ ಗಳನ್ನೂ ಜೊತೆಗೂಡಿಸಿಕೊಂಡು ರಾಜಿ ಸಂಧಾನ ನಡೆಸುವ ಕುರಿತಂತೆ ಈ ಸಮಿತಿಯನ್ನು ರಚಿಸಲಾಗಿತ್ತು.
ಹಿಂದೂ ಪರವಾಗಿ ತೀರ್ಪು ಪ್ರಕಟಿಸಿದರೆ ರಾಮಮಂದಿರ ನಿರ್ಮಾ ಣದ ಅನಂತರ ನಿರ್ವಹಣೆ ಹೊಣೆಯನ್ನು ನೀಡಬೇಕು ಎಂದು ನಿರ್ಮೋಹಿ ಅಖಾಡ ಬೇಡಿಕೆ ಸಲ್ಲಿಸಿದೆ. ಇನ್ನು, ಇಡೀ ಭೂಮಿ ಯನ್ನು ತನಗೇ ನೀಡಬೇಕೆಂದು ರಾಮ್ ಲಲ್ಲಾ ಆಗ್ರಹಿಸಿದೆ. ಕೇವಲ ರಾಮ ಮಂದಿರವನ್ನು ನಿರ್ಮಾಣ ಮಾಡಲು ವಿವಾದಿತ ಜಾಗದಲ್ಲಿ ಅವಕಾಶ ಮಾಡಿಕೊಡಬೇಕು. ಇದರ ನಿರ್ವಹಣೆಗೆ ಟ್ರಸ್ಟ್ ನಿರ್ಮಾಣ ಮಾಡಬೇಕು ಎಂದು ರಾಮ ಜನ್ಮಭೂಮಿ ಪುರಂದರ ಸಮಿತಿ ಹಾಗೂ ಹಿಂದೂ ಮಹಾಸಭೆ ಆಗ್ರಹಿಸಿದೆ.
ಇನ್ನು, ವಿವಾದಿತ ಜಾಗದಲ್ಲಿ ಪ್ರಾರ್ಥನೆ ಸಲ್ಲಿಸುವುದು ನಮ್ಮ ಸಾಂವಿಧಾನಿಕ ಹಕ್ಕು ಎಂದು ಎಂದು ಗೋಪಾಲ ಸಿಂಗ್ ವಿಶಾರದ ವಾದಿಸಿದ್ದಾರೆ. ವಿವಾದಿತ ಜಾಗದಲ್ಲಿ ರಾಮ ಮಂದಿರ ನಿರ್ಮಾಣ ಮಾಡಬೇಕು ಎಂದು ಶಿಯಾ ವಕ್ಫ್ ಮಂಡಳಿ ಆಗ್ರಹಿಸಿದ್ದರೆ, ಈ ಸ್ಥಳದಲ್ಲಿ ಬಾಬ್ರಿ ಮಸೀದಿ ನಿರ್ಮಾಣ ಮಾಡಬೇಕು ಎಂದು ಸುನ್ನಿ ವಕ್ಫ್ ಮಂಡಳಿ ಆಗ್ರಹಿಸಿದೆ. ಆದರೆ ತಮ್ಮ ಪರವಾಗಿ ತೀರ್ಪು ಬರದಿದ್ದರೆ ಪರ್ಯಾಯ ಪರಿಹಾರಗಳನ್ನು ಒದಗಿಸುವಂತೆಯೂ ಒತ್ತಾಯಿಸಿವೆ.
ರಾಜಿ ಸಂಧಾನ ಸಮಿತಿ ವರದಿ ಸಲ್ಲಿಕೆ ಈ ಎಲ್ಲ ಬೆಳವಣಿಗೆ ಗಳ ಮಧ್ಯೆಯೇ ನಿವೃತ್ತ ನ್ಯಾಯಮೂರ್ತಿ ಎಫ್ಎಂಐ ಖಲೀಫುಲ್ಲಾ, ಹಿರಿಯ ವಕೀಲ ಶ್ರೀರಾಮ್ ಪಂಚು ಮತ್ತು ಅಧ್ಯಾತ್ಮ ಗುರು ಶ್ರೀ ಶ್ರೀ ರವಿಶಂಕರ್ ಅವರನ್ನೊಳಗೊಂಡ ರಾಜಿ ಸಂಧಾನ ಸಮಿತಿ ಕೂಡ ತನ್ನ ಹೊಸ ವರದಿಯನ್ನು ಸಲ್ಲಿಸಿದೆ. ಕೆಲವು ದಾವೆದಾರರು ಒಪ್ಪಂದಕ್ಕೆ ಬಂದಿವೆ ಎಂದು ಈ ಹೊಸ ವರದಿಯಲ್ಲಿ ವಿವರಿಸಿದೆ ಎನ್ನಲಾಗಿದೆ.
ಸದ್ಯಕ್ಕಿಲ್ಲ ಮಸೀದಿ ನಿರ್ಮಾಣ
ಕೆಲವು ಮುಸ್ಲಿಂ ಅರ್ಜಿದಾರರು ಶನಿವಾರ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದು, “ಒಂದು ವೇಳೆ ತೀರ್ಪು ಮುಸ್ಲಿಮರ ಪರವಾಗಿ ಬಂದರೆ, ಸದ್ಯಕ್ಕಂತೂ ವಿವಾದಿತ ಜಾಗದಲ್ಲಿ ಮಸೀದಿ ನಿರ್ಮಿಸುವುದಿಲ್ಲ’ ಎಂದು ಹೇಳಿದ್ದಾರೆ. ನಾವು ಸೌಹಾರ್ದ ಮತ್ತು ಸಾಮರಸ್ಯಕ್ಕೆ ಆದ್ಯತೆ ನೀಡುತ್ತೇವೆ. ನಮ್ಮ ಪರ ತೀರ್ಪು ಬಂದರೆ, ಶಾಂತಿ ಕಾಪಾಡುವ ಉದ್ದೇಶದಿಂದ ನಾವು ಆ ಜಾಗದಲ್ಲಿ ಮಸೀದಿ ನಿರ್ಮಾಣ ಕೆಲಸವನ್ನು ಮುಂದೂಡುತ್ತೇವೆ. ಅಲ್ಲಿ ಒಂದು ಬೇಲಿ ಹಾಕಿ, ಆ ಸ್ಥಳವನ್ನು ಹಾಗೇ ಬಿಟ್ಟುಬಿಡುತ್ತೇವೆ ಎಂದು ಅರ್ಜಿದಾರರಾದ ಹಾಜಿ ಮೆಹಬೂಬ್ ಹಾಗೂ ಮುಫ್ತಿ ಹಸ್ಬುಲ್ಲಾ ಬಾದ್‌ಶಾ ಖಾನ್, ಮೊಹಮ್ಮದ್ ಉಮರ್ ಹೇಳಿದ್ದಾರೆ.
ಪ್ರತ್ಯೇಕ ಅರ್ಜಿ ಸಲ್ಲಿಸಿದ ರಾಮ್ ಲಲ್ಲಾ
ಈ ಮಧ್ಯೆಯೇ ಪ್ರತ್ಯೇಕ ಅರ್ಜಿಯೊಂದನ್ನು ರಾಮ್ ಲಲ್ಲಾ ವಿರಾಜಮಾನ್ ಸಲ್ಲಿಸಿದೆ ಎಂಬುದಾಗಿ ಎನ್‌ಡಿಟಿವಿ ಸುದ್ದಿಸಂಸ್ಥೆ ವರದಿ ಮಾಡಿದೆ. ವಿವಾದಿತ ಭೂಮಿಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಮಾತ್ರ ಅವಕಾಶ ಕೊಡಬೇಕು. ಬಾಬ್ರಿ ಮಸೀದಿ ಈ ಸ್ಥಳದಲ್ಲಿ ಎಂದೂ ಇಲ್ಲದ್ದರಿಂದ ಮುಸ್ಲಿಂ ದಾವೆದಾರರಿಗೆ ಭೂಮಿಯನ್ನಾಗಲೀ ಅಥವಾ ಮಸೀದಿ ನಿರ್ಮಾಣಕ್ಕೆ ಅವಕಾಶವನ್ನಾಗಲೀ ನೀಡಬಾರದು ಎಂದು ರಾಮ್ ಲಲ್ಲಾ ವಿರಾಜಮಾನ್ ವಾದಿಸಿದೆ ಎನ್ನಲಾಗಿದೆ. ಅಷ್ಟೇ ಅಲ್ಲ, ನಿರ್ಮೋಹಿ ಅಖಾಡಕ್ಕೂ ಭೂಮಿಯನ್ನು ನೀಡಬಾರದು ಎಂದು ಅದು ಆಗ್ರಹಿಸಿದೆ.