ತೇರದಾಳ: ಶಾಲಾ-ಕಾಲೇಜುಗಳಲ್ಲಿ ಹಮ್ಮಿಕೊಳ್ಳುವ ವಿಜ್ಞಾನ ವಸ್ತು ಪ್ರದರ್ಶನಗಳು ಮಕ್ಕಳಲ್ಲಿ ಹೊಸ ವಿಷಯಗಳ ಆವಿಷ್ಕಾರ ಮತ್ತು ಅವಿಷ್ಕಾರಕ್ಕಾಗಿ ಪುಸ್ತಕ ಓದಿಗೆ ಕಾರಣವಾಗುತ್ತವೆ. ಹೊರತು ಖರ್ಚುದಾಯಕವೆಂದು ಯಾರೂ ಭಾವಿಸಬಾರದೆಂದು ರಬಕವಿಯ ನಿವೃತ್ತ ಮುಖ್ಯಶಿಕ್ಷಕ ಉಮೇಶ ಹನಗಂಡಿ ಹೇಳಿದರು.
ಪಟ್ಟಣದ ಸಿದ್ಧೇಶ್ವರ ವಿದ್ಯಾವರ್ಧಕ ಸಂಘದ ಸ್ವಾಮಿ ವಿವೇಕಾನಂದ ಇಂಟರ್‌ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಅಂತರ ಶಾಲಾ ಮಟ್ಟದ ವಿಜ್ಞಾನ ಹಾಗೂ ಕಲಾ ವಿಭಾಗದ ವಸ್ತು ಪ್ರದರ್ಶನ ಹಾಗೂ ಆಹಾರ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಶಾಲೆಗಳಲ್ಲಿ ಮಕ್ಕಳ ಜ್ಞಾನವಿಕಾಸಕ್ಕೆ ನಡೆಯುವ ಎಲ್ಲ ಚಟುವಟಿಕೆಗಳಿಗೆ ಪಾಲಕರ ಬೆಂಬಲ ಅವಶ್ಯವಿದ್ದು, ಶಿಕ್ಷಕರು ಮಕ್ಕಳಲ್ಲಿನ ಸೂಪ್ತ ಜ್ಞಾನವನ್ನು ಅರಿತು ಅವರಿಗೆ ಟಾಸ್ಕ್ ಕೊಡಬೇಕು. ಪ್ರಾಯೋಗಿಕ ಕಲಿಕೆಗೆ ಮಕ್ಕಳು ಆಸಕ್ತಿ ಹೊಂದಿರುತ್ತಾರೆ ಎಂದರು.
ಸಿಬಿಎಸ್‌ಇ ಶಾಲೆಯ ಚೇರಮನ್ ಶಂಕರ ಮಂಗಸೂಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಕ್ಕಳ ವಸ್ತು ಪ್ರದರ್ಶನದಲ್ಲಿ ತೇರದಾಳದ ಅಲ್ಲಮಪ್ರಭು ನೂತನ ದೇವಸ್ಥಾನದ ಮಾದರಿ, ಸೌರಚಾಲತ ಯಂತ್ರ, ಲಂಡನ್ ಸೇತುವೆ, ಸಾವಯವ ಕೃಷಿ ವಿಧಾನ, ಗ್ರಾಮೀಣ ಸೊಗಡಿನ ಮನೆ, ಸ್ವಯಂ ಚಾಲಿತ ಯಂತ್ರಗಳು, ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದ ಮಾದರಿ ಚಿತ್ರ ಪಟಗಳು, ವಿಜ್ಞಾನದ ಮಾದರಿಗಳು ಗಮನ ಸೆಳೆದವು. ಕಿರಿಯರ ವಿಭಾಗಕ್ಕೆ ಏರ್ಪಡಿಸಲಾಗಿದ್ದ ಆಹಾರ ಮೇಳ ಹಾಗೂ ಮಕ್ಕಳ ಸಂತೆಯಲ್ಲಿ ಸಾಕಷ್ಟು ಮಕ್ಕಳು ತರಹೇವಾರಿ ತಿಂಡಿ, ತರಕಾರಿ, ಹಣ್ಣು, ಶಾಲಾ ಸಾಮಗ್ರಿಗಳನ್ನು ಮಾರಾಟ ಮಾಡಿದರು.
ದೊಡ್ಡ ಸಂತೆಯನ್ನು ನಾಚಿಸುವಂತೆ ಮಕ್ಕಳು ದೊಡ್ಡ ಧ್ವನಿಯಲ್ಲಿ ಗ್ರಾಹಕರನ್ನು ತಮ್ಮ ಮಳಿಗೆಗಳಿಗೆ ಕರೆದು ವಸ್ತುಗಳನ್ನು ಮಾರಾಟ ಮಾಡಿದ್ದು ವಿಶೇಷವಾಗಿತ್ತು. ಸಾಕಷ್ಟು ಪಾಲಕರು ಬಗೆಬಗೆಯ ತಿಂಡಿಗಳನ್ನು ಸವಿದು ತಲೆದೂಗಿದರು. ಸಾಂಪ್ರದಾಯಿಕ ಮಾರಾಟಗಾರರಂತೆ ಮಕ್ಕಳು ತಲೆಗೆ ಕಾಗದದ ಟೋಪಿ ಧರಿಸಿದ್ದರು. 25 ಸಾವಿರಕ್ಕೂ ಹೆಚ್ಚು ವ್ಯಾಪಾರ ವಹಿವಾಟು ನಡೆಸಿದ ಮಕ್ಕಳು ಪಾಲಕ ಹಾಗೂ ಶಿಕ್ಷಕರಿಂದ ಮೆಚ್ಚುಗೆ ಪಡೆದರು.
ಶಾಲಾ ಆಡಳಿತ ಮಂಡಳಿಯ ರಮೇಶ ಅವರಾದಿ, ಈರಪ್ಪ ಯಾದವಾಡ, ಶಿವಾನಂದ ನಿವರಗಿ, ಪ್ರಕಾಶ ಕಾಲತಿಪ್ಪಿ, ಪರಪ್ಪ ಅಥಣಿ, ಸಿದ್ದು ಅಮ್ಮಣಗಿ, ಮಲ್ಲಪ್ಪ ಮುಕರಿ, ಅರುಣ ಮುಕುಂದ, ಪ್ರಾಚಾರ್ಯ ಜಾಯ್ ಸೆಬ್‌ಸ್ಟಿನ್, ಡಿ.ಆರ್. ಮೊಮಿನ್, ಮುತ್ತು ಹುಕ್ಕೇರಿ, ನವೀನ ಬುರ್ಶಿ ಇದ್ದರು.