ನಂಜನಗೂಡು: ಪಂಚ ಮಹಾರಥೋತ್ಸವ ಅಂಗವಾಗಿ ಶ್ರೀಕಂಠೇಶ್ವರನ ಸನ್ನಿಧಿಯ ಕಪಿಲಾ ನದಿಯಲ್ಲಿ ಶುಕ್ರವಾರ ಸಡಗರ, ಸಂಭ್ರಮದಿಂದ ಶ್ರೀಕಂಠೇಶ್ವರಸ್ವಾಮಿ ತೆಪ್ಪೋತ್ಸವ ಜರುಗಿತು. ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ಈ ವೈಭವದ ಶ್ರೀಕಂಠನ ಉತ್ಸವವನ್ನು ಕಣ್ತುಂಬಿಕೊಂಡು ಪುನೀತರಾದರು.
ಸಂಜೆ 7.30ಕ್ಕೆ ಸರಿಯಾಗಿ ದೇಗುಲದ ಪ್ರಧಾನ ಅರ್ಚಕರಾದ ನಾಗಚಂದ್ರ ದೀಕ್ಷಿತ್ ಅವರು ಶ್ರೀಕಂಠೇಶ್ವರ ಸ್ವಾಮಿಯವರ ಉತ್ಸವ ಮೂರ್ತಿಗೆ ವಿಶೇಷ ಪೂಜಾ ಕೈಂಕರ್ಯ ನೆರವೇರಿಸಿದರು. ಉತ್ಸವ ಮೂರ್ತಿಯನ್ನು ಹೂವಿನಿಂದ ಅಲಂಕೃತಗೊಳಿಸಿದ್ದಲ್ಲದೇ ಶ್ರೀಕಂಠಮುಡಿ ಧಾರಣೆಯಿಂದ ವಿಶೇಷವಾಗಿ ಕಂಗೊಳಿಸುತ್ತಿತ್ತು. ಈ ದೃಶ್ಯವನ್ನು ವೀಕ್ಷಿಸಿದ ಭಕ್ತರು ಭಾವಪರವಶರಾದರು.
ನಂತರ ವಿದ್ಯುತ್ ದೀಪದಿಂದ ಅಲಂಕೃತಗೊಂಡ ತೇಲುವ ವಾಹನದಲ್ಲಿ ಶ್ರೀ ಕಂಠೇಶ್ವರಸ್ವಾಮಿಯನ್ನು ಪ್ರತಿಷ್ಠಾಪಿಸಿ, ಕಪಿಲಾ ನದಿಯಲ್ಲಿ ಮೂರು ಸುತ್ತು ಪ್ರದಕ್ಷಣೆ ಮಾಡಲಾಯಿತು. ನಂಜನಗುಡಿನಾಧಿಶ್ವರ ನಂಜುಂಡಪ್ಪ ದಂಪತಿಗಳ ಈ ಜಲ ಉತ್ಸವದ ಸೊಬಗನ್ನು ಕಪಿಲಾ ನದಿ ಸ್ನಾನಘಟ್ಟದ ಸುತ್ತ ನೆರೆದಿದ್ದ ಭಕ್ತರು ಸೋಪಾನಕಟ್ಟೆ ಸೇರಿದಂತೆ ನದಿಯ ಇಕ್ಕೆಲಗಳ ದಂಡೆಯ ಮೇಲೆ ಕುಳಿತು ಕಣ್ತುಂಬಿಕೊಂಡರು.
ವರುಣಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೆಜ್ಜಿಗೆ, ತೋರೆಮಾವು, ಕೆಂಪಿಸಿದ್ದನಹುಂಡಿ, ಬಸವನಪುರ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಆ ಕಡೆ ದಡದಲ್ಲಿ ನಿಂತು ಶ್ರೀಕಂಠೇಶ್ವರನ ವೈಭವದ ತಪ್ಪೋತ್ಸವವನ್ನು ವೀಕ್ಷಣೆ ಮಾಡಿ ಧನ್ಯತಾ ಭಾವ ಮೆರೆದರು. ಜಾತ್ರಾ ಮಹೋತ್ಸವ ಪ್ರಯುಕ್ತ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ಮುಡಿ ಸೇವೆ ಸೇರಿದಂತೆ ವಿವಿಧ ಹರಕೆಗಳನ್ನು ತೀರಿಸಿ ಪುನೀತರಾದರು.
ಈ ಸಂದರ್ಭದಲ್ಲಿ ದೇವಾಲಯದ ನೂತನ ಕಾರ್ಯನಿರ್ವಹಕ ಅಧಿಕಾರಿ ಶಿವಕುಮಾರಯ್ಯ, ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಶಿವನಂಜು, ಸದಸ್ಯರಾದ ಶ್ರೀಧರ್, ಮಂಜಳಾ ಮಧು, ಇಂಧನ್ ಭಾಬು, ಪುಟ್ಟನಿಂಗ ಶೆಟ್ಟಿ , ಶಶಿರೇಖಾ, ದೇವಾಲಯದ ಸ್ಥಳಪುರೋಹಿತ ಸಪ್ತರ್ಷಿ ಜೋಯಿಸ್, ಅರ್ಚಕರಾದ ನೀಲಕಂಠ ದೀಕ್ಷಿತರು, ವಿಶ್ವಾನಾಥ ದೀಕ್ಷಿತರು, ಸದಾಶಿವು ಸೇರಿದಂತೆ ಅರ್ಚಕ ವೃಂದ ಹಾಗೂ ಅಪಾರ ಭಕ್ತ ಸಮೂಹ ನೆರೆದಿತ್ತು.
ಶ್ರೀಕಂಠೇಶ್ವರನ ಸನ್ನಿಧಿಯಲ್ಲಿ ತೆಪ್ಪೋತ್ಸವ ಕಾರ್ಯಕ್ರಮ ಪ್ರಯುಕ್ತ ಮುನ್ನೆಚ್ಚರಿಕೆ ಕ್ರಮವಾಗಿ ಸೂಕ್ತ ಪೋಲಿಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.