ಹುಣಸೂರು: ತಾಲೂಕಿನ ಮೈಸೂರು-ಹುಣಸೂರು ಹೆದ್ದಾರಿ ಬಳಿಯ ಬೀಜಗನಹಳ್ಳಿಯ ನೀರು ತುಂಬಿದ ದೊಡ್ಡಕೆರೆಯಲ್ಲಿ ಮೂರು ಊರಿನ ಗ್ರಾಮಸ್ಥರು ಶ್ರೀ ಬಸವೇಶ್ವರ ದೇವರ ತೆಪ್ಪೋತ್ಸವ ನಡೆಸಿ ಹರಕೆ ತೀರಿಸಿ ಕೃತಾರ್ಥರಾದರು. ಬೀಜಗನಹಳ್ಳಿ, ರೆಡ್ಡಿಕೊಪ್ಪಲು, ಮಂಟಿಕೊಪ್ಪಲು ಗ್ರಾಮಸ್ಥರು ಮಂಗಳವಾರ ಗ್ರಾಮದ ಬಸವೇಶ್ವರ ದೇವರನ್ನು ಬೊಂಬು-ಬಾಳೆ ದಿಂಡಿನಿಂದ ನಿರ್ಮಿಸಿದ್ದ ತೆಪ್ಪದಲ್ಲಿ ಕುಳ್ಳಿರಿಸಿ 3 ಬಾರಿ ಕೆರೆಯಲ್ಲಿ ತೆಪ್ಪ ವಾಡಿಸಿದರು.
ತುಂಬಿದ ಕೆರೆಯಲ್ಲಿ ತೆಪ್ಪೋತ್ಸವ ಕಣ್ತುಂಬಿಕೊಳ್ಳಲು ಸುಮಾರು 4 ಸಾವಿರಕ್ಕೂ ಹೆಚ್ಚು ಮಂದಿ ಕೆರೆ ಸುತ್ತ ಹಾಗೂ ಏರಿಮೇಲೆ ಬೆಳಗ್ಗೆಯಿಂದಲೇ ಬಿರು ಬಿಸಲಿನಲ್ಲೇ ಜಮಾಯಿಸಿದ್ದರು. ದೇವರಿಗೆ ಜೈಕಾರ ಹಾಕುತ್ತಾ ಭಕ್ತಿಭಾವ ಮೆರೆದರು. ಕೆರೆ ಬಳಿ ಗ್ರಾಮಸ್ಥರು ಮಜ್ಜಿಗೆ, ಪಾನಕ ನೀಡಿ ದಣಿವಾರಿಸಿದರು. ಸೋಮವಾರ ರಾತ್ರಿ ಮೂರು ಊರುಗಳಲ್ಲೂ ದೇವರ ಉತ್ಸವ ವಿಜಂಭಣೆಯಿಂದ ನಡೆಯಿತು.
ಬಾಗಿನ ಅರ್ಪಿಸಿದರು: ಏತ ನೀರಾವರಿ ಮೂಲಕ ಕೆರೆ ತುಂಬಿಸಿದ ಸಂತಸದಲ್ಲಿದ್ದ ಶಾಸಕ ಎಚ್.ಪಿ.ಮಂಜುನಾಥ್, ಸಣ್ಣನೀರಾವರಿ ಮಾಜಿ ಮಂತ್ರಿ ಶಿವರಾಜತಂಗಡಗಿ, ಜಿಪಂ ಸದಸ್ಯೆ ಡಾ.ಪುಷ್ಪ, ತಾಪಂ ಅಧ್ಯಕ್ಷೆ ಪದ್ಮಮ್ಮ, ಹಾಗೂ ಗಣ್ಯರು ಗಂಗೆ ಪೂಜೆ ನಡೆಸಿ ಕೆರೆಗೆ ಬಾಗಿನ ಅರ್ಪಿಸಿದರು. ನಂತರ ಗ್ರಾಮಸ್ಥರು ಶಾಸಕ, ಮಾಜಿ ಮಂತ್ರಿ ಅವರನ್ನು ಸನ್ಮಾನಿಸಿದರು.
ಜೆಡಿಎಸ್ ಮುಖಂಡ ಎಚ್.ವಿಶ್ವನಾಥ್, ಜೆಡಿಎಸ್ ಅಧ್ಯಕ್ಷ ಹರಳಹಳ್ಳಿ ಮಾದೇಗೌಡ ತಮ್ಮ ಬೆಂಬಲಿಗರೊಂದಿಗೆ ಆಗಮಿಸಿ ಪೂಜೆ ಸಲ್ಲಿಸಿದರು. ಗ್ರಾಪಂ ಅಧ್ಯಕ್ಷೆ ಸೀತಮ್ಮ, ಸದಸ್ಯರು, ಎಪಿಎಂಸಿ ಸದಸ್ಯ ಮಹದೇವ್, ತಾಪಂ ಸದಸ್ಯ ರವಿಪ್ರಸನ್ನ, ಬಿಜೆಪಿ ಮುಖಂಡ ನಾಗರಾಜಪ್ಪ, ತಾಲೂಕು ಗ್ರಾಮಗಳ ಯಜಮಾನರು, ಮುಖಂಡರು ಇದ್ದರು. ಜನರನ್ನು ನಿಯಂತ್ರಿಸಲು ವೃತ್ತ ನಿರೀಕ್ಷಕ ಪೂವಯ್ಯ, ಪಿಎಸ್‌ಐಗಳಾದ ಷಣ್ಮುಗಂ, ಪುಟ್ಟಸ್ವಾಮಿ ಬಂದೋಬಸ್ತ್ ಕಲ್ಪಿಸಿದ್ದರು.