ಕೆಲ ಚಿತ್ರಗಳು ಬಿಡುಗಡೆ ಬಳಿಕ ಸುದ್ದಿಯಾಗುತ್ತವೆ. ಇನ್ನು ಕೆಲವು ಬಿಡುಗಡೆ ಮುನ್ನವೇ ಸದ್ದು ಮಾಡುತ್ತವೆ. ಅಂತಹ ಚಿತ್ರಗಳ ಸಾಲಿಗೆ “ಗಂಟುಮೂಟೆ ‘ ಚಿತ್ರವೂ ಸೇರಿದೆ. ಇದು ಹೊಸಬರೇ ಸೇರಿ ಮಾಡಿದ ಚಿತ್ರ. ಜನರ ಮುಂದೆ ಬರುವ ಮುನ್ನವೇ, ನ್ಯೂಯಾರ್ಕ್ ಇಂಡಿಯನ್ ಚಿತ್ರೋತ್ಸವದಲ್ಲಿ “ಬೆಸ್ಟ್ ಸ್ಕ್ರೀನ್ ಪ್ಲೇ ‘ ಅವಾರ್ಡ್ ಪಡೆದಿದೆ. ಆ ಚಿತ್ರೋತ್ಸವದಲ್ಲಿ ಪ್ರಶಸ್ತಿ ಪಡೆದ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಯೂ ಇದಕ್ಕಿದೆ. ಸದ್ಯಕ್ಕೆ ಕೆನಡಾದ “ಒಟ್ಟಾವಾ ಇಂಡಿಯನ್ ಫಿಲ್ಮ್ ಫೆಸ್ಟಿವಲ್’ಗೂ ಆಯ್ಕೆಯಾಗಿದೆ. ಇದೇ ಮೊದಲ ಸಲ ತಮ್ಮ “ಗಂಟುಮೂಟೆ’ ಕುರಿತು ಮಾತನಾಡಲು ಚಿತ್ರತಂಡ ಮಾಧ್ಯಮ ಎದುರು ಬಂದಿತ್ತು. ಮೊದಲು ಮಾತಿಗಿಳಿದದ್ದು ನಿರ್ದೇಶಕಿ ರೂಪರಾವ್. “ಇದು 90ರ ದಶಕದ ಕಥೆ. ಎಸ್ಸೆಸ್ಸೆಲ್ಸಿ ಹುಡುಗ, ಹುಡುಗಿ ನಡುವಿನ ಮಾತುಕತೆ ಇಲ್ಲಿರಲಿದೆ. ಸಿನಿಮಾ ಲೈಫ್ನಂತೆಯೇ ರಿಯಲ್ ಬದುಕು ಕೂಡ ಇರುತ್ತೆ ಎಂದು ಭ್ರಮೆಯಲ್ಲಿರುವ ಹುಡುಗಿಯ ಜರ್ನಿ ಇಲ್ಲಿದೆ. ಕೊನೆಗೆ ಸಿನಿಮಾ ಬೇರೆ, ಬದುಕೇ ಬೇರೆ ಎಂದು ಅರ್ಥ ಮಾಡಿಕೊಳ್ಳುವ ಹೊತ್ತಿಗೆ ಸಾಕಷ್ಟು ಏರಿಳಿತಗಳು ಬಂದುಹೋಗಿರುತ್ತವೆ. ಅಲ್ಲಿ ನಡೆಯುವ ಪ್ರಯಾಸವೇ ಚಿತ್ರದ ಹೂರಣ. ಇಲ್ಲಿ ಶಾಲೆ, ಅಲ್ಲಿನ ರಗಳೆ, ಮಾರ್ಕ್ಸ್ಗಾಗಿನ ಸ್ಪರ್ಧೆ, ತರಲೆ, ಹುಡುಗಿಯರಿಗಾಗಿ ನಡೆಯುವ ಗಲಾಟೆ ಇವೆಲ್ಲದರ ನಡುವೆ ಕಾಡುವ ಮೊದಲ ಉತ್ಕಟ ಪ್ರೇಮ ಇತ್ಯಾದಿ ಇಲ್ಲಿದೆ ‘ ಎಂದು ವಿವರಿಸಿದರು ರೂಪರಾವ್.
ನಾಯಕಿ ತೇಜು ಬೆಳವಾಡಿಗೆ ಇದು ಮೊದಲ ಪೂರ್ಣ ಪ್ರಮಾಣದ ಚಿತ್ರ. ಈ ಹಿಂದೆ “ಇದೊಳ್ಳೆ ರಾಮಾಯಣ’ ಚಿತ್ರದಲ್ಲಿ ಚಿಕ್ಕ ಪಾತ್ರ ಮಾಡಿದ್ದು ಬಿಟ್ಟರೆ, “ಗಂಟುಮೂಟೆ’ ನಾಯಕಿಯಾಗಿ ಮೊದಲ ಸಿನಿಮಾವಂತೆ. ತಮ್ಮ ಪಾತ್ರ ಕುರಿತು ಹೇಳಿಕೊಂಡ ತೇಜು ಬೆಳವಾಡಿ, “ನನ್ನ ನಾಟಕ ನೋಡಿ ನಿರ್ದೇಶಕರು ಆಡಿಷನ್‌ಗೆ ಕರೆಸಿದ್ದರು. ಆಡಿಷನ್ ಮುಗಿದ ಬಳಿಕ ಕಥೆ ಹೇಳಿದರು. ಸ್ಕೂಲ್ ಕುರಿತ ಕಥೆ ಅದಾಗಿತ್ತು. ಚೆನ್ನಾಗಿತ್ತು. ಹುಡುಗಿಯರಿಗೆ ಸಿನಿಮಾದಲ್ಲಿ ಹೆಚ್ಚು ಜಾಗ ಇರಲ್ಲ. ಇಲ್ಲಿ ಕಥೆ ಹುಡುಗಿ ಸುತ್ತವೇ ಸುತ್ತುತ್ತದೆ. ಎಲ್ಲವೂ ನೈಜ ಎಂಬಂತೆ ಚಿತ್ರಣಗೊಂಡಿದೆ.ಮನೆಯವರ ಸಹಕಾರ, ಪ್ರೋತ್ಸಾಹ ಸಿಕ್ಕ ತಕ್ಷಣ ಚಿತ್ರ ಮಾಡಿದೆ. ಇದು ಬಿಡುಗಡೆ ಮುನ್ನವೇ ಒಂದಷ್ಟು ಖುಷಿಯ ಸುದ್ದಿ ಕೊಟ್ಟಿದೆ ‘ ಎಂದರು ತೇಜು.
ನಾಯಕ ನಿಶ್ಚಿತ್ ಕೊರೋಡಿಗೆ ಇದು ಮೊದಲ ಚಿತ್ರ. ಟೆಂಟ್ ಸಿನ್ಮಾದಲ್ಲಿ ನಟನೆ ಕಲಿತ ಅವರಿಗೆ ನಿರ್ದೇಶಕಿ ರೂಪರಾವ್ ಟೀಚರ್ ಆಗಿದ್ದರಂತೆ. ಆಗಲೇ ಅವರು ಸಿನಿಮಾ ಮಾಡುವ ಬಗ್ಗೆ ಹೇಳಿದ್ದರಂತೆ. ಆ ಬಗ್ಗೆ ಹೇಳುವ ನಿಶ್ಚಿತ್, “ಸ್ಕ್ರಿಪ್ಟ್ ಮುಗಿಸಿದ ಬಳಿಕ ಆಡಿಷನ್ ಕರೆದಿದ್ದರು. ಸುಮಾರು ಸಲ ಆಡಿಷನ್ ಆಗಿತ್ತು. ಆದರೆ, ಆಯ್ಕೆ ಆಗಿರಲಿಲ್ಲ. ಕೊನೆಗೂ ಆಯ್ಕೆಯಾದೆ. ಖುಷಿಯಾಯ್ತು. ಇಲ್ಲಿ ಸ್ಕೂಲ್ ಹುಡುಗನ ಪಾತ್ರವಿದೆ. ಒಳ್ಳೆಯ ಕಥೆ, ಒಳ್ಳೆಯ ತಂಡದ ಜೊತೆ ಕೆಲಸ ಮಾಡಿದ್ದು ಮರೆಯದ ಅನುಭವ ‘ ಎಂದರು ನಿಶ್ಚಿತ್. ಅಮೇಯುಕ್ತಿ ಸ್ಟುಡಿಯೋಸ್ ಮೂಲಕ ಈ ಚಿತ್ರ ನಿರ್ಮಾಣವಾಗಿದೆ. ಚಿತ್ರ ಈಗ ಬಿಡಗುಡೆಗೆ ರೆಡಿಯಾಗಿದ್ದು, ಚಿತ್ರಕ್ಕೆ ಸಹದೇವ್ ಛಾಯಾಗ್ರಹಣವಿದೆ.ಚಿತ್ರದಲ್ಲಿ ಭಾರ್ಗವ್‌ರಾಜು, ಸೂರ್ಯ ವಸಿಷ್ಠ, ಶರತ್‌ಗೌಡ, ಶ್ರೀರಂಗ, ರಾಮ್ ಮಂಜುನಾಥ್ ಇತರರು ನಟಿಸಿದ್ದಾರೆ.