Advertisement

ಮಾವುತರು-ಕಾವಾಡಿಗರ ಮಕ್ಕಳಿಗೆ ಟೆಂಟ್‌ ಶಾಲೆ

12:45 PM Aug 22, 2017 | Team Udayavani |

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಗಜಪಡೆಯೊಂದಿಗೆ ಆಗಮಿಸಿರುವ ಮಾವುತರು ಹಾಗೂ ಕಾವಾಡಿಗಳ ಮಕ್ಕಳಿಗಾಗಿ ಶಿಕ್ಷಣ ಇಲಾಖೆ ಸರ್ವ ಶಿಕ್ಷಣ ಅಭಿಯಾನದಲ್ಲಿ ಆರಂಭಿಸಿರುವ ಟೆಂಟ್‌ ಶಾಲೆ ಹಾಗೂ ಟೆಂಟ್‌ ಗ್ರಂಥಾಲಯ ಸೋಮವಾರ ಉದ್ಘಾಟನೆಗೊಂಡಿತು.

Advertisement

ಅರಮನೆ ಆವರಣದಲ್ಲಿ ವಾಸ್ತವ್ಯ ಹೂಡಿರುವ ಗಜಪಡೆ ಮಾವುತರು ಮತ್ತು ಕಾವಾಡಿಗಳ ಮಕ್ಕಳ ಅನುಕೂಲಕ್ಕಾಗಿ ಪ್ರತಿವರ್ಷದಂತೆ ಆರಂಭಿಸಿರುವ ಟೆಂಟ್‌ ಶಾಲೆ ಮತ್ತು ಗ್ರಂಥಾಲಯವನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್‌ ಉದ್ಘಾಟಿಸಿದರು. 

ಜಿಲ್ಲಾಡಳಿತ, ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆ, ಸಾರ್ವಜನಿಕ ಗ್ರಂಥಾಲಯ ಇಲಾಖೆ ಆಶ್ರಯದಲ್ಲಿ ಆರಂಭವಾಗಿರುವ ಟೆಂಟ್‌ ಶಾಲೆಯಲ್ಲಿ ಅಕ್ಷರ ಕಲಿಯುವ ಮಕ್ಕಳಿಗೆ ಎಂದಿನಂತೆ ಮಧ್ಯಾಹ್ನದ ಬಿಸಿಯೂಟ, ಸ್ನ್ಯಾಕ್ಸ್‌ ಜತೆಗೆ ಪುಸ್ತಕ ಮತ್ತು ಲೇಖನ ಸಾಮಗ್ರಿ ನೀಡಲಾಗುತ್ತದೆ.

ಟೆಂಟ್‌ ಶಾಲೆ: ದಸರಾ ಸಂದರ್ಭದಲ್ಲಿ ನಗರಕ್ಕಾಗಮಿಸುವ ಮಾವುತರು ಮತ್ತು ಕಾವಾಡಿಗರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ದೇಶದೊಂದಿಗೆ ಟೆಂಟ್‌ ಶಾಲೆ ಆರಂಭಿಸಲಾಗಿದೆ. ಇದೀಗ ಮೊದಲ ತಂಡದೊಂದಿಗೆ ಆಗಮಿಸಿರುವ ಗಜಪಡೆ ಮಾವುತರು, ಕಾವಾಡಿಗಳ 15 ಮಕ್ಕಳೊಂದಿಗೆ 2ನೇ ತಂಡದಲ್ಲಿ ಬರುವ ಮಕ್ಕಳು ಸೇರಿದಂತೆ ಅಂದಾಜು 40 ಮಕ್ಕಳು ಅನುಕೂಲ ಪಡೆಯಲಿದ್ದಾರೆ.

ದಸರಾ ಹಿನ್ನೆಲೆಯಲ್ಲಿ 42 ದಿನಗಳವರೆಗೆ ಅರಮನೆ ಆವರಣದಲ್ಲಿ ವಾಸ್ತವ್ಯ ಹೂಡಿರುವ ಮಕ್ಕಳು ಟೆಂಟ್‌ ಶಾಲೆಯಲ್ಲಿ ಶಿಕ್ಷಣ ಪಡೆಯಲಿದ್ದಾರೆ. ಪ್ರಸ್ತುತ ಮೊದಲ ತಂಡದಲ್ಲಿ ಆಗಮಿಸಿರುವ ಮಕ್ಕಳಲ್ಲಿ 3ನೇ ತರಗತಿ 4, 7ನೇ ತರಗತಿಯ 6 ಹಾಗೂ 8ನೇ ತರಗತಿ 5 ಮಕ್ಕಳು ಟೆಂಟ್‌ ಶಾಲೆಯಲ್ಲಿ ಶಿಕ್ಷಣ ಪಡೆಯಲಿದ್ದಾರೆ. ಇವರಿಗೆ ಶಾಲೆಯಲ್ಲಿ ಬೋಧಿಸುವಂತೆ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳ ಮೂಲಕ ಬೆಳಗ್ಗೆ 9.30ರಿಂದ ಮಧ್ಯಾಹ್ನ 1.30ರವರೆಗೆ ತರಗತಿಗಳು ನಡೆಯಲಿವೆ. ಬೆಳಗ್ಗೆ 11ಕ್ಕೆ ಉಪಾಹಾರ ಹಾಗೂ ಮಧ್ಯಾಹ್ನ ಶಾಲೆ ಬಿಡುವ ಸಮಯದಲ್ಲಿ ಬಿಸಿಯೂಟ ನೀಡಲಾಗುವುದು. 

Advertisement

ಕಳೆದ ಹಲವು ವರ್ಷದಿಂದ ಟೆಂಟ್‌ ಶಾಲೆಯಲ್ಲಿ ಶಿಕ್ಷಣ ನೀಡುತ್ತಿರುವ ಶಿಕ್ಷಕಿ ನೂರ್‌ ಫಾತಿಮಾ ಈ ಬಾರಿಯೂ ಮಕ್ಕಳಿಗೆ ಶಿಕ್ಷಣ ನೀಡಲಿದ್ದು, ಇವರೊಂದಿಗೆ ಕೆಲವು ಸಂಪನ್ಮೂಲ ವ್ಯಕ್ತಿಗಳು ಶಿಕ್ಷಣ ನೀಡಲಿದ್ದಾರೆ.   ಮೇಯರ್‌ಎಂ.ಜೆ.ರವಿಕುಮಾರ್‌, ಉಪ ಮೇಯರ್‌ ರತ್ನಾ, ನಿಗಮ ಮಂಡಳಿಗಳ ಅಧ್ಯಕ್ಷರಾದ ಎಚ್‌.ಎ.ವೆಂಕಟೇಶ್‌, ಮಲ್ಲಿಗೆ ವೀರೇಶ್‌, ಸಿದ್ದರಾಜು, ಪಾಲಿಕೆ ಆಯುಕ್ತ ಜಿ.ಜಗದೀಶ್‌, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ಕೆ.ಎಸ್‌.ವರ್ಧನ್‌, ಟೆಂಟ್‌ ಶಾಲೆ ಶಿಕ್ಷಕಿ ನೂರ್‌ಫಾತಿಮಾ ಮತ್ತಿತರರಿದ್ದರು.

ಟೆಂಟ್‌ ಗ್ರಂಥಾಲಯ
ಸಾರ್ವಜನಿಕ ಗ್ರಂಥಾಲಯ ಇಲಾಖೆ ಮತ್ತು ನಗರ ಕೇಂದ್ರ ಗ್ರಂಥಾಲಯದಿಂದ ಮಾವುತರ ಕುಟುಂಬ ಹಾಗೂ ಅವರ ಮಕ್ಕಳಿಗೆ ತಾತ್ಕಾಲಿಕವಾದ  ಟೆಂಟ್‌ ಗ್ರಂಥಾಲಯ ತೆರೆಯಲಾಗಿದೆ. ಮಕ್ಕಳಿಗೆ ಉತ್ತಮ ಪುಸ್ತಕ ಪರಿಚಯಿಸುವ ಜತೆಗೆ ವಿಜಾnನ, ಗಣಿತ, ಮಾಹಿತಿ ತಂತ್ರಜಾnನ ಹೀಗೆ ವಿವಿಧ ವಿಷಯಗಳ ಬಗ್ಗೆ ಮಾಹಿತಿ ನೀಡಬಲ್ಲ ನೂರಾರು ಪುಸ್ತಕಗಳು, 5 ದಿನಪತ್ರಿಕೆ, 10 ನಿಯತಕಾಲಿಕೆ ಒದಗಿಸಲಾಗಿದೆ.

ಪ್ರತಿದಿನ ಬೆಳಗ್ಗೆ 9.30 ರಿಂದ ಮಧ್ಯಾಹ್ನ 1.30 ಗಂಟೆವರೆಗೆ ಗ್ರಂಥಾಲಯದಲ್ಲಿ ಕಲಿಕೆಗೆ ಅವಕಾಶ ಕಲ್ಪಿಸಲಾಗಿದೆ. ಜತೆಗೆ ಆ.22ರಿಂದ ಸೆ.28ರವರೆಗೆ ಮಕ್ಕಳಿಗಾಗಿ ಕಥೆ ಹೇಳುವುದು, ದಿನಪತ್ರಿಕೆ ಓದುವುದು, ವನ್ಯ ಜೀವಿಗಳ ಪುಸ್ತಕ, ಪುಸ್ತಕ ಓದುವ ಕೌಶಲ್ಯ, ಜೇಡಿ ಮಣ್ಣಿನ ಕಲೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಮಾಹಿತಿ ನೀಡಲಾಗುವುದು. ಅಂತ್ಯದಲ್ಲಿ ರಸಪ್ರಶ್ನೆಗಳಿಗೆ ಸಂಬಂಧಿಸಿದಂತೆ ಪರೀಕ್ಷೆ ನಡೆಸುವ ಬಗ್ಗೆ ಕಾರ್ಯಕ್ರಮ ರೂಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next