ಇಸ್ಲಾಮಾಬಾದ್: ಪಾಕಿಸ್ತಾನದ ಸೇನಾಪಡೆಗಳ ಮುಖ್ಯಸ್ಥ ಖಮರ್ ಜಾವೇದ್ ಬಾಜ್ವಾ ಇಕ್ಕಟ್ಟಿಗೆ ಸಿಲುಕಿದ್ದಾರೆಯೇ? ಅವರು ಅಭದ್ರತೆಯನ್ನೆದುರಿಸುತ್ತಿದ್ದಾರೆಯೇ? ಹೀಗೊಂದು ಸಂದೇಹಗಳು ಪಾಕ್ ಸೇನಾಪಡೆಗಳೊಳಗೆಯೇ ಶುರುವಾಗಿದೆ. ಅವರು ಕೇವಲ 7 ವಾರಗಳ ಅವಧಿಯಲ್ಲಿ ಅಸಹಜವಾಗಿ ಎರಡು ಎಫ್ಸಿಸಿ (ಫಾರ್ಮೇಶನ್ ಕಮ್ಯಾಂಡರ್ಸ್ ಕಾನ್ಫರೆನ್ಸ್) ಸಭೆಗಳನ್ನು ಕರೆದಿರುವುದೇ ಇದಕ್ಕೆ ಕಾರಣ. ಇದಕ್ಕೆ ಕಾರಣವೇನೆಂದು ಗೊತ್ತಾಗಿಲ್ಲ.
ವಾಸ್ತವವಾಗಿ ಪಾಕ್ ರಚನೆಯಾಗಿ 1947ರಿಂದ 2022 ಮಾರ್ಚ್ ನಡುವೆ ಸೇನೆ 78 ಎಫ್ ಸಿಸಿ ಗಳನ್ನು ಕರೆದಿದೆ. ಇದು ವರ್ಷಕ್ಕೊಮ್ಮೆ ನಡೆಯುವ ಸೇನಾಸಭೆ, ಆದ್ದರಿಂದ 75 ಸಭೆಗಳು ಮಾಮೂಲಿ. ಈ ಹಿಂದೊಮ್ಮೆ ಯುದ್ಧದ ಸಮಯದಲ್ಲಿ ವಿಶೇಷವಾಗಿ ಎರಡು ಎಫ್ ಸಿಸಿ ಗಳನ್ನು ಕರೆಯಲಾಗಿದೆ.
ಒಟ್ಟಾರೆ ಸಭೆಗಳ ಸಂಖ್ಯೆ 78 ಆಗಬೇಕಿತ್ತು. ಆದರೆ ಅದು 80ಕ್ಕೇರಿದೆ! ಇದಕ್ಕೆ ಕಾರಣ ಏಪ್ರಿಲ್ 12 ಮತ್ತು ಜೂ.8ಕ್ಕೆ ದಿಢೀರನೆ ಇನ್ನೆರಡು ಎಫ್ ಸಿಸಿ ಗಳನ್ನು ಕರೆದಿರುವುದು.
ಕಾರಣವೇನಿರಬಹುದು?: ಜೂ.6ರಂದು ಮಾಜಿ ಸೇನಾಧಿಕಾರಿಗಳ ಸಭೆ ನಡೆದಿದೆ. ಈ ಸಭೆಯಲ್ಲಿ, ಮಾಜಿ ಪ್ರಧಾನಿ ಇಮ್ರಾನ್ ಖಾನ್ ಪದಚ್ಯುತಿಯಲ್ಲಿ ಬಾಜ್ವಾ ಕೈಯಾಡಿಸಿದ್ದಾರೆ, ಅವರು ದುರಹಂಕಾರ ಮಾಡುತ್ತಿದ್ದಾರೆಂದು ಆರೋಪಿಸಲಾಗಿದೆ. ಪಾಕ್‌ನ ನಿವೃತ್ತ ಸೇನಾಧಿಕಾರಿಯೊಬ್ಬರ ಪ್ರಕಾರ ಇದೊಂದು ಅಸಹಜ ಬೆಳವಣಿಗೆ, ಇಲ್ಲಿ ಬೇರೇನೋ ನಡೆಯುತ್ತಿದೆ ಎಂದಿದ್ದಾರೆ.