Advertisement

ನೇಜಿ ನಾಟಿಗೆ ಗಂಗಾವತಿಯ ಕೃಷಿ ಕಾರ್ಮಿಕರು

10:05 AM Jul 30, 2018 | |

ಬಜಪೆ: ಮಳೆಯಿಂದಾಗಿ ಜಿಲ್ಲೆಯಲ್ಲಿ ಭತ್ತ ಬೇಸಾಯಕ್ಕೆ ಅಪಾರ ಹಾನಿಯಾಗಿದ್ದರೂ ಕಳೆದ ಒಂದು ವಾರದಿಂದ ಮಳೆ ಕೊಂಚ ಕಡಿಮೆಯಾಗಿದ್ದರಿಂದ ಕೃಷಿ ಚಟುವಟಿಕೆ ಬಿರುಸು ಗೊಂಡಿದೆ. ಈ ನಡುವೆ ಕೃಷಿ ಕಾರ್ಮಿಕರ ಕೊರತೆ ಎದುರಾಗಬಹುದು ಎಂಬ ಆತಂಕದಲ್ಲಿದ್ದ ರೈತರಿಗೆ ನೆರವಾಗಲು ಗಂಗಾವತಿಯ ಕಾರ್ಮಿಕ ತಂಡ ಬಂದಿದೆ.

Advertisement

125 ಕಾರ್ಮಿಕರು
ನೇಜಿ ನಾಟಿಗೆ ಕೊಪ್ಪಳದ ಗಂಗಾವತಿ ಪರಿಸರದ ಸುಮಾರು 125 ಕೃಷಿ ಕಾರ್ಮಿಕರ ಪಡೆ ಜೂ. 28ರಂದು ಜಿಲ್ಲೆಗೆ ಆಗಮಿಸಿದೆ. ಈ ತಂಡದಲ್ಲಿ 4 ಮಂದಿ ಮೇಸ್ತ್ರಿ (ಮೇಲ್ವಿಚಾರಕರು)ಗಳಿದ್ದಾರೆ. 15 ಕಾರ್ಮಿಕರ ಒಂದು ತಂಡ ಮಾಡಿ ಒಟ್ಟು 8 ತಂಡಗಳು ತಾಲೂಕಿನದ್ಯಾಂತ ಭತ್ತದ ನಾಟಿ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ನಾಟಿ ಮಾಡುವ ಕೃಷಿ ಕಾರ್ಮಿಕ ರಲ್ಲಿ ಮಹಿಳೆಯರೇ ಅಧಿಕ ಸಂಖ್ಯೆಯಲ್ಲಿದ್ದಾರೆ.

50 ಎಕರೆ ಭತ್ತದ ನಾಟಿ
ಈ ತಂಡ ಈಗಾಗಲೇ ಮಂಗಳೂರು ತಾಲೂಕಿನ 50 ಎಕ್ರೆ ಭತ್ತದ ನಾಟಿಯನ್ನು ಮಾಡಿ ಮುಗಿಸಿದೆ. 8ದಿನಗಳಲ್ಲಿ 29 ಎಕ್ರೆ ಭತ್ತದ ನಾಟಿ ಮಾಡಿದೆ. ಕೆಲವು ಕೃಷಿ ಕಾರ್ಮಿಕರು ಸರಕಾರದ ವತಿ ಯಿಂದ ಮನೆ ನಿರ್ಮಾಣ ಕಾರ್ಯನಿಮಿತ್ತ ಊರಿಗೆ ತೆರಳಿದ್ದಾರೆ. ಬಳಿಕ 7 ಮಂದಿಯ ತಂಡಗಳು 9 ದಿನಗಳಲ್ಲಿ 21 ಎಕರೆ ಜಾಗ ನಾಟಿ ಮಾಡಿದೆ.

ಒಂದು ಎಕ್ರೆ ಜಾಗ ನಾಟಿಗೆ 4 ಸಾವಿರ ರೂ.
ಒಂದು ಎಕ್ರೆ ಜಾಗ ನಾಟಿ ಕಾರ್ಯಕ್ಕೆ ಒಟ್ಟು 4,000 ರೂ. ಮಾಜೂರಿಯಾಗುತ್ತದೆ. ಅವರಿಗೆ ಚಹಾ ಕೊಟ್ಟರೆ ಸಾಕು. ಇದರಿಂದ ಇಲ್ಲಿನ ರೈತರು ಈ ತಂಡದಿಂದ ಭತ್ತದ ನಾಟಿ ಮಾಡಿಸಲು ಮುಂದಾಗಿದ್ದಾರೆ. ಇಲ್ಲಿನ 22ಮಂದಿ ಕೃಷಿ ಕಾರ್ಮಿಕರು ದಿನಕ್ಕೆ ಒಂದು ಎಕ್ರೆ ಜಾಗ ನಾಟಿ ಮಾಡುತ್ತಾರೆ. ಅವರಿಗೆ ದಿನಕ್ಕೆ 350 ರೂಪಾಯಿ ಮಜೂರಿ ಮತ್ತು ಊಟ, 2 ಬಾರಿ ಚಹಾ ನೀಡಬೇಕು. ಒಟ್ಟು ಎಕರೆಗೆ ಸುಮಾರು 7,500 ರೂಪಾಯಿ ಮಜೂರಿಯಾ ಗುತ್ತದೆ. ಈಗ ಇಲ್ಲಿ ಕೃಷಿ ಕಾರ್ಮಿಕರೇ ಸಿಗುತ್ತಿಲ್ಲ ಎನ್ನುತ್ತಾರೆ ರೈತರು. ಗಂಗಾವತಿಯ ಈ 7 ಮಂದಿಯ ತಂಡ ಒಂದು ದಿನ 2 ಎಕರೆ ಜಾಗ ನಾಟಿ ಮಾಡುತ್ತದೆ. ಅವರಿಗೆ ಸಮಯವೂ ನಿಗದಿ ಇಲ್ಲ. ಬೆಳಗ್ಗೆ ಬೇಗ ಬರುತ್ತಾರೆ.

ರೈತರಲ್ಲಿ ತೃಪ್ತಿ
ಕೃಷಿ ಕಾರ್ಮಿಕರನ್ನು ಹುಡುಕುವ ಚಿಂತೆ ಈಗ ರೈತರಿಗಿಲ್ಲ. ಈಗಾಗಲೇ ಈ ತಂಡ ಎಲ್ಲೆಡೆ ನಾಟಿ ಮಾಡಲು ಸಿದ್ಧವಾಗಿದೆ. ಭತ್ತದ ನಾಟಿಯಲ್ಲಿ ಕೊಂಚ ಬದಲಾವಣೆ ಇದ್ದರೂ ಇಲ್ಲಿನ ರೈತರಿಗೆ ತೃಪ್ತಿ ತಂದಿದೆ.

Advertisement

ಯಂತ್ರದ ಮೂಲಕ ಕಟಾವು
3.5 ಎಕ್ರೆ ಭತ್ತ ಬಿತ್ತನೆ ಮಾಡಿದ್ದೇವು. 2.5 ಎಕ್ರೆ ಜಾಗದ ಬಿತ್ತನೆ ನೆರೆಯಿಂದ ಕೊಚ್ಚಿ ಹೋಗಿ ನಷ್ಟವಾಗಿದೆ. ಭತ್ತ ನಾಟಿ ಮಾಡುವ ಕಾರ್ಯ ತುರ್ತು ಆಗಬೇಕಾಗಿದೆ. ಕಳೆದ ಬಾರಿ ಮುಂಗಾರು ಹಾಗೂ ಹಿಂಗಾರು ಬೆಳೆಗೆ ನಾಟಿ ಮಾಡಲು ಇವರನ್ನು ಕರೆಸಲಾಗಿತ್ತು. ಮೊಹಂತೇಷ್‌ ಎಂಬವರು ಈ ತಂಡವನ್ನು ಇಲ್ಲಿಗೆ ಕಳುಹಿಸಿದ್ದಾರೆ. ಅವರೇ ಕಟಾವು ಯಂತ್ರ ತಂದು ಕಟಾವು ಮಾಡಿ ಕೊಡುತ್ತಿದ್ದಾರೆ. ಇದರಿಂದ ನಮಗೆ ಕೃಷಿ ಕಾರ್ಯಕ್ಕೆ ತೊಂದರೆಯಾಗಿಲ್ಲ.  
– ಸದಾನಂದ ಮೊಯಿಲಿ
ಗಾಣದಕೊಟ್ಟೆ, ಕೃಷಿಕ, ಎಕ್ಕಾರು

ಹಲವೆಡೆ ನಾಟಿ ಕಾರ್ಯ
ಈ ಅವಧಿಯಲ್ಲಿ ಕೊಪ್ಪಳದಲ್ಲಿ ಗಂಡಸರಿಗೆ ಮಾತ್ರ ಕೆಲಸವಿರುತ್ತದೆ. ಹೆಂಗಸರಿಗೆ ಕೆಲಸ ಕಡಿಮೆ. ಗದ್ದೆಯಲ್ಲಿ ಗಂಡಸರು ಕೆಲಸ ಮಾಡಿರುತ್ತಾರೆ. ಅಲ್ಲಿ ಹೆಚ್ಚಾಗಿ ಒಣ ಬೇಸಾಯ. ಸ್ವಲ್ಪ ಮಳೆ ಬಂದಿದೆ. ಈಗಾಗಲೇ ಒಮ್ಮೆ ಉಳುಮೆ ಮಾಡಿ ಇಲ್ಲಿ ಬಂದಿದ್ದೇವೆ. ಕಳೆದ ಬಾರಿಯೂ ಇಲ್ಲಿ ನಾಟಿ ಮಾಡಲು ಬಂದಿದ್ದೆವು. ಏಳಿಂಜೆಯಲ್ಲಿ ಈಗ ವಾಸವಾಗಿದ್ದೀವೆ. ಈ ಪರಿಸರದ ಹಲವು ಊರಿನಲ್ಲಿ ಈಗಾಗಲೇ ನಾಟಿ ಕಾರ್ಯ ಮುಗಿಸಿದ್ದೇವೆ.
– ರಾಮನ್‌, ತಂಡದ ಮೇಸ್ತ್ರಿ 

 ಸುಬ್ರಾಯ ನಾಯಕ್‌ ಎಕ್ಕಾರು

Advertisement

Udayavani is now on Telegram. Click here to join our channel and stay updated with the latest news.

Next