Advertisement

ರೈತರ ಏಳ್ಗೆಗೆ ಹತ್ತಾರು ಯೋಜನೆ

05:33 PM Apr 06, 2022 | Team Udayavani |

ಲಕ್ಷ್ಮೇಶ್ವರ: ಸಕಲ ಜೀವರಾಶಿಗಳಿಗೆ ಅನ್ನ ನೀಡುವ ರೈತ ದೇಶದ ಬೆನ್ನೆಲುಬು. ರೈತರ ಏಳ್ಗೆ, ಶ್ರೇಯೋಭಿವೃದ್ಧಿಗಾಗಿ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು ರೈತಪರ ಚಿಂತನೆಯೊಂದಿಗೆ ಹತ್ತಾರು ಪೂರಕ ಯೋಜನೆ, ಸೌಲಭ್ಯಗಳನ್ನು ಕಲ್ಪಿಸುತ್ತಿವೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

Advertisement

ಮಂಗಳವಾರ ಪಟ್ಟಣದ ಸೋಮೇಶ್ವರ ದೇವಸ್ಥಾನದ ಮಹಾದ್ವಾರ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಬಿಎಸ್ಸಿ ಓದುವ ರೈತರ ಮಕ್ಕಳಿಗೆ ಶೇ.50 ರಿಸರ್ವೆಶನ್‌ ಮಾಡಿದೆ. ಪಿಎಂ ಕಿಸಾನ್‌ ಯೋಜನೆಯಡಿ ಕೇಂದ್ರ ಸರ್ಕಾರ ಒಂದು ವರ್ಷಕ್ಕೆ 6 ಸಾವಿರ ಮತ್ತು ರಾಜ್ಯ ಸರ್ಕಾರ 4 ಸೇರಿ ಒಟ್ಟು 10 ಸಾವಿರ ರೂ. ನೀಡುತ್ತಿವೆ. ಜಾತಿ, ಧರ್ಮ ಏಣಿಸದೇ ಎಲ್ಲ ಜಾತಿಯ ರೈತ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ದೇಶದಲ್ಲಿಯೇ
ಮೊದಲು ರೈತ ವಿದ್ಯಾನಿ ಧಿ ಯೋಜನೆ ರೂಪಿಸಿದೆ ಎಂದರು.

ಶೇ.90 ರಿಯಾಯಿತಿ ದರದಲ್ಲಿ ನೀರಾವರಿ ಮತ್ತು ಖುಷ್ಕಿ ಜಮೀನಿನ ರೈತರಿಗೆ ಕೃಷಿ ಯಂತ್ರೋಪಕರಣ, ಸಹಾಯ ಧನದಡಿ ಬೀಜ-ಗೊಬ್ಬರ, ಸಣ್ಣ ರೈತರಿಗೆ ಡೀಸೆಲ್‌ ಸಬ್ಸಿಡಿ ಸೇರಿ ಅನೇಕ ರೈತಪರ ಯೋಜನೆಗಳನ್ನು ನೀಡಲಾಗುತ್ತಿದೆ. ಮಳೆ,ಚಳಿ, ಗಾಳಿ, ಬಿಸಿಲೆನ್ನದೇ ಲಾಭ-ನಷ್ಟದ ಲೆಕ್ಕ ಮರೆತು ಜಗತ್ತಿಗೆ ಅನ್ನ ನೀಡುವ ಅನ್ನದಾತರ ಕಷ್ಟಗಳಿಗೆ ಸ್ಪಂದಿಸುವ ಮತ್ತು ಅವರ ಕಣ್ಣೀರೊರೆಸುವ ಉದ್ದೇಶದಿಂದ ಕೃಷಿ ಇಲಾಖೆಯನ್ನು ಬೇಡಿ ಪಡೆದು ಆ ನಿಟ್ಟಿನಲ್ಲಿ ರೈತನ
ಮಗನಾಗಿ ಕೈಲಾದ ಮಟ್ಟಿಗೆ ಕಾರ್ಯ ಮಾಡುತ್ತಿದ್ದೇನೆ ಎಂಬ ಆತ್ಮ ಸಂತೃಪ್ತಿ ತಮ್ಮದಾಗಿದೆ ಎಂದರು.

“ಒಕ್ಕಲಿಗ ಒಕ್ಕದಿರೆ ಬಿಕ್ಕುವುದು ಜಗವೆಲ್ಲ-ಒಕ್ಕಲಿಗ ಒಕ್ಕಿದರೆ ಮಾತ್ರ ಉಕ್ಕುವುದು ಜಗವು’ ಎಂಬ ಸರ್ವಜ್ಞರ ವಾಣಿ ಸೂರ್ಯ ಚಂದ್ರರಷ್ಟೇ ಸತ್ಯ. ಜಗತ್ತಿನ ಶ್ರೀಮಂತರಿಗೆ ಈ ಮನುಕುಲಕ್ಕೆ ಅನ್ನ ನೀಡುವ ಶಕ್ತಿಯಿಲ್ಲ. ಅದಿರುವುದು ರೈತರಿಗೆ ಮಾತ್ರ. ಆ ಕಾರಣದಿಂದಲೇ ರೈತನಿಗೆ ಪ್ರಥಮ ನಮನ. ಈ ನಡುವೆಯೂ ಅತಿವೃಷ್ಟಿ, ಅನಾವೃಷ್ಟಿ, ಹವಾಮಾನ ವೈಪರೀತ್ಯ, ರೋಗಬಾಧೆ ಹೀಗೆ ರೈತರಿಗೆ ಒಂದಿಲ್ಲೊಂದು ಸಮಸ್ಯೆ ತಪ್ಪುತ್ತಿಲ್ಲ. ಈ ಸತ್ಯವನ್ನರಿತು ತಾನೊಬ್ಬ ರೈತನ ಮಗನಾಗಿ ತನ್ನ ಕೈಲಾದಷ್ಟು ರೈತ ಕಣ್ಣೀರೊರೆಸುವ ಕಾರ್ಯ ಮಾಡುವ ಉದ್ದೇಶದಿಂದಲೇ ಕೃಷಿ ಸಚಿವಗಿರಿ ಪಡೆದಿದ್ದೇನೆ.

ತಾನು ಕೃಷಿ ಸಚಿವನಾಗಿ ಅಧಿ ಕಾರ ಸ್ವೀಕಾರ ಮಾಡಿದ ದಿನದಿಂದ ಯಾವುದೇ ಫೋನ್‌ ಬಂದರೂ ಜೈ ಕಿಸಾನ್‌ ಎನ್ನುತ್ತಲೇ ಫೋನ್‌ ರಿಸೀವ್‌ ಮಾಡುತ್ತೇನೆ ಎಂದು ತಮ್ಮ ಭಾಷಣದುದ್ದಕ್ಕೂ ರೈತರ ಗುಣಗಾನ ಮಾಡಿದರು.

Advertisement

ರೈತರ ಬೇಕು-ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದು ಪರಿಹಾರ ಕಲ್ಪಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಪುಲಿಗೆರೆ ಉತ್ಸವ ಆರಂಭ ಮಾಡಿ ಶಾಸಕರೊಡಗೂಡಿ ಸರ್ಕಾರದಿಂದ ಸಿಗುವ ಸಹಾಯಧನ ಕಲ್ಪಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇನೆ. ಸೋಮೇಶ್ವರನ ದೊಡ್ಡ ಸಂಖ್ಯೆಯ ಭಕ್ತರು ಮನಸ್ಸು ಮಾಡಿದರೆ ಏನೆಲ್ಲ ಕಾರ್ಯಗ ಳನ್ನು ಮಾಡಬಹುದು. “ಧರ್ಮೋ ರಕ್ಷತಿ ರಕ್ಷಿತಃ’ ಎನ್ನುವಂತೆ ಧರ್ಮ ಕಾರ್ಯಗಳಿಂದ ಉತ್ತಮ ಫಲ ಪ್ರಾಪ್ತಿಯಾಗುತ್ತದೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ದಿನೇ ದಿನೆ ಅವನತಿಯತ್ತ ಸಾಗುತ್ತಿದೆ. ಅಸ್ಥಿತ್ವ ಇದೇ ಎಂದು ಸಾಬೀತುಪಡಿಸಲು ಸುಳ್ಳು ಆರೋಪ, ವಿರೋಧ ಮಾಡುತ್ತಿದೆ ಎಂದರು. ಶಾಸಕ ರಾಮಣ್ಣ ಲಮಾಣಿ ಮಾತನಾಡಿ, ಕ್ಷೇತ್ರದಲ್ಲಿನ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಸರ್ಕಾರ ಮತ್ತು ಸ್ವಂತ ಅನುದಾನ ಕಲ್ಪಿಸಿದ್ದೇನೆ. ಪಟ್ಟಣ ಸೇರಿ ಗ್ರಾಮೀಣ ಪ್ರದೇಶಗಳ ರಸ್ತೆ ಅಭಿವೃದ್ಧಿ, ಮೂಲಭೂತ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಶಕ್ತಿಮೀರಿ ಪ್ರಯತ್ನ ಮಾಡುತ್ತೇನೆ. ನಾಡಿನಲ್ಲಿಯೇ ಪ್ರಸಿದ್ಧವಾದ
ಸೋಮೇಶ್ವರ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳಿಗೆ ಅಗತ್ಯ ಸಂಪನ್ಮೂಲ ಕಲ್ಪಿಸುತ್ತೇನೆ.

ಈಭಾಗದ ಭಕ್ತರ ಬಹಳಷ್ಟು ವರ್ಷಗಳ ಬೇಡಿಕೆಯಾದ ಸೋಮೇಶ್ವರ ದೇವಸ್ಥಾನದ ದ್ವಾರಬಾಗಿಲ ನಿರ್ಮಾಣ ಆ ದೇವರ ಅಣತಿಯಂತೆ ಮಾಡಿದ್ದೇನೆ. ನಾನು
ಮಾತನಾಡುವುದಕ್ಕಿಂತ ಕೆಲಸ ಮಾಡಿ ಜನರ ಮನ ಗೆದ್ದಿದ್ದೇನೆ ಮತ್ತು ಮುಂದೆಯೂ ಗೆಲ್ಲುತ್ತೇನೆ ಎಂದರು. ಮಾಜಿ ಶಾಸಕ ಜಿ.ಎಂ. ಮಹಾಂತಶೆಟ್ಟರ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಜನಪರ ಆಡಳಿತದಿಂದ ಜನ ಮೆಚ್ಚುಗೆ ಗಳಿಸಿದೆ. ಮುಕ್ತಿಮಂದಿರ ಮತ್ತು ಸೋಮೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಎಲ್ಲರೂ ಶ್ರಮಿಸೋಣ ಎಂದರು.

ಮಹಾದ್ವಾರ ನಿರ್ಮಾಣ ಸಮಿತಿ ಅಧ್ಯಕ್ಷ ಸೋಮಣ್ಣ ಮುಳಗುಂದ ಮಾತನಾಡಿ, ಪುಲಿಗೆರೆಯ ಆರಾಧ್ಯ ದೈವ ಸೋಮೇಶ್ವರ ದೇವಸ್ಥಾನದ ಉತ್ತರದ್ವಾರ ಅಭಿವೃದ್ಧಿ, ಯಾತ್ರಿನಿವಾಸ, ಮೂಲಭೂತ ಸೌಲಭ್ಯ ಕಲ್ಪಿಸಬೇಕು ಮತ್ತು ಪ್ರತಿ ವರ್ಷ ಪುಲಿಗೆರೆ ಉತ್ಸವ ಸರ್ಕಾರದಿಂದಲೇ ಆಚರಣೆಯಾಗಬೇಕು ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಸರ್ಕಾರದ ಗಮನ ಸೆಳೆಯಬೇಕೆಂದರು. ಅಧ್ಯಕ್ಷತೆ ವಹಿಸಿದ್ದ ಪುರಸಭೆ ಅಧ್ಯಕ್ಷೆ ಅಶ್ವಿ‌ನಿ ಅಂಕಲಕೋಟಿ
ಮಾತನಾಡಿದರು.

ಸಾನಿಧ್ಯ ವಹಿಸಿದ್ದ ಬಾಳೇಹೊನ್ನೂರು ಶ್ರೀ ರಂಭಾಪುರಿ ಡಾ| ವೀರಸೋಮೇಶ್ವರ ಜಗದ್ಗುರುಗಳು ಆಶೀರ್ವಚನ ನೀಡಿ, ದೇವಸ್ಥಾನಗಳು ನಮ್ಮ ಸಂಸ್ಕೃತಿ ಪ್ರತೀಕವಾಗಿವೆ. ನಮ್ಮ ದೇಶದ ಸಂಸ್ಕೃತಿ, ಇತಿಹಾಸ, ಪರಂಪರೆ, ಆಚರಣೆ, ಮೌಲ್ಯ, ಸನ್ಮಾರ್ಗ ತೋರುವ ಭಕ್ತಿ-ಶಕ್ತಿ ಕೇಂದ್ರಗಳ ಅಭಿವೃದ್ಧಿಗೆ ಸರ್ಕಾರಗಳು ಹೆಚ್ಚಿನ ಮುತುವರ್ಜಿ ವಹಿಸುತ್ತಿರುವುದು ಸಂತಸದ ಸಂಗತಿ.

ಸತ್ಯ, ನ್ಯಾಯ, ನೀತಿ, ಧರ್ಮದ ಪರ, ರೈತಪರ, ಜನಪರ ಆಡಳಿತದಿಂದ ಸರ್ಕಾರಗಳು ಸುರಕ್ಷಿತವಾಗಿರಲಿವೆ. ಲಿಂ.ವೀರಗಂಗಾಧರ ಜಗದ್ಗುರುಗಳಿಗೆ ಲಕ್ಷ್ಮೇಶ್ವರ ಮತ್ತು ಇಲ್ಲಿನ ಸೋಮೇಶ್ವರ ದೇವಸ್ಥಾನದ ಬಗ್ಗೆ ಸಾಕಷ್ಟು ಗೌರವವಿತ್ತು. ಅವರ ಸಂಕಲ್ಪ ಈಡೇರಿಕೆಗಾಗಿ ಮುಕ್ತಿಮಂದಿರದಲ್ಲಿ ಕೈಗೆತ್ತಿಕೊಂಡಿರುವ ತ್ರಿಕೋಟಿ ಶಿವಲಿಂಗ ಪ್ರತಿಷ್ಠಾಪನಾ ಕಾರ್ಯಕ್ಕೆ ಭಕ್ತರು ತನು ಮನ ಧನ ಸೇವೆ ಸಲ್ಲಿಸಬೇಕೆಂದರು. ನೇತೃತ್ವ ವಹಿಸಿದ್ದ ಮುಕ್ತಿಮಂದಿರ ಧರ್ಮಕ್ಷೇತ್ರದ
ಪಟ್ಟಾಧ್ಯಕ್ಷರಾದ ಶ್ರೀ ವಿಮಲರೇಣುಕ ವೀರಮುಕ್ತಿ ಮುನಿ ಶಿವಾಚಾರ್ಯರು ಆಶೀರ್ವಚನ ನೀಡಿದರು.

ವೇದಿಕೆಯ ಮೇಲೆ ದೇವಸ್ಥಾನ ಭಕ್ತರ ಕಮೀಟಿ ಅಧ್ಯಕ್ಷ ಚಂಬಣ್ಣ ಬಾಳಿಕಾಯಿ, ಜಾತ್ರಾ ಕಮಿಟಿ ಅಧ್ಯಕ್ಷ ಕುಬೇರಪ್ಪ ಮಹಾಂತಶೆಟ್ಟರ, ಅರ್ಚಕರ ಸಮಿತಿ ಅಧ್ಯಕ್ಷ ವಿ.ಎಲ್‌. ಪೂಜಾರ, ಮುಂಡರಗಿ ಪುರಸಭೆ ಅಧ್ಯಕ್ಷೆ ಕವಿತಾ ಉಳ್ಳಾಗಡ್ಡಿ, ಉಪಾಧ್ಯಕ್ಷೆ ಮಂಜವ್ವ ನಂದೆಣ್ಣವರ, ಶಾಸಕ ರಾಮಣ್ಣ ಲಮಾಣಿ ಅವರ ಪತ್ನಿ ಈರಮ್ಮ ಲಮಾಣಿ, ಮಹೇಶ ಲಮಾಣಿ, ಆನಂದ ಮೆಕ್ಕಿ, ಸುರೇಶ ರಾಚನಾಯ್ಕರ, ಶಿವಯೋಗಿ ಅಂಕಲಕೋಟಿ, ಸಿದ್ದನಗೌಡ ಬಳ್ಳೊಳ್ಳಿ, ರುದ್ರಪ್ಪ ನೆರೆಗಲ್‌, ರಾಜಶೇಖರ ಶಿಗ್ಲಿಮಠ, ಬಸವರಾಜ ಮೆಣಸಿನಕಾಯಿ, ಸುರೇಶ ರಾಚನಾಯ್ಕರ, ಈರಣ್ಣ ಆದಿ, ಜಿಲ್ಲಾ ಉಪವಿಭಾಗಾ ಧಿಕಾರಿ ರಾಯಪ್ಪ ಹುಣಸಗಿ, ಜಂಟೀ ಕೃಷಿ ನಿರ್ದೇಶಕ ಜಿಯಾವುಲ್ಲಾ ಕೆ, ಪುರಸಭೆ ಸರ್ವ ಸದಸ್ಯರು, ಅ ಕಾರಿವರ್ಗ, ಸಿಬ್ಬಂದಿ, ಗಣ್ಯರು, ದೇವಸ್ಥಾನ ಕಮಿಟಿ, ಸಂಘಟನೆಯವರು ಇತರರು ಪಾಲ್ಗೊಂಡಿದ್ದರು. ಶಿಕ್ಷಕ ಎಸ್‌.ಎಫ್‌. ಆದಿ, ಕು. ರತ್ನಾ ಕುಂಬಾರ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಮಹೇಶ ಹೊಗೆಸೊಪ್ಪಿನ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next