Advertisement
ಏಶ್ಯದ ಆಟಗಾರ್ತಿಯೊಬ್ಬರು ಸತತ 2 ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆದ್ದರೆಂಬುದು ನಂಬಲೇಬೇಕಾದ ವಿದ್ಯಮಾನ. ವರ್ಷಾಂತ್ಯದ ಯುಎಸ್ ಓಪನ್ ಪ್ರಶಸ್ತಿ ಗೆದ್ದು ಮೊದಲ ಗ್ರ್ಯಾನ್‌ಸ್ಲಾಮ್ ಟ್ರೋಫಿಗೆ ಮುತ್ತಿಕ್ಕಿದ ಒಸಾಕಾ, ಈಗ “ಮೆಲ್ಬರ್ನ್ ಪಾರ್ಕ್ ಕ್ವೀನ್’ ಆಗಿಯೂ ಮೆರೆದಾಡಿದರು. ಕೇವಲ ಯುರೋಪಿಯನ್ನರ ಮೆರೆದಾಟಕ್ಕೆ ಮೀಸಲಾಗಿರುವ ಜಾಗತಿಕ ಟೆನಿಸ್‌ನಲ್ಲಿ ಏಶ್ಯನ್ನರೂ ದಿಟ್ಟ ಹೆಜ್ಜೆಗಳನ್ನಿಡುತ್ತಿರುವುದರ ಸೂಚನೆ ಇದೆಂಬುದನ್ನು ಹೆಮ್ಮೆಯಿಂದ ಹೇಳಿಕೊಳ್ಳಬೇಕಿದೆ. ಹಾಗೆಯೇ ಈ ಸಂದರ್ಭದಲ್ಲಿ ಭಾರತದಿಂದ ಯಾರು ಎಂಬ ಪ್ರಶ್ನೆ ಮೂಡುವುದೂ ಸಹಜ.
ಡಬಲ್ಸ್‌ಗಿಂತ ಮಿಗಿಲಾಗಿ ಸಿಂಗಲ್ಸ್ ಪ್ರಶಸ್ತಿ, ಅದರಲ್ಲೂ ಗ್ರ್ಯಾನ್‌ಸ್ಲಾಮ್ ಸಿಂಗಲ್ಸ್ ಚಾಂಪಿಯನ್ ಆಗುವುದರಲ್ಲಿ ಹೆಚ್ಚಿನ ಗರಿಮೆ ಇದೆ. ಕೇವಲ ಮಾರ್ಟಿನಾ ನವ್ರಾಟಿಲೋವಾ, ಸ್ಟೆಫಿ ಗ್ರಾಫ್, ಸೆರೆನಾ ವಿಲಿಯಮ್ಸ್ ಮೊದಲಾದ ಯೂರೋಪ್, ಅಮೆರಿಕದ ಹೆಸರುಗಳೇ ಇಲ್ಲಿ ರಾರಾಜಿಸುತ್ತಿರುವಾಗ ಜಪಾನಿನ ನವೋಮಿ ಒಸಾಕಾ ಹೆಸರು ಹೊಳೆದದ್ದು ಏಶ್ಯನ್ನರಲ್ಲಿ ಸಹಜವಾಗಿಯೇ ರೋಮಾಂಚನವಾಗುತ್ತದೆ. ಏಶ್ಯದ ಮಟ್ಟಿಗೆ ಟೆನಿಸ್ ಪ್ರಾಬಲ್ಯ ಹೊಂದಿರುವ ದೇಶಗಳೆಂದರೆ ಜಪಾನ್, ಚೀನ ಮತ್ತು ಭಾರತ. ಇವುಗಳಲ್ಲಿ ಭಾರತ ಹೊರತುಪಡಿಸಿ ಉಳಿದೆರಡು ದೇಶಗಳಲ್ಲಿ ಗ್ರ್ಯಾನ್‌ಸ್ಲಾಮ್ ಸಿಂಗಲ್ಸ್ ತಾರೆಗಳು ಮೂಡಿಬಂದಿವೆ. ಒಸಾಕಾಗಿಂತ ಮೊದಲು ಚೀನದ ಲೀ ನಾ ಅಮೋಘ ಸಾಧನೆಯೊಂದಿಗೆ ಸುದ್ದಿಯಾಗಿದ್ದರು. 2011ರ ಫ್ರೆಂಚ್ ಓಪನ್ ವನಿತಾ ಸಿಂಗಲ್ಸ್ ಪ್ರಶಸ್ತಿ ಗೆದ್ದ ಲೀ ನಾ ಹೊಸ ಇತಿಹಾಸವನ್ನೇ ಬರೆದರು.
Related Articles
Advertisement
ಭಾರತದವರ ಡಬಲ್ಸ್ ಆಸಕ್ತಿಭಾರತ ಕೂಡ ಟೆನಿಸ್‌ನಲ್ಲಿ ಸಾಕಷ್ಟು ಸುದ್ದಿ ಮಾಡಿರುವ ದೇಶ. ವಿಜಯ್ ಅಮೃತ್‌ರಾಜ್, ಲಿಯಾಂಡರ್ ಪೇಸ್, ಮಹೇಶ್ ಭೂಪತಿ, ಸಾನಿಯಾ ಮಿರ್ಜಾ, ರಾಮನಾಥನ್ ಕೃಷ್ಣನ್ ಅವರೆಲ್ಲ ಏಶ್ಯದ ಟಾಪ್-10 ಟೆನಿಸ್ ಸಾಧಕರ ಯಾದಿಯಲ್ಲಿ ಕಂಡು ಬರುವ ಭಾರತದ ಸಾಧಕರು. ಆದರೆ ಸಿಂಗಲ್ಸ್‌ನಲ್ಲಿ ಅಲ್ಲ. ಜಪಾನ್‌ನಂಥ ಪುಟ್ಟ ದೇಶ ವಿಶ್ವ ಮಟ್ಟದಲ್ಲಿ ಮಿಂಚುತ್ತಿರುವಾಗ ಭಾರತದಿಂದ ಯಾರಾದರೂ ಈ ಎತ್ತರ ತಲುಪಬಾರದಿತ್ತೇ ಎಂಬ ಪ್ರಶ್ನೆ ಕಾಡುವುದು ಸಹಜ. ಭಾರತದ ಆಶಾಕಿರಣಗಳಾಗಿ ಗೋಚರಿಸುತ್ತಿರುವವರಲ್ಲಿ ಅಂಕಿತಾ ರೈನಾ, ಕರ್ಮನ್ ಕೌರ್ ಥಾಂಡಿ ಮಾತ್ರ. ಆದರೆ ಇಬ್ಬರೂ ವಿಶ್ವ ರ್‍ಯಾಂಕಿಂಗ್‌ನಲ್ಲಿ ಇನ್ನೂರರಾಚೆಯ ಸ್ಥಾನದಲ್ಲಿದ್ದಾರೆ. ಭಾರತೀಯ ಟೆನಿಸ್ ಫೆಡರೇಶನ್ ಚಿಗುರು ಪ್ರತಿಭೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದರೂ ಎಲ್ಲರೂ ಡಬಲ್ಸ್‌ನಲ್ಲೇ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಇವರ ಆಸಕ್ತಿ ಸಿಂಗಲ್ಸ್‌ನತ್ತ ಹರಿಯುವುದು ಮುಖ್ಯ.