ಹಾಸ್ಯ ನಟ ಟೆನ್ನಿಸ್ ಕೃಷ್ಣ ಯಾರಿಗೆ ಗೊತ್ತಿಲ್ಲ ಹೇಳಿ. ಟೆನ್ನಿಸ್ ಕೃಷ್ಣ ಅಂದಾಕ್ಷಣ, ನೆನಪಿಗೆ ಬರೋದೇ, “ಅಪ್ಪ ನಂಜಪ್ಪ ಮಗ ಗುಂಜಪ್ಪ’ ಚಿತ್ರದ “ನಂಜಪ್ಪನ ಮಗ ಗುಂಜಪ್ಪ’ ಎಂಬ ಡೈಲಾಗ್. ಇಂದಿಗೂ ಈ ಡೈಲಾಗ್ ಚಾಲ್ತಿಯಲ್ಲಿದೆ ಅನ್ನೋದಾದರೆ ಅದಕ್ಕೆ ಕಾರಣ ಟೆನ್ನಿಸ್ ಕೃಷ್ಣ ಅವರ ನಟನೆ ಮತ್ತು ಪಕ್ಕಾ ಟೈಮಿಂಗ್. ಇಷ್ಟಕ್ಕೂ ಟೆನ್ನಿಸ್‌ಕೃಷ್ಣ ಅವರ ಬಗ್ಗೆ ಇಷ್ಟೊಂದು ಪೀಠಿಕೆ ಯಾಕೆ ಅಂತೀರಾ? ವಿಷಯ ಇರೋದೇ ಇಲ್ಲಿ.
ಸುಮಾರು ಮೂರು ದಶಕಗಳಿಂದಲೂ ಕನ್ನಡ ಚಿತ್ರರಂಗದಲ್ಲಿರುವ ಟೆನ್ನಿಸ್‌ಕೃಷ್ಣ ಈವರೆಗೆ ಸುಮಾರು 350 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಇಷ್ಟು ವರ್ಷದ ಅನುಭವದ ಮೇಲೆ ಅವರೀಗ ಒಂದು ಸಿನಿಮಾ ನಿರ್ದೇಶನ ಮಾಡುವ ತಯಾರಿಯಲ್ಲಿದ್ದಾರೆ. ಹೌದು, ಟೆನ್ನಿಸ್ ಕೃಷ್ಣ ಈಗ ನಿರ್ದೇಶಕರಾಗುತ್ತಿದ್ದಾರೆ. ಆ ಸಿನಿಮಾಗೆ “ಮತ್ತೆ ಮತ್ತೆ’ ಎಂಬ ಟೈಟಲ್ ಇಟ್ಟಿದ್ದಾರೆ. ಆದರೆ, ಆ ಸಿನಿಮಾಗೆ ಅವರು ನಿರ್ದೇಶಕರು ಅನ್ನೋದನ್ನು ಬಿಟ್ಟರೆ, ಉಳಿದ ಯಾವ ಮಾಹಿತಿಯೂ ಇಲ್ಲ.
ಆ ಸಿನಿಮಾದ ಹೀರೋ ಯಾರು, ಕಥೆ ಏನು, ಎತ್ತ ಎಂಬಿತ್ಯಾದಿ ಕುರಿತು ಸ್ವತಃ ಟೆನ್ನಿಸ್ ಕೃಷ್ಣ ಇಷ್ಟರಲ್ಲೇ ಸಂಪೂರ್ಣ ವಿವರ ಕೊಡಲು ಮಾಧ್ಯಮ ಮುಂದೆ ಬರಲಿದ್ದಾರಂತೆ. ಅದೇನೆ ಇರಲಿ, ಈಗಾಗಲೇ ಅದೆಷ್ಟೋ ಹಾಸ್ಯ ಕಲಾವಿದರು ನಿರ್ದೇಶನ ಮಾಡಿದ್ದಾರೆ. ಕೆಲವರು ಗುರುತಿಸಿಕೊಂಡಿರುವುದೂ ಉಂಟು. ಈಗ ಟೆನ್ನಿಸ್ ಕೃಷ್ಣ ಅವರ ಸರದಿ. “ಮತ್ತೆ ಮತ್ತೆ’ ಎಂಬ ಶೀರ್ಷಿಕೆ ನೋಡಿದರೆ ಅದೊಂದು ಪಕ್ಕಾ ಹಾಸ್ಯಮಯ ಸಿನಿಮಾ ಎಂಬುದು ಗೊತ್ತಾಗುತ್ತೆ.
ಬಹುತೇಕ ಸಿನಿಮಾಗಳಲ್ಲಿ ಹಾಸ್ಯಕಲಾವಿದರಾಗಿಯೇ ನಟಿಸಿರುವ ಟೆನ್ನಿಸ್‌ಕೃಷ್ಣ ಒಂದು ದಾಖಲೆ ಮಾಡಿದ್ದಾರೆ. ಅದೇನೆಂದರೆ, ಅವರ ವೃತ್ತಿ ಜೀವನದದಲ್ಲಿ ಇದುವರೆಗೆ ನಟಿಸಿರುವ 350 ಕ್ಕೂ ಹೆಚ್ಚು ಚಿತ್ರಗಳಲ್ಲಿ ಹಾಸ್ಯ ಕಲಾವಿದೆ ರೇಖಾದಾಸ್ ಅವರೊಂದಿಗೆ ನೂರು ಚಿತ್ರಗಳಲ್ಲಿ ಪರದೆ ಹಂಚಿಕೊಂಡಿದ್ದಾರೆ ಅನ್ನೋದೇ ವಿಶೇಷ. ಟೆನ್ನಿಸ್ ಕೃಷ್ಣ ಅವರ ಇನ್ನೊಂದು ವಿಶೇಷವೆಂದರೆ, ಡಾ.ರಾಜ್‌ಕುಮಾರ್ ಅವರ “ಜೀವನ ಚೈತ್ರ’ ಸಿನಿಮಾದಲ್ಲಿ ನಟಿಸಿದ್ದಾರೆ.
ಅದು ಅವರ ಸಿನಿ ಕೆರಿಯರ್‌ನಲ್ಲಿ ಮರೆಯದ ಅನುಭವವಂತೂ ಹೌದು. 1990 ರಲ್ಲಿ “ರಾಜ ಕೆಂಪು ರೋಜ’ ಸಿನಿಮಾ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟ ಟೆನ್ನಿಸ್ ಕೃಷ್ಣ, ನಟನೆಯ ಜತೆಗೆ ಹಾಡನ್ನೂ ಹಾಡಿರುವುದುಂಟು. “ವೀರ ಮದಕರಿ’ ಚಿತ್ರದಲ್ಲಿ ಹಾಡಿದ್ದಾರೆ. ಅದಕ್ಕೂ ಮುನ್ನ, “ಯಾರಿಗೆ ಬೇಡ ದುಡ್ಡು’ ಹಾಗೂ “ನೀಲ ಮೇಘ ಶಾಮ’ ಚಿತ್ರದ ಹಾಡಲ್ಲೂ ದನಿಯಾಗಿದ್ದಾರೆ. ಅದೇನೆ ಇರಲಿ, ಟೆನ್ನಿಸ್ ಕೃಷ್ಣ ಈಗ ನಿರ್ದೇಶಕರಾಗುತ್ತಿದ್ದಾರೆ ಎಂಬುದೇ ಈ ಹೊತ್ತಿನ ವಿಶೇಷ.