Advertisement
ಹರ್ಯಾಣದ ಕರ್ನಲ್ ಎಂಬ ಊರಿನಲ್ಲಿ 1992ರ ನ.23ರಂದು ಸೈನಿ ಜನಿಸಿದರು. ತಂದೆ ಹರ್ಯಾಣ ಸರಕಾರಿ ವ್ಯಾಪ್ತಿಯಲ್ಲಿ ವಾಹನ ಚಾಲಕನಾಗಿ ಕಾರ್ಯ ನಿರ್ವಹಿಸಿದ್ದರು. ನವದೀಪ್ ಆರಂಭದಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಆಡಿಕೊಂಡಿದ್ದರು. 2013ರ ವರೆಗೆ ಯಾವುದೇ ಮಹತ್ವದ ಕೂಟದಲ್ಲಿ ಅವರು ಆಡಿಯೇ ಇರಲಿಲ್ಲ. ಸ್ಥಳೀಯವಾಗಿ ಆಡಿಕೊಂಡು, ದಿನಕ್ಕೆ 200 ರೂ. ಪಡೆದು ಅದರಲ್ಲೇ ತೃಪ್ತರಾಗಿದ್ದರು.
ಸೈನಿ ಅದೃಷ್ಟ ಬದಲಾದದ್ದು 2013ರಲ್ಲಿ. ದಿಲ್ಲಿ ತಂಡದ ಮಾಜಿ ವೇಗದ ಬೌಲರ್ ಸುಮಿತ್ ನರ್ವಾಲ್ ಈ ಎಳೆಯನ ಬೌಲಿಂಗ್ ನೋಡಿದರು. ನವದೀಪ್ ಅವರ ವೇಗವನ್ನು ನೋಡಿ ದಂಗಾಗಿ, ಇದನ್ನು ದಿಲ್ಲಿ ತಂಡದ ಮಾಜಿ ನಾಯಕ ಗೌತಮ್ ಗಂಭೀರ್ ಗಮನಕ್ಕೆ ತಂದರು. ಗಂಭೀರ್ ನೆಟ್‌ನಲ್ಲಿ ಬೌಲಿಂಗ್ ಮಾಡಲು ಸೈನಿಗೆ ಸೂಚಿಸಿದರು. ಅವರ ಕೆಲವು ಎಸೆತಗಳನ್ನು ಎದುರಿಸಲು ಸ್ವತಃ ಗಂಭೀರ್ ಪರದಾಡಿದರು. ತಾವೇ ಒಂದು ಜೊತೆ ಕ್ರಿಕೆಟ್ ಶೂಗಳನ್ನು ಕೊಡಿಸಿದರು. ಅನಂತರ ದಿಲ್ಲಿ ತಂಡದ ನೆಟ್‌ನಲ್ಲಿ ನಿರಂತರವಾಗಿ ಬೌಲಿಂಗ್ ಮಾಡಲು ಸೈನಿಗೆ ಸೂಚಿಸಿದರು. ಆಗಲೇ ಹರ್ಯಾಣದ ಈ ವೇಗದ ಬೌಲರ್‌ನ ವೇಗದ ತಾಕತ್ತು ಅರ್ಥವಾದದ್ದು. 150 ಕಿ.ಮೀ. ವೇಗದಲ್ಲಿ ಚೆಂಡೆಸೆಯಲು ಸಾಧ್ಯವಿದೆ ಎಂದು ಅರಿವಾಗಿದ್ದು. ಗಂಭೀರ್ ಈ ಕ್ರಿಕೆಟಿಗನನ್ನು ಸಂಪೂರ್ಣ ಪ್ರೋತ್ಸಾಹಿಸಿ, ಅವರ ಬೆನ್ನಿಗೆ ನಿಂತರು.
Related Articles
ಕೇವಲ ದಿಲ್ಲಿ ತಂಡದೊಂದಿಗೆ ಕೆಲವೇ ತಿಂಗಳು ನೆಟ್ ಅಭ್ಯಾಸ ನಡೆಸಿದರೂ ಸೈನಿಯನ್ನು ರಣಜಿ ತಂಡಕ್ಕೆ ಆಯ್ಕೆ ಮಾಡುವಂತೆ ಗಂಭೀರ್ ಆಯ್ಕೆ ಮಂಡಳಿಗೆ ಒತ್ತಾಯಿಸಿದರು. ಪರಿಣಾಮ 2013-14ರ ರಣಜಿಯಲ್ಲಿ ಸೈನಿ ರಣಜಿ ಆಡಿದರು. ಅಲ್ಲಿಂದ ಅವರು ಹಿಂತಿರುಗಿ ನೋಡಲೇ ಇಲ್ಲ.
Advertisement
ರಣಜಿ ಕ್ರಿಕೆಟ್ನಲ್ಲಿಬೌಲಿಂಗ್ ಮಿಂಚು
2017 -18ರ ರಣಜಿಯಲ್ಲಿ 34 ವಿಕೆಟ್ ಪಡೆದು ದಿಲ್ಲಿ ಪರ ಗರಿಷ್ಠ ವಿಕೆಟ್ ಸಾಧಕನಾದರು. ಸೆಮಿಫೈನಲ್‌ನಲ್ಲಿ ಅವರ ಬೌಲಿಂಗ್ ಪರಾಕ್ರಮದಿಂದ ಬಂಗಾಲವನ್ನು ಸೋಲಿಸಿ ದಿಲ್ಲಿ ಫೈನಲ್‌ಗೇರಿತು. 2017ರಲ್ಲಿ ಸೈನಿ ಡೆಲ್ಲಿ ಡೇರ್‌ಡೆವಿಲ್ಸ್ ಪರ ಐಪಿಎಲ್‌ಗೆ ಆಯ್ಕೆಯಾದರು. 2018ರಲ್ಲಿ ಆರ್‌ಸಿಬಿಗೆ 3 ಕೋಟಿ ರೂ.ಗೆ ಮಾರಾಟವಾದರು. ಆ ವರ್ಷ ಅವರಿಗೆ ಬೌಲಿಂಗ್ ಮಾಡಲು ಅವಕಾಶ ಸಿಗಲಿಲ್ಲ. 2019ರಲ್ಲಿ ಅವರ ದಾಳಿಗೆ ಚೆನ್ನೈ ಬ್ಯಾಟ್ಸ್‌ಮನ್ ವಾಟ್ಸನ್ ನೆಲಕ್ಕುರುಳಿದರು. ಆರ್‌ಸಿಬಿ ಪರ ಪ್ರಭಾವಿ ಬೌ ಲಿಂಗ್ ಸಾಧನೆ ಮಾಡಿದರು. ಪ್ರಸ್ತುತ ವಿಂಡೀಸ್ ಪ್ರವಾಸದಲ್ಲಿ ಭಾರತ ಎ ಪರ ಆಡಿ, 2ನೇ ಏಕದಿನದಲ್ಲಿ 46 ರನ್ ನೀಡಿ 5 ವಿಕೆಟ್ ಪಡೆದರು. ಪರಿ ಣಾಮ ಭಾರತ ತಂಡಕ್ಕೆ ಕರೆ ಪಡೆದಿದ್ದಾರೆ. ಇನ್ನು ಅಂತಾರಾಷ್ಟ್ರೀಯ ಅಂಗಳದಲ್ಲಿ ಅವರ 150 ಕಿ.ಮೀ. ವೇಗದ “ರುಚಿ’ಯನ್ನು ನೋಡಲು ಬ್ಯಾಟ್ಸ್‌ಮನ್‌ಗಳು ಸಜ್ಜಾಗಬೇಕಿದೆ. ನಾನು ಯಾವಾಗ ಗಂಭೀರ್ ಬಗ್ಗೆ ಮಾತನಾಡಲು ಹೋದರೂ ಭಾವುಕನಾಗುತ್ತೇನೆ. ನಾನು ದಿಲ್ಲಿ ಪರ ಆರಂಭಿಕ ಹಂತದಲ್ಲಿ ಕೆಲವೇ ಪಂದ್ಯಗಳನ್ನಾಡಿದಾಗಲೇ, ನೀವು ಇನ್ನೂ ಕಷ್ಟಪಟ್ಟರೆ ಭಾರತ ತಂಡದ ಪರ ಆಡುತ್ತೀರೆಂದು ಗಂಭೀರ್ ಹೇಳಿದ್ದರು. ನನ್ನ ಶಕ್ತಿಯ ಬಗ್ಗೆ ನನಗಿಂತಲೂ ಅವರಿಗೇ ಹೆಚ್ಚು ಅರಿವಿತ್ತು
-ನವದೀಪ್ ಸೈನಿ