Advertisement

Yakshagana; ತೆಂಕುತಿಟ್ಟಿನ ಹಿರಿಯ ಕಲಾವಿದ ಪೆರುವಾಯಿ ನಾರಾಯಣ ಶೆಟ್ಟರು ಇನ್ನಿಲ್ಲ

11:08 AM Jan 24, 2024 | Team Udayavani |

ವಿಟ್ಲ: ತೆಂಕುತಿಟ್ಟು ಯಕ್ಷಗಾನದ ಹಿರಿಯ ಕಲಾವಿದ ಪೆರುವಾಯಿ ನಾರಾಯಣ ಶೆಟ್ಟಿ ಅವರು ವಯೋಸಹಜ ಅನಾರೋಗ್ಯದಿಂದ ಮಂಗಳವಾರ ರಾತ್ರಿ ನಿಧನರಾಗಿದ್ದಾರೆ. ಬುಧವಾರ ಮಧ್ಯಾಹ್ನ ಮುಡಿಪು ಬಳಿಯ ನಿವಾಸದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

Advertisement

ಯಕ್ಷಗಾನ ಕ್ಷೇತ್ರದಲ್ಲಿ ಮುಂಚೂಣಿಯ ಕಲಾವಿದರಾಗಿ ಐವತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದ ಪೆರುವಾಯಿ ನಾರಾಯಣ ಶೆಟ್ಟಿಯವರು ಜಾಬಾಲಿ, ಅರುಣಾಸುರ, ರಕ್ತಬೀಜ, ಕೌರವ, ಕರ್ಣ, ಅರ್ಜುನ, ಅತಿಕಾಯ, ಇಂದ್ರಜಿತು, ಕೋಟಿ ಚೆನ್ನಯದ ಕೋಟಿ ಮೊದಲಾದ ವೇಷಗಳ ನಿರ್ವಹಣೆಯಲ್ಲಿ “ಪೆರುವಾಯಿ ಶೈಲಿ’ ಎಂಬ ಹೊಸ ಹಾದಿಯನ್ನು ನಿರ್ಮಿಸಿದ ಸಾಧಕ.

ಬಂಟ್ವಾಳ ತಾಲೂಕು ಪೆರುವಾಯಿಯಲ್ಲಿ ಜನಿಸಿದ ನಾರಾಯಣ ಶೆಟ್ಟಿ ಅವರು ಮದನಪ್ಪ ಶೆಟ್ಟಿ ಮತ್ತು ಅಬ್ಬಕ್ಕ ದಂಪತಿಯ ಸುಪುತ್ರ.

ಬಾಲ್ಯ, ಶಿಕ್ಷಣ ಹಾಗೂ ಕಲಾಸೇವೆ ಕುಂಡಾವು, ಧರ್ಮಸ್ಥಳ, ಕರ್ನಾಟಕ, ಪೊಳಲಿ ರಾಜರಾಜೇಶ್ವರಿ ಮೇಳ, ಕದ್ರಿ, ಕುಂಬಳೆ, ಕುಂಟಾರು, ಕಟೀಲು ಹೀಗೆ ವಿವಿಧ ಯಕ್ಷಗಾನ ಮಂಡಳಿಗಳಲ್ಲಿ ತಿರುಗಾಟ ಮಾಡಿದ ಪೆರುವಾಯಿ ನಾರಾಯಣ ಶೆಟ್ಟಿ ಅವರದು ಬಹುದೊಡ್ಡ ಸಾಧನೆ.

ಪೈವಳಿಕೆಯ ದಿ| ಐತಪ್ಪ ಶೆಟ್ಟಿ ಅವರಿಂದ ನಾಟ್ಯಾಭ್ಯಾಸವನ್ನು ಮಾಡಿದ ಅವರು ತಮ್ಮ 12 ನೇ ವಯಸ್ಸಿನಲ್ಲಿಯೇ ರಂಗಪ್ರವೇಶವನ್ನು ಮಾಡಿದ್ದರು. ದಿ| ಅಳಕೆ ರಾಮಯ್ಯ ರೈ ಹಾಗೂ ಕುಡಾಣ ಗೋಪಾಲಕೃಷ್ಣಭಟ್ಟರಿಂದಲೂ ತೆಂಕುತಿಟ್ಟು ಯಕ್ಷಗಾನದ ನಾಟ್ಯಾಭ್ಯಾಸವನ್ನು, ಅಭಿನಯವನ್ನು ಹಾಗೂ ರಂಗತಂತ್ರಗಳನ್ನು ಅಭ್ಯಾಸ ಮಾಡಿಕೊಂಡವರು.

Advertisement

ರಕ್ತಬೀಜ, ಹಿರಣ್ಯಕಷ್ಯಪು, ಕಂಸ, ಸುಂದರರಾವಣ, ಋತುಪರ್ಣ, ಹನೂಮಂತ, ಜಾಬಾಲಿ, ಅರುಣಾಸುರ, ಹಿರಣ್ಯಾಕ್ಷ, ಶಿಶುಪಾಲ ಮುಂತಾದ ಹಲವು ಪಾತ್ರಗಳನ್ನು ಬಹಳ ಪರಿಣಾಮಕಾರಿಯಾಗಿ ರಂಗದಲ್ಲಿ ಬಿಂಬಿಸಿ ಖ್ಯಾತರಾದವರು. ತುಳು ಪ್ರಸಂಗಗಳ ಪಾತ್ರನಿರ್ವಹಣೆಯಲ್ಲೂ ವೈಶಿಷ್ಟ್ಯತೆಯನ್ನು ಮೆರೆದವರು. ಇವರ ಕೋಟಿ, ದೇವುಪೂಂಜ ಮುಂತಾದ ಪಾತ್ರಗಳು ಬಹಳ ಪ್ರಸಿದ್ಧ.

Advertisement

Udayavani is now on Telegram. Click here to join our channel and stay updated with the latest news.

Next