ಮಲ್ಪೆ: ಕ್ಷುಲ್ಲಕ ಕಾರಣಕ್ಕಾಗಿ ಯುವಕನನ್ನು ರಸ್ತೆಯಲ್ಲಿ ಅಡ್ಡಹಾಕಿ ಚೂರಿಯಿಂದ ಇರಿದು ಕೊಲೆಗೈದ ಘಟನೆ ಸೋಮವಾರ ರಾತ್ರಿ ತೆಂಕನಿಡಿಯೂರಿನ ಲಕ್ಷ್ಮೀ ನಗರದಲ್ಲಿ ನಡೆದಿದೆ.
ಲಕ್ಷ್ಮೀ ನಗರದ ಯುವಕ ಯೋಗೀಶ್ ಪೂಜಾರಿ (28) ಕೊಲೆಯಾದ ವ್ಯಕ್ತಿ.
ಈತ ಮೀನುಗಾರಿಕಾ ವೃತ್ತಿ ಮಾಡಿಕೊಂಡಿದ್ದು, ನಿನ್ನೆ ರಾತ್ರಿ ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದಾಗ ಲಕ್ಷ್ಮೀ ನಗರ ಅಡ್ಡ ರಸ್ತೆಯಲ್ಲಿ ಯೋಗೀಶ್ ಗೆ ಅಡ್ಡಗಟ್ಟಿ ಚೂರಿಯಿಂದ ಇರಿದಿದ್ದಾರೆ. ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಲಾಯಿತಾದರೂ, ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾನೆ ಎನ್ನಲಾಗಿದೆ.
ಮೂಲಗಳ ಪ್ರಕಾರ ವರ್ವಾಡಿ ಪ್ರವೀಣ್ ಹತ್ಯೆ ಆರೋಪಿಗಳಾದ ಸುಜಿತ್ ಪಿಂಟೋ ಸಹಚರರು ಈ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.
ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಗಳ ಶೋಧ ಕಾರ್ಯ ನಡೆಯುತ್ತಿದೆ.