ಬೀಜಿಂಗ್/ಸಿಯೋಲ್: ಕೊರೊನಾ ವೈರಸ್ ಭೀತಿಯು ಈಗ ಸ್ಪೇನ್‌ನ ಮ್ಯಾಡ್ರಿಡ್‌ನಲ್ಲಿ ಇಡೀ ಹೊಟೇಲ್‌ವೊಂದನ್ನೇ ನಿಗಾ ಕೇಂದ್ರವನ್ನಾಗಿಸಿದೆ. ಇಲ್ಲಿನ ಟೆನೆರೈಫ್ ಹೊಟೇಲ್‌ನಲ್ಲಿದ್ದ ಇಟಲಿ ಪ್ರವಾಸಿಗನೊಬ್ಬನಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ, ಹೊಟೇಲ್‌ನಲ್ಲಿನ ಎಲ್ಲ ಪ್ರವಾಸಿಗರನ್ನೂ ಲಾಕ್‌ಡೌನ್ ಮಾಡಲಾಗಿದೆ.
ಯಾವೊಬ್ಬರೂ ತಮ್ಮ ಕೊಠಡಿಗಳಿಂದ ಹೊರ ಬರುವಂತಿಲ್ಲ ಎಂದು ಕಟ್ಟಪ್ಪಣೆ ಮಾಡಲಾಗಿದ್ದು, ಒಳಗಿರುವ ಪ್ರವಾಸಿಗರು ಆತಂಕಕ್ಕೊಳಗಾಗಿದ್ದಾರೆ. ಈ ಹೊಟೇಲ್‌ನಲ್ಲಿ ಒಟ್ಟು 467 ಕೊಠಡಿಗಳಿವೆ. ಇಲ್ಲಿ ಫೆಬ್ರವರಿ ತಿಂಗಳಲ್ಲಿ ನಡೆಯುವ ವಾರ್ಷಿಕ ಸಾಂಪ್ರದಾಯಿಕ ಉತ್ಸವವೊಂದನ್ನು ಕಣ್ತುಂಬಿಕೊಳ್ಳಲೆಂದು ಭಾರೀ ಸಂಖ್ಯೆಯ ಪ್ರವಾಸಿಗರು ಕೆನರಿ ದ್ವೀಪಕ್ಕೆ ಆಗಮಿಸಿದ್ದು, ಹೊಟೇಲ್‌ನ ಎಲ್ಲ ಕೊಠಡಿಗಳೂ ಭರ್ತಿಯಾಗಿವೆ. ಹೀಗಾಗಿ, ಕೊರೊನಾ ವ್ಯಾಪಿಸಿರುವ ಸಾಧ್ಯತೆ ಅಧಿಕವಾಗಿದೆ.
ವಿಮಾನ ಸಂಪರ್ಕ ಸ್ಥಗಿತ: ಇರಾನ್‌ನಲ್ಲಿ ಕೊರೊನಾಗೆ ಮಂಗಳವಾರ ಮತ್ತೆ ಮೂವರು ಬಲಿಯಾಗಿದ್ದು, ಮೃತರ ಸಂಖ್ಯೆ 15ಕ್ಕೇರಿದೆ. ಈ ಹಿನ್ನೆಲೆಯಲ್ಲಿ ಇರಾನ್‌ನಿಂದ ಬರುವ ಮತ್ತು ಹೋಗುವ ಎಲ್ಲ ವಿಮಾನಗಳ ಸಂಚಾರಗಳನ್ನೂ ಯುಎಇ ನಿಷೇಧಿಸಿದೆ. ಸೋಂಕು ವ್ಯಾಪಿಸುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ.
ಈ ನಡುವೆ, ಚೀನದಲ್ಲಿ ಮಂಗಳವಾರ 71 ಮಂದಿ ಮೃತಪಟ್ಟಿದ್ದು, ಇಲ್ಲಿ ಮೃತರ ಸಂಖ್ಯೆ 2,663ಕ್ಕೇರಿದೆ. ಜಗತ್ತಿನಾದ್ಯಂತ ಒಟ್ಟಾರೆ 80 ಸಾವಿರ ಮಂದಿಗೆ ಕೊರೊನಾ ಸೋಂಕು ತಗುಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
4ನೇ ಪ್ರಯಾಣಿಕ ಸಾವು: ಜಪಾನ್‌ನ ಕ್ರೂಸ್ ನೌಕೆಯಲ್ಲಿದ್ದ 4ನೇ ಪ್ರಯಾಣಿಕ ಮಂಗಳವಾರ ಸಾವಿಗೀಡಾಗಿದ್ದು, ಡೈಮಂಡ್ ಪ್ರಿನ್ಸೆಸ್ ನೌಕೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 700ಕ್ಕೇರಿದೆ. ಇದೇ ವೇಳೆ, ಹಡಗಿನಲ್ಲಿರುವ ಭಾರತೀಯರನ್ನು ಸ್ವದೇಶಕ್ಕೆ ವಾಪಸ್ ಕರೆತರಲು ವಿಶೇಷ ವಿಮಾನ ವನ್ನು ವ್ಯವಸ್ಥೆ ಮಾಡಲಾಗಿದ್ದು, ಸದ್ಯದಲ್ಲೇ ಜಪಾನ್‌ಗೆ ತೆರಳಲಿದೆ ಎಂದು ಭಾರತೀಯ ರಾಯಭಾರ ಕಚೇರಿ ಹೇಳಿದೆ.
ಸಚಿವರಿಗೇ ಕೊರೊನಾ!
ಅಚ್ಚರಿಯ ಬೆಳವಣಿಗೆಯೆಂಬಂತೆ, ಇರಾನ್‌ನ ಉಪ ಆರೋಗ್ಯ ಸಚಿವ ಹರಿರ್ಚಿ ಅವರಿಗೇ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಸೋಮವಾರ ವೈರಸ್ ಕುರಿತು ಸುದ್ದಿಗೋಷ್ಠಿ ನಡೆಸುತ್ತಿದ್ದಾಗ, ಸಚಿವ ಹರಿರ್ಚಿ ಅವರು ಕೆಮ್ಮುತ್ತಿರುವುದು ಮತ್ತು ಬೆವರುತ್ತಿರುವುದು ಗಮನಕ್ಕೆ ಬಂದಿತ್ತು. ಅವರ ರಕ್ತದ ಪರೀಕ್ಷೆ ನಡೆಸಿದಾಗ, ಕೊರೊನಾ ಇರುವುದು ದೃಢಪಟ್ಟಿದೆ ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.