ಭಾರತ ಫುಟ್‌ಬಾಲ್ ಕಂಡ ಸರ್ವಶ್ರೇಷ್ಠ ಆಟಗಾರ ಸುನಿಲ್ ಚೆಟ್ರಿ ತಮ್ಮ 39ನೇ ವರ್ಷದಲ್ಲಿ ಅಂತಾರಾಷ್ಟ್ರೀಯ ವೃತ್ತಿಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಜೂ.6ಕ್ಕೆ ಕುವೈಟ್ ವಿರುದ್ಧ ಆಡಲಿರುವುದೇ ಅವರ ಕೊನೆಯ ಅಂತಾರಾಷ್ಟ್ರೀಯ ಪಂದ್ಯ. ಚೆಟ್ರಿಯನ್ನು ಭಾರತ ಫುಟ್‌ಬಾಲ್ ಕಂಡ ಸಚಿನ್ ತೆಂಡುಲ್ಕರ್ ಎಂದೇ ಬಣ್ಣಿಸಬಹುದು. 24 ವರ್ಷಗಳ ಕ್ರಿಕೆಟ್ ಬದುಕಿನಲ್ಲಿ ತೆಂಡುಲ್ಕರ್ ದೇವರ ಪಟ್ಟಕ್ಕೇರಿದ್ದರು!
ಫುಟ್‌ಬಾಲ್‌ನಲ್ಲಿ ಚೆಟ್ರಿ ಅಂತಹದ್ದೇ ಪ್ರಭಾವ ಬೀರಿದ್ದಾರೆ. ಚೆಟ್ರಿ ನಿವೃತ್ತಿಯಾಗಲಿದ್ದರೂ, ಅವರು ಮಾಡಿರುವ ಸಾಧನೆಗಳು, ಉಳಿಸಿರುವ ನೆನಪುಗಳು ಎಂದಿಗೂ ನಿವೃತ್ತಿಯಾಗುವುದಿಲ್ಲ. ಅವರ ಸಾಧನೆಗಳ ಚಿತ್ರಣ ಇಲ್ಲಿದೆ
ದೇಶದ ಪರ ಗರಿಷ್ಠ ಗೋಲು, ಗರಿಷ್ಠ ಪಂದ್ಯ
ಜೂ.12, 2005ರಂದು ಅಂತಾರಾಷ್ಟ್ರೀಯ ಫುಟ್‌ಬಾಲ್‌ಗೆ ಸುನಿಲ್ ಚೆಟ್ರಿ ಪದಾರ್ಪಣೆ ಮಾಡಿದರು. ಪಾಕಿಸ್ತಾನದ ವಿರುದ್ಧದ ಮೊದಲ ಪಂದ್ಯದಲ್ಲೇ ಗೋಲು ಹೊಡೆದ ಅವರು, ತಮ್ಮ 150ನೇ ಪಂದ್ಯದಲ್ಲಿ ಅಫ್ಘಾನಿಸ್ಥಾನದ ವಿರುದ್ಧವೂ ಗೋಲು ಹೊಡೆಯುವ ಮೂಲಕ ಗೋಲಿನ ಯಾನವನ್ನು ಮುಂದುವರಿಸಿದರು. ಒಟ್ಟು 94 ಗೋಲು ಬಾರಿಸಿರುವ ಅವರು ದೇಶದ ಪರ ಗರಿಷ್ಠ ಗೋಲು ಗಳಿಸಿರುವ ಆಟಗಾರ. ಹಾಗೆಯೇ ಗರಿಷ್ಠ ಪಂದ್ಯಗಳನ್ನಾಡಿದ ಆಟಗಾರನೂ ಹೌದು. ಅವರ ಸಾಧನೆಯ ತೂಕ ಹೇಗಿದೆಯೆಂದರೆ, ಗೋಲಿನ ಲೆಕ್ಕಾಚಾರದಲ್ಲಿ ಚೆಟ್ರಿ ಅನಂತರದ ಸ್ಥಾನದಲ್ಲಿರುವ ಐ.ಎಂ.ವಿಜಯನ್ (32), ಭೈಚುಂಗ್ ಭುಟಿಯ (29), ಶಬ್ಬೀರ್ ಅಲಿ (6), ಗೌರಮಾಂಗಿ ಸಿಂಗ್ (6), ಸಂದೇಶ್ ಜಿಂಗಾನ್ (5) ಅವರ ಗೋಲುಗಳನ್ನು ಒಟ್ಟು ಸೇರಿಸಿದರೂ (78), ಚೆಟ್ರಿಯನ್ನು ಸರಿಗಟ್ಟಲು ಸಾಧ್ಯವಿಲ್ಲ.
ಖೇಲ್‌ರತ್ನ, ಪದ್ಮಶ್ರೀ, ಅರ್ಜುನ ಪುರಸ್ಕೃತ
ಫುಟ್‌ಬಾಲ್ ಕ್ಷೇತ್ರದಲ್ಲಿ ಅಗಾಧ ಸಾಧನೆಗಾಗಿ ಚೆಟ್ರಿಗೆ 2011ರಲ್ಲಿ ಅರ್ಜುನ, 2019ರಲ್ಲಿ ಪದ್ಮಶ್ರೀ, 2021ರಲ್ಲಿ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗಳು ಸಂದಿವೆ. 2022ರಲ್ಲಿ ವಿಶ್ವ ಫುಟ್ಬಾಲ್ ಮಂಡಳಿ ಫಿಫಾ, “ಕ್ಯಾಪ್ಟನ್ ಫೆನ್ಟಾಸ್ಟಿಕ್’ ಹೆಸರಿನಲ್ಲಿ ಸಾಕ್ಷ್ಯಚಿತ್ರ ನಿರ್ಮಿಸಿ, ಫುಟ್ಬಾಲ್ ದಿಗ್ಗಜನಿಗೆ ಗೌರವ ಸಲ್ಲಿಸಿತ್ತು
22001ರಲ್ಲಿ ಕ್ಲಬ್ ಆಟ ಆರಂಭ
2001-02ರಲ್ಲಿ ಸಿಟಿ ಕ್ಲಬ್ ಡೆಲ್ಲಿ ಮೂಲಕ ಕ್ಲಬ್ ವೃತ್ತಿ ಬದುಕು ಆರಂಭಿಸಿರುವ ಚೆಟ್ರಿ ಬಳಿಕ, ಮೋಹನ್ ಬಾಗನ್, ಈಸ್ಟ್ ಬೆಂಗಾಲ್, ಬೆಂಗಳೂರು ಎಫ್ಸಿ ಮುಂತಾದ ಕ್ಲಬ್‌ಗಳ ಪರ ಆಡಿದ್ದಾರೆ. ಅಮೆರಿಕದ ಮೇಜರ್ ಲೀಗ್ ಸಾಕರ್, ಪೋರ್ಚುಗಲ್‌ನ ಕ್ಲಬ್‌ವೊಂದರ ಪರವೂ ಆಡಿದ್ದಾರೆ.
3 ನೆಹರೂ ಕಪ್, 3 ಸ್ಯಾಫ್ ಗೆಲುವು
2012ರಲ್ಲಿ ಭಾರತ ತಂಡದ ನಾಯಕರಾದ ಚೆಟ್ರಿ, ಅನೇಕ ಟ್ರೋμ ಗೆಲುವುಗಳಿಗೆ ಕಾರಣವಾಗಿದ್ದಾರೆ. 2007, 2009 ಮತ್ತು 2012ರಲ್ಲಿ ಭಾರತ ತಂಡ ನೆಹರೂ ಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2015, 2021 ಮತ್ತು 2023ರಲ್ಲಿ ಭಾರತ, ಸೌತ್ ಏಷ್ಯನ್ ಫುಟ್‌ಬಾಲ್ ಫೆಡರೇಶನ್ (ಸ್ಯಾಫ್) ಚಾಂಪಿಯನ್‌ಶಿಪ್ ಗೆದ್ದಿತ್ತು. 2023ರಲ್ಲಿ ಭಾರತ, ಅಂತಾರಾಷ್ಟ್ರೀಯ ಫುಟ್‌ಬಾಲ್ ರ್ಯಾಕಿಂಗ್‌ನಲ್ಲಿ 100ರೊಳಗೆ ಸ್ಥಾನ ಪಡೆದಿತ್ತು.
ಬೆಂಗಳೂರು ಪರ 2 ಐಲೀಗ್, ಒಮ್ಮೆ ಐಎಸ್‌ಎಲ್ ಪ್ರಶಸ್ತಿ, ವಿಜಯ
2013-14ರಲ್ಲಿ ಬೆಂಗಳೂರು ಎಫ್ಸಿ ಸೇರಿಕೊಂಡ ಅವರು, ಮೋಹನ್ ಬಾಗನ್ ವಿರುದ್ಧ ಬದಲಿ ಆಟಗಾರನಾಗಿ ಪದಾರ್ಪಣೆ ಪಂದ್ಯ ಆಡಿದ್ದರು. ಅಂದಿನ ಪಂದ್ಯ 1-1ರಿಂದ ಡ್ರಾಗೊಂಡಿತ್ತು. ಅಂದಿನಿಂದ ಇಂದಿನವರೆಗೆ ಬೆಂಗಳೂರು ಪರ ಒಟ್ಟಾರೆ 155 ಪಂದ್ಯಗಳನ್ನಾಡಿರುವ ಚೆಟ್ರಿ, 61 ಗೋಲ್ ಗಳನ್ನು ಬಾರಿಸಿದ್ದಾರೆ. ಇಲ್ಲದೆ, 2014, 2016ರಲ್ಲಿ ಐಲೀಗ್, 2018ರಲ್ಲಿ ಸೂಪರ್ ಕಪ್, 2019ರಲ್ಲಿ ಐಎಸ್‌ಎಲ್ ಪ್ರಶಸ್ತಿಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ.
ಚೆಟ್ರಿ ಹೆಜ್ಜೆಗಳು
ವಿವಿಧ ಕ್ಲಬ್ ಪರ 2001 ರಲ್ಲಿ ಡೆಲ್ಲಿ ಸಿಟಿ ಕ್ಲಬ್ ಮೂಲಕ ಕ್ಲಬ್ ಜೀವನ ಆರಂಭ.
2002ರಲ್ಲಿ ಮೋಹನ್ ಬಗಾನ್ ಕ್ಲಬ್ ಸೇರಿಕೊಂಡರು.
2013, ಜು.19ರಂದು ಬೆಂಗಳೂರು ಕ್ಲಬ್ ಸೇರ್ಪಡೆ.
2015ರಲ್ಲಿ ಮುಂಬೈ ಸಿಟಿಯನ್ನು ಕೂಡಿಕೊಂಡರು. ಆಗವರಿಗೆ ಗರಿಷ್ಠ 1.2 ಕೋಟಿ ರೂ. ಹಣ ನೀಡಲಾಗಿತ್ತು. ಅದೇ ವರ್ಷ ಮತ್ತೆ ಬೆಂಗಳೂರಿಗೆ ಮರಳಿದರು.
ಭಾರತದ ಪರ
2004 ಮಾ.30ರಂದು ಭಾರತ ಅ-20 ತಂಡದ ಪರ ಆಡಿದರು.
2005 ಜೂ.12ರಂದು ಪಾಕಿಸ್ಥಾನದ ವಿರುದ್ಧ ಅಂ.ರಾ. ವೃತ್ತಿಜೀವನ ಆರಂಭ.
2007, ಆ.17ರಂದು ನೆಹರೂ ಕಪ್ ಮೂಲಕ ಮೊದಲ ಅಂ.ರಾ. ಕೂಟದಲ್ಲಿ ಆಟ.
2007ರಲ್ಲಿ ಫಿಫಾ ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ ಆಟ.
2008ರಲ್ಲಿ ಸ್ಯಾಫ್ ಕಪ್‌ನಲ್ಲಿ ಆಟ. ನೇಪಾಲದ ವಿರುದ್ಧ ಗೋಲು ದಾಖಲು.
2012, ಮಾ.11ರಿಂದ ಭಾರತದ ನಾಯಕರಾಗಿ ಆಟ ಆರಂಭ.
2018, ಜೂನ್‌ನಲ್ಲಿ ತೈಪೆ ವಿರುದ್ಧ ಹ್ಯಾಟ್ರಿಕ್ ಗೋಲು.
2022 ಮಾ.28ರಂದು ಕಿರ್ಗಿಸ್ಥಾನದ ವಿರುದ್ಧ ತಮ್ಮ 85ನೇ ಗೋಲು ದಾಖಲು.
2023 ಜೂ.18ರಂದು ಹೀರೋ ಇಂಟರ್‌ಕಾಂಟಿ ನೆಂಟಲ್ ಕಪ್ ಗೆಲುವು.
2024 ಮೇ 16ಕ್ಕೆ ನಿವೃತ್ತಿ ಘೋಷಣೆ.
ದಾಖಲೆಗಳು
ವಿಶ್ವದ ಸಾರ್ವಕಾಲಿಕ ಗರಿಷ್ಠ ಅಂತಾರಾಷ್ಟ್ರೀಯ ಗೋಲು ಸಾಧಕರ ಪೈಕಿ ಚೆಟ್ರಿ 4ನೇ ಸ್ಥಾನದಲ್ಲಿದ್ದಾರೆ. ರೊನಾಲ್ಡೊ (128), ಅಲಿ ಡಾಯೆಯಿ (108), ಮೆಸ್ಸಿ (106) ಮೊದಲ ಮೂರು ಸ್ಥಾನದಲ್ಲಿದ್ದಾರೆ.
ಇಂಡಿಯನ್ ಸೂಪರ್ ಲೀಗ್‌ನಲ್ಲಿ 155 ಪಂದ್ಯವಾಡಿರುವ ಚೆಟ್ರಿ 61 ಗೋಲು ಗಳಿಸಿ, ಗರಿಷ್ಠ ಗೋಲು ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ.
ರಾಷ್ಟ್ರೀಯ ತಂಡ ಮತ್ತು ಕ್ಲಬ್‌ಗಳು ಸೇರಿ ಒಟ್ಟಾರೆ 515 ಪಂದ್ಯಗಳನ್ನಾಡಿ, 252 ಗೋಲ್‌ಗಳನ್ನು ಬಾರಿಸಿದ್ದಾರೆ.
ಚೆಟ್ರಿ ಒಟ್ಟು 3 ಖಂಡಗಳಲ್ಲಿ ಫುಟ್‌ಬಾಲ್ ಆಡಿದ್ದಾರೆ. ಭಾರತ (ಏಷ್ಯಾ), ಅಮೆರಿಕದ ಮೇಜರ್ ಲೀಗ್ ಸಾಕ್ಕರ್(ಉ.ಅಮೆರಿಕ), ಪೋರ್ಚುಗಲ್‌ನ ನ್ಪೋರ್ಟಿಂಗ್ ಕ್ಲಬ್ ಡೀ ಪೋರ್ಚುಗಲ್ (ಯೂರೋಪ್) ಪರ ಆಡುವ ಮೂಲಕ ಈ ಸಾಧನೆ ಮಾಡಿದ್ದಾರೆ.